ADVERTISEMENT

ಶಾಲೆಗಳ ಟ್ಯಾಂಕ್ ಸ್ವಚ್ಛತೆ; ವರದಿಗೆ ಸೂಚನೆ

ಅತಿಸಾರ ತಡೆ; ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಸಿಇಒ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 2:41 IST
Last Updated 9 ಜುಲೈ 2025, 2:41 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸಭೆಯಲ್ಲಿ ಅತಿಸಾರ ಭೇದಿ ನಿಯಂತ್ರಣ ಜಾಗೃತಿ ಕುರಿತ ಕರಪತ್ರಗಳನ್ನು ಅಧಿಕಾರಿಗಳು ಬಿಡುಗಡೆ ಮಾಡಿದರು  
ಚಿಕ್ಕಬಳ್ಳಾಪುರದಲ್ಲಿ ನಡೆದ ಸಭೆಯಲ್ಲಿ ಅತಿಸಾರ ಭೇದಿ ನಿಯಂತ್ರಣ ಜಾಗೃತಿ ಕುರಿತ ಕರಪತ್ರಗಳನ್ನು ಅಧಿಕಾರಿಗಳು ಬಿಡುಗಡೆ ಮಾಡಿದರು     

ಚಿಕ್ಕಬಳ್ಳಾಪುರ: ಶಾಲೆಗಳಲ್ಲಿನ ನೀರಿನ ಸಂಗ್ರಹ ಟ್ಯಾಂಕ್‌ಗಳನ್ನು ಸರಿಯಾದ ರೀತಿಯಲ್ಲಿ ನಿಯೋಜಿತ ಸಿಬ್ಬಂದಿ ಸ್ವಚ್ಛ ಮಾಡುತ್ತಿದ್ದಾರೆಯೇ, ಇಲ್ಲವೇ ಎನ್ನುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಸೂಚಿಸಿದರು. 

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಅತಿಸಾರ ನಿಲ್ಲಿಸಿ ಅಭಿಯಾನದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.

ಅತಿಸಾರ ಭೇದಿ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಸ್ವಚ್ಛತೆ, ಶುದ್ದ ಕುಡಿಯುವ ನೀರಿನ ಸೇವನೆಗೆ ಆದ್ಯತೆ ನೀಡಬೇಕು. ಮುಖ್ಯವಾಗಿ 5 ವರ್ಷದ ಒಳಗಿನ ಮಕ್ಕಳಿಗೆ ಅತಿಸಾರ ಭೇದಿ ಬರದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ADVERTISEMENT

ಅಂಗನವಾಡಿಗಳು, ಶಾಲಾ ಕಾಲೇಜುಗಳು, ಸರ್ಕಾರಿ ವಸತಿ ಶಾಲೆಗಳಲ್ಲಿನ ನೀರು ಸಂಗ್ರಹ ಟ್ಯಾಂಕ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕಾಲಬದ್ದವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆಯೇ ಇಲ್ಲವಾ ಎಂದು ತಿಳಿದುಕೊಳ್ಳಲು ಛಾಯಾಚಿತ್ರ ಸಮೇತ ವರದಿ ಪಡೆಯಬೇಕು. ಆರೋಗ್ಯ ಅಧಿಕಾರಿಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನಾನು ಸಹ ಈ ವಿಚಾರವಾಗಿ ಪರಿಶೀಲಿಸಲು ಶಾಲೆಗಳಿಗೆ ಭೇಟಿ ನೀಡುವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಐದು ವರ್ಷದ ಒಳಗಿನ 99,144 ಮಕ್ಕಳು ಇದ್ದಾರೆ.  1,25,500 ಒಆರ್‌ಎಸ್ ಪೊಟ್ಟಣಗಳ ಅಗತ್ಯ ಮಕ್ಕಳಿಗೆ ಇದೆ. ಪ್ರಸ್ತುತ 1,47,743 ಪೊಟ್ಟಣಗಳ ದಾಸ್ತಾನು ಜಿಲ್ಲೆಯಲ್ಲಿದೆ. ಅದೇ ರೀತಿ 57,700 ಜಿಂಕ್ ಮಾತ್ರೆಗಳು ಜಿಲ್ಲೆಯ ಮಕ್ಕಳಿಗೆ ಅಗತ್ಯವಿದೆ. 3,59,150 ಜಿಂಕ್ ಮಾತ್ರೆಗಳು ಲಭ್ಯವಿದೆ ಎಂದು ಹೇಳಿದರು.

ಜಿಂಕ್ ಮಾತ್ರೆಗಳನ್ನು ಅತಿಸಾರ ಭೇದಿ ಪ್ರಕರಣಗಳು ಕಂಡು ಬರುವ ಪ್ರದೇಶಗಳಲ್ಲಿ ಮಾತ್ರ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಅತಿಸಾರ ಭೇದಿಯಿಂದ ಮಕ್ಕಳ ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತರಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎಸ್. ಮಹೇಶ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಮಕ್ಕಳ ತಜ್ಞರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.