ADVERTISEMENT

ಚಿಕ್ಕಬಳ್ಳಾಪುರ: ಕೃಷಿ ಕಾಯ್ದೆ ವಿರುದ್ಧ ಕಾವೇರಿದ್ದ ಹೋರಾಟ

ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಸಂಘಟನೆಗಳಿಂದ ನಡೆದಿದ್ದ ಜನಜಾಗೃತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 5:52 IST
Last Updated 20 ನವೆಂಬರ್ 2021, 5:52 IST
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ಕೃಷಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ ಸಂದರ್ಭ
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ಕೃಷಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ ಸಂದರ್ಭ   

ಚಿಕ್ಕಬಳ್ಳಾಪುರ: ಮೂರು ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನವದೆಹಲಿಯಲ್ಲಿ ಒಂದು ವರ್ಷದ ಹಿಂದೆ ಆರಂಭವಾದ ರೈತ ಹೋರಾಟದ ಕಾವು ಜಿಲ್ಲೆಯಲ್ಲಿಯೂ ವ್ಯಾಪಕವಾಗಿ ಪಸರಿಸಿತ್ತು.

ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿಯೂ ರೈತ ಹೋರಾಟದ ಹಬ್ಬಿತ್ತು. ಒಂದು ಕಡೆ ಎಡಪಕ್ಷಗಳು ಹಾಗೂ ಅವುಗಳ ನೇತೃತ್ವದ ಸಂಘಟನೆಗಳು ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಜನಜಾಗೃತಿ ಮೂಡಿಸಿದ್ದವು.

ರೈತ ಸಂಘಟನೆಗಳು ಸಹ ಈ ಹೋರಾಟದಲ್ಲಿ ಸಕ್ರಿಯವಾಗಿದ್ದವು. ಇದಕ್ಕೆ ಪ್ರಗತಿ ಪರ ಸಂಘಟನೆಗಳು ಕೈಜೋಡಿಸಿದ್ದವು. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸರಣಿ ಪ್ರತಿಭಟನೆ ಹೋರಾಟಗಳು ಸಹ ನಡೆದಿವೆ. ಸಂಯುಕ್ತ ರೈತ ಹೋರಾಟದ ಮುಖಂಡರ ಕರೆ ಆಧರಿಸಿ ಜಿಲ್ಲೆಯಲ್ಲಿಯೂ ಹೋರಾಟಗಳು ರೂಪಿತವಾಗಿವೆ.

ADVERTISEMENT

ರೈತ ಸಂಘಟನೆಗಳು ಕೃಷಿ ಕಾಯ್ದೆಯ ವಿರುದ್ಧ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿಯೇ ಹೋರಾಟಗಳನ್ನು ರೂಪಿಸಿದ್ದವು. ನವದೆಹಲಿಯ ರೈತ ಹೋರಾಟಕ್ಕೆ ನ.26ರಂದು ಒಂದು ವರ್ಷ ಪೂರ್ಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಹೋರಾಟದ ರೂಪುರೇಷೆಗಳು ತಯಾರಾಗಿದ್ದವು. ನ.26ರಂದು ಚದುಲಪುರ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ವಿವಿಧ ಸಂಘಟನೆಗಳು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಪ್ರಚಾರಾಂದೋಲನ ಸಹ ಹಮ್ಮಿಕೊಂಡಿದ್ದವು.

ಸಂಯುಕ್ತ ಹೋರಾಟ ಸಮಿತಿ ಕೈಗೊಳ್ಳುವ ತೀರ್ಮಾನಗಳಿಗೆ ಬದ್ಧವಾಗಿರುತ್ತೇವೆ. ನ.26ರ ಹೋರಾಟ ಮತ್ತು ತೀರ್ಮಾನಗಳ ಬಗ್ಗೆ ಸಮಿತಿ ಹೇಳುವಂತೆ ನಡೆಯುತ್ತೇವೆ ಎಂದು ಮುಖಂಡರು ನುಡಿಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.