
ಗುಡಿಬಂಡೆ: ಅಮಾನಿ ಭೈರಸಾಗರ ಕೆರೆಕಟ್ಟೆ ಮೇಲೆ ರಾತ್ರಿ ಹೊತ್ತಿನಲ್ಲಿ ಜನಸಾಮಾನ್ಯರು ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಈ ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಲಾಗಿಲ್ಲ.
ಜೊತೆಗೆ ವಿದ್ಯುತ್ ಕಂಬಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಅವು ತುಕ್ಕು ಹಿಡಿದಿದ್ದು, ಯಾವಾಗ ಬಿದ್ದು, ಅಪಾಯ ತಂದೊಡ್ಡಲಿವೆಯೇ ಎಂಬ ಭೀತಿ ಎದುರಾಗಿದೆ. ಹೀಗಾಗಿ, ಈ ವಿದ್ಯುತ್ ಕಂಬಗಳನ್ನು ದುರಸ್ತಿಗೊಳಿಸಬೇಕು. ಈ ಮೂಲಕ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆದರೆ, ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದು ಜನರ ಆರೋಪ.
ಪಟ್ಟಣಕ್ಕೆ ಸಮೀಪವಿರುವ ಅಮಾನಿ ಭೈರಸಾಗರ ಕೆರೆಕಟ್ಟೆ ಮೇಲೆ ಸುಮಾರು 10 ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಅನುದಾನದ ಅಡಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು. ಆದರೆ, ಈವರೆಗೆ ಈ ವಿದ್ಯುತ್ ಕಂಬಗಳಲ್ಲಿ ದೀಪಗಳೇ ಉರಿದಿಲ್ಲ ಎನ್ನುತ್ತಾರೆ ಜನಸಾಮಾನ್ಯರು.
ಆಂದಿನ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬೀದಿದೀಪಗಳನ್ನು ಅಳವಡಿಸಲಾಗಿದೆ. ಬೀದಿದೀಪ ಅಳವಡಿಸಿದ ಕೆಲವು ದಿನಗಳು ಮಾತ್ರ ಅವುಗಳು ಬೆಳಕು ನೀಡುತ್ತಿದ್ದವು. ಆದರೆ, ಆ ಬಳಿಕ ಸ್ಥಗಿತಗೊಂಡ ಬೀದಿದೀಪಗಳಲ್ಲಿ ಇಂದಿನವರೆಗೆ ಬೆಳಕು ಕಂಡಿಲ್ಲ. ಅವುಗಳನ್ನು ದುರಸ್ತಿಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಕಾಸ್ ಮಾತನಾಡಿ, ಆ ಬೀದಿ ದೀಪಗಳನ್ನು ದುರಸ್ತಿ ಮಾಡಿಸಲು ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಸರ್ಕಾರದಿಂದ ಅನುದಾನ ಬಂದ ಕೂಡಲೇ ಅವುಗಳನ್ನು ದುರಸ್ತಿಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಕೆಡಿಪಿ ಸದಸ್ಯ ಎಚ್.ಪಿ. ಲಕ್ಷ್ಮಿನಾರಾಯಣ ಮಾತನಾಡಿ, ಕೆರೆಯು ಐತಿಹಾಸಿಕ ಪ್ರಸಿದ್ಧಿಯಾಗಿದೆ. ಕೆರೆಕಟ್ಟೆ ಮೇಲೆ ಅಳವಡಿಸಿರುವ ಬೀದಿದೀಪಗಳು ಕೆಟ್ಟು ನಿಂತಿದ್ದು, ಅವುಗಳನ್ನು ಪಟ್ಟಣ ಪಂಚಾಯಿತಿಯವರು ದುರಸ್ತಿಗೊಳಿಸಬೇಕು. ಈ ಮೂಲಕ ಅವುಗಳು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.