ADVERTISEMENT

ಗುಡಿಬಂಡೆ: ಪರಿಶಿಷ್ಟರ ಮದುವೆಗೆ ಕಲ್ಯಾಣ ಮಂಟಪ ನೀಡದ ದೇವಾಲಯದ ಟ್ರಸ್ಟ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 6:14 IST
Last Updated 6 ನವೆಂಬರ್ 2022, 6:14 IST
ಗುಡಿಬಂಡೆ ಪಟ್ಟಣದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ ಬಳಿ ಟ್ರಸ್ಟ್ ಸಮಿತಿ ಮುಖಂಡ ಮಾಚಾವಲಹಳ್ಳಿ ವೆಂಕಟರಾಯಪ್ಪ ಅವರಿಂದ ಅಧಿಕಾರಿಗಳು ಹೇಳಿಕೆ ಪಡೆದರು
ಗುಡಿಬಂಡೆ ಪಟ್ಟಣದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ ಬಳಿ ಟ್ರಸ್ಟ್ ಸಮಿತಿ ಮುಖಂಡ ಮಾಚಾವಲಹಳ್ಳಿ ವೆಂಕಟರಾಯಪ್ಪ ಅವರಿಂದ ಅಧಿಕಾರಿಗಳು ಹೇಳಿಕೆ ಪಡೆದರು   

ಗುಡಿಬಂಡೆ: ಮುಜರಾಯಿ ಇಲಾಖೆ ಅಧೀನದಲ್ಲಿರುವ ಇಲ್ಲಿನ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಾಲಯದ ಕಲ್ಯಾಣ ಮಂಟಪವನ್ನು ಪರಿಶಿಷ್ಟರ ಮದುವೆಗೆ ನೀಡಲು ದೇಗುಲದ ಟ್ರಸ್ಟ್‌ ನಿರಾಕರಿಸಿದ ಪ್ರಕರಣ ವರದಿಯಾದ ಬೆನ್ನಲ್ಲೇ ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶನಿವಾರ ಎರಡೂ ಕಡೆಯವರಿಂದಲೂ ಹೇಳಿಕೆ ಪಡೆದುಕೊಂಡಿದ್ದಾರೆ.

ನ.3 ರಂದು ಗುಡಿಬಂಡೆ ತಾಲ್ಲೂಕು ಉಲ್ಲೋಡು ವ್ಯಾಪ್ತಿಯ ಬ್ರಾಹ್ಮಣರಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಕ್ಕೆ ಪಟ್ಟಣದ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿರುವ ಸಭಾಂಗಣವನ್ನು ಮದುವೆಗೆ ನೀ
ಡಲು ಟ್ರಸ್ಟ್ ನಿರಾಕರಿಸಿದ್ದಾರೆ. ಈ ಮೂಲಕ ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯದಲ್ಲಿ ಜಾತಿ ತಾರತಮ್ಯ ಮಾಡಲಾಗಿದೆ ಎಂದು ವಧುವಿನ ಅಣ್ಣ ಅವುಲಕೊಂಡಪ್ಪ ಅವರು ತಹಸೀಲ್ದಾರ್‌ಗೆ ದೂರು ನೀಡಿದ್ದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿ ಮತ್ತು ಪ್ರಭಾರ ಕಂದಾಯ ನಿರೀಕ್ಷಕ ಲಕ್ಷ್ಮಿನಾರಾಯಣ ಅವರು ದೇವಾಲಯದ ಟ್ರಸ್ಟ್ ಪದಾಧಿಕಾರಿಗಳು ಹಾಗೂ ದೂರದಾರ ಅವುಲಕೊಂಡಪ್ಪ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಟ್ರಸ್ ಮುಖಂಡ ಮಾಚಾವಲಹಳ್ಳಿ ವೆಂಕಟರಾಯಪ್ಪ ಮಾತನಾಡಿ, ‘ಬ್ರಾಹ್ಮಣರಹಳ್ಳಿ ಅವುಲಕೊಂಡಪ್ಪ ತಮ್ಮ ತಂಗಿ ಮದುವೆ ವಿಷಯವನ್ನು 15 ದಿನಗಳ ಹಿಂದೆ ಮೌಖಿಕವಾಗಿ ಪ್ರಸ್ತಾಪ ಮಾಡಿದ್ದರು. ಕಲ್ಯಾಣ ಮಂಟಪವನ್ನು ಬೇರೊಬ್ಬರು ಬುಕ್‌ ಮಾಡಿದ್ದು ನಿಮಗೆ ನೀಡಲು ಸಾಧ್ಯವಾಗುವುದಿಲ್ಲ. ಮದುವೆ ಬೇಕಾದರೆ ದೇವಾಲಯದ ಬಳಿ ಮಾಡಿಕೊಳ್ಳಿ ಎಂದು
ಹೇಳಿದ್ದೆ. ಕಲ್ಯಾಣ ಮಂಟಪ ಬುಕ್‌ ಮಾಡಿದವರು ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ರದ್ದು ಮಾಡಿದ್ದರು. ಇದರಿಂದ ನ.3 ರಂದು ಕಲ್ಯಾಣ ಮಂಟಪ ಖಾಲಿ ಇತ್ತು’ ಎಂದು ತಿಳಿಸಿದ್ದಾರೆ.

‘ನನ್ನ ತಂಗಿಯ ಮದುವೆಗೆ ದೇವಾಲಯದ ಕಲ್ಯಾಣ ಮಂಟಪ ನೀಡಲು ಟ್ರಸ್ಟ್‌ ಜಾತಿ ಕಾರಣಕ್ಕೆ ನಿರಾಕರಿಸಲಾಗಿದೆ. ನಮ್ಮ ಮನೆ ದೇವರು ಲಕ್ಷ್ಮಿವೆಂಕಟರಮಣ ಸ್ವಾಮಿ ಅಗಿರುವುದರಿಂದ ದೇವಾಲಯದ ಬಳಿ ಮದುವೆ ಕಾರ್ಯ ಮಾಡಿದ್ದೇವೆ. ಅಂದು ಕಲ್ಯಾಣ ಮಂಟಪ ಖಾಲಿ ಇತ್ತು. ಸರ್ಕಾರದ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಾಲಯದಲ್ಲಿ ಜಾತಿ ತಾರತಮ್ಯ ಮಾಡಲಾಗಿದೆ. ತಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು’ ಎಂದುದೂರುದಾರ ಅವುಲಕೊಂಡಪ್ಪ ಮನವಿ ಮಾಡಿದರು.

ಟ್ರಸ್ಟ್ ನ ಜಿ.ಲಕ್ಷ್ಮಿಪತಿ, ಶಾಂಭಮೂರ್ತಿ, ಎಂ.ಎನ್.ನಾಗರಾಜ್, ಅರ್ಚಕ ಶರತ್, ಬ್ರಾಹ್ಮಣರಹಳ್ಳಿ ಗ್ರಾಮದ ಅಮರಾವತಿ, ಮೂರ್ತಿ, ಹನುಮಂತಪ್ಪ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ದಾಸಪ್ಪ, ವಾರ್ಡನ್ ನರಸಿಂಹಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.