
ಗುಡಿಬಂಡೆ: ಇಲ್ಲಿನ ಇತಿಹಾಸ ಪ್ರಸಿದ್ಧ ಸುರಸದ್ಮಗಿರಿ ಬೆಟ್ಟದ ರಸ್ತೆಯ ನಾಮಫಲಕದಲ್ಲಿ ‘ಸುರಂಸದಮಗಿರಿ ಬೆಟ್ಟ ರಸ್ತೆ’ ಎಂದು ತಪ್ಪಾಗಿ ಬರೆಯಲಾಗಿದೆ. ಈ ಮೂಲಕ ಗುಡಿಬಂಡೆ ಪಟ್ಟಣ ಪಂಚಾಯಿತಿಯು ಕನ್ನಡಕ್ಕೆ ಅವಮಾನ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕನ್ನಡ ಉಳಿಸಿ, ಬೆಳೆಸಲು ಎಲ್ಲೆಡೆ ಕನ್ನಡ ಡಿಂಡಿಮ ಮೊಳಗುತ್ತಿದ್ದರೆ ಗುಡಿಬಂಡೆ ಪಟ್ಟಣ ಪಂಚಾಯಿತಿ ನಾಮಫಲಕಗಳಲ್ಲಿ ಪಟ್ಟಣದ ಹಲವು ರಸ್ತೆಗಳ ಹೆಸರನ್ನು ತಪ್ಪಾಗಿ ಬರೆದು ಸುಂದರ ಮತ್ತು ಸರಳ ಭಾಷೆ ಕನ್ನಡಕ್ಕೆ ಅವಮಾನಿಸಿದೆ ಎಂದು ಸ್ಥಳೀಯರು ದೂರಿದರು.
ನಗರೋತ್ಥಾನ ಯೋಜನೆ ಅಡಿ ಪಟ್ಟಣದ 11 ವಾರ್ಡ್‌ಗಳಿದ್ದು, ಅದರಲ್ಲಿ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳ ನಾಮಫಲಕಗಳಲ್ಲಿ ಹೆಸರು ಬರೆಸಲಾಗಿದೆ. ಆದರೆ ಗುಡಿಬಂಡೆ ಸುರಸದ್ಮಗಿರಿ ಬೆಟ್ಟದ ರಸ್ತೆ ಎಂದು ನಮೂದಿಸುವ ಬದಲಿಗೆ, ಸುರಂಸದಮಗಿರಿ ಬೆಟ್ಟ ರಸ್ತೆ ಎಂದು ಬರೆಯಲಾಗಿದೆ. ಪಟ್ಟಣ ಪಂಚಾಯಿತಿ ಎಂದು ಬರೆಯುವ ಬದಲು ಪ್ಪಟಣ ಪಂಚಾಯಿತಿ ಎಂದು, ದೇವಸ್ಥಾನ ಬದಲಿಗೆ ದೇವಾಸ್ಥನ ರಸ್ತೆ ಎಂಬುದು ಸೇರಿದಂತೆ ನಾಮಫಲಕಗಳಲ್ಲಿ ಹಲವು ಕಾಗುಣಿತ ದೋಷಗಳನ್ನು ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಹೆಸರು ತಪ್ಪಾಗಿರುವುದರಿಂದ ಇಲ್ಲಿಗೆ ದೂರದ ಊರುಗಳಿಂದ ಬೆಟ್ಟ ವೀಕ್ಷಿಸಲು ಮತ್ತು ಚಾರಣಕ್ಕೆ ಬರುವ ಪ್ರವಾಸಿಗರು ಗೊಂದಲಕ್ಕೀಡಾಗುತ್ತಿದ್ದಾರೆ. ತಪ್ಪಾಗಿರುವ ನಾಮಫಲಕ ಕಂಡು ತಾವು ಕರ್ನಾಟಕದಲ್ಲಿದ್ದೇವೊ ಅಥವಾ ಅನ್ಯ ರಾಜ್ಯಗಳಲ್ಲಿದ್ದೇವೊ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ತಪ್ಪಾಗಿರುವ ನಾಮಫಲಕವನ್ನು ಒಂದು ವಾರದೊಳಗೆ ಪಟ್ಟಣ ಪಂಚಾಯಿತಿಯವರು ಸರಿಪಡಿಸಬೇಕು. ಇಲ್ಲವಾದಲ್ಲಿ ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ. ಜೊತೆಗೆ ಹೋರಾಟ ನಡೆಸುತ್ತೇವೆ
-ಬಿ. ಮಂಜುನಾಥ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.