ADVERTISEMENT

ಆರೋಗ್ಯ ಸಚಿವರ ತವರಿಗೆ 3 ‘ನಮ್ಮ ಕ್ಲಿನಿಕ್’

ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿಯಲ್ಲಿ ಜಾಗ ಗುರುತಿಸಿದ ಆರೋಗ್ಯ ಇಲಾಖೆ

ಡಿ.ಎಂ.ಕುರ್ಕೆ ಪ್ರಶಾಂತ
Published 1 ನವೆಂಬರ್ 2022, 6:37 IST
Last Updated 1 ನವೆಂಬರ್ 2022, 6:37 IST
....
....   

ಚಿಕ್ಕಬಳ್ಳಾಪುರ: ನಗರ, ಪಟ್ಟಣ ಪ್ರದೇಶಗಳ ಬಡವರು ಹಾಗೂ ಕೊಳೆಗೇರಿ ನಿವಾಸಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸುತ್ತಿರುವ ‘ನಮ್ಮ ಕ್ಲಿನಿಕ್‌’ ಯೋಜನೆ ಜಿಲ್ಲೆಯಲ್ಲೂ ಅನುಷ್ಠಾನಗೊಳ್ಳುತ್ತಿದ್ದು, ಮೂರು ಕ್ಲಿನಿಕ್‌ಗಳು ಆರಂಭವಾಗಲಿವೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈಗಾಗಲೇ ‘ನಮ್ಮ ಕ್ಲಿನಿಕ್‌’ಗೆ ಜಾಗ ಸಹ ಗುರುತಿಸಿದೆ. ನ.8ರ ಒಳಗೆ ರಾಜ್ಯದ 438 ಕಡೆಗಳಲ್ಲಿ ‘ನಮ್ಮ ಕ್ಲಿನಿಕ್’ ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ತಿಳಿಸಿದ್ದಾರೆ. ಆರೋಗ್ಯ ಸಚಿವರ ತವರು ಜಿಲ್ಲೆಗೆ ಮೂರು ‘ನಮ್ಮ ಕ್ಲಿನಿಕ್‌’ಗಳು ಮಾತ್ರ ಮಂಜೂರಾಗಿವೆ.

ಚಿಕ್ಕಬಳ್ಳಾಪುರ ನಗರದ ಎಚ್‌.ಎಸ್.ಗಾರ್ಡನ್ ವ್ಯಾಪ್ತಿಯಲ್ಲಿ, ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದ ಬಳಿಯ ‍ಪುರಸಭೆ ಕಟ್ಟಡದಲ್ಲಿ (ಈ ಹಿಂದೆ ಇಲ್ಲಿ ಕೋವಿಡ್ ಕ್ಲಿನಿಕ್ ಇತ್ತು) ಹಾಗೂ ಚಿಂತಾಮಣಿ ನಗರದ ಮಾರುಕಟ್ಟೆ ಸಮೀಪದ ಪುರಸಭೆ ಕಟ್ಟಡದಲ್ಲಿ ‘ನಮ್ಮ ಕ್ಲಿನಿಕ್‘
ಆರಂಭವಾಗಲಿದೆ.

ADVERTISEMENT

ಬಾಗೇಪಲ್ಲಿ ಮತ್ತು ಚಿಂತಾಮಣಿಯಲ್ಲಿ ಜಾಗ ಅಂತಿಮವಾಗಿದೆ. ಚಿಕ್ಕಬಳ್ಳಾಪುರದ ಎಚ್‌.ಎಸ್.ಗಾರ್ಡನ್‌ನಲ್ಲಿ ‘ನಮ್ಮ ಕ್ಲಿನಿಕ್’ ಆರಂಭಕ್ಕೆ ಯೋಜಿಸಲಾಗಿದೆ. ಇಲ್ಲಿ ಸರ್ಕಾರಿ ಕಟ್ಟಡ ದೊರೆಯದ ಕಾರಣ ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ಕ್ಲಿನಿಕ್ ಕಾರ್ಯಾರಂಭ ಮಾಡುವ ಆಲೋಚನೆ ಆರೋಗ್ಯ ಇಲಾಖೆಗೆ ಇದೆ.

ದೆಹಲಿಯಲ್ಲಿ ಎಎಪಿ ಸರ್ಕಾರ ಆರಂಭಿಸಿರುವ ಮೊಹಲ್ಲಾ ಕ್ಲಿನಿಕ್‌ ಮಾದರಿಯಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ‘ನಮ್ಮ ಕ್ಲಿನಿಕ್‌’ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಆರ್ಥಿಕವಾಗಿ ದುರ್ಬಲರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ‘ನಮ್ಮ ಕ್ಲಿನಿಕ್‌’ಗಳನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಕ್ಲಿನಿಕ್‌ ಆರಂಭವಾಗಿದೆ. ಈ ವರ್ಷಾಂತ್ಯದ ವೇಳೆಗೆ ರಾಜ್ಯದಾದ್ಯಂತ ‘ನಮ್ಮ ಕ್ಲಿನಿಕ್‌’ಗಳು ಆರಂಭವಾಗುವ ನಿರೀಕ್ಷೆ ಇದೆ.

ಎಚ್‌.ಎಸ್.ಗಾರ್ಡನ್‌ನಲ್ಲಿ ಕ್ಲಿನಿಕ್

ಜಿಲ್ಲೆಯಲ್ಲಿ ಮೂರು ನಮ್ಮ ಕ್ಲಿನಿಕ್ ಆರಂಭವಾಗಲಿದೆ. ಚಿಕ್ಕಬಳ್ಳಾಪುರದ ಎಚ್‌.ಎಸ್.ಗಾರ್ಡನ್‌ನಲ್ಲಿ ಬಾಡಿಗೆ ಕಟ್ಟಡ ನೋಡಲಾಗುತ್ತಿದೆ. ಬಾಗೇಪಲ್ಲಿ ಮತ್ತು ಚಿಂತಾಮಣಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಕಟ್ಟಡ ದೊರೆತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ತಿಳಿಸಿದರು.

ಬೆಳಿಗ್ಗೆ 9 ರಿಂದ 4ರವರೆಗೆ ಕ್ಲಿನಿಕ್‌ಗಳು ಕೆಲಸ ನಿರ್ವಹಿಸಲಿವೆ. ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಶುಶ್ರೂಷಕಿಯರು, ಫಾರ್ಮಸಿಸ್ಟ್ ಆಸ್ಪತ್ರೆಯಲ್ಲಿ ಇರಲಿದ್ದಾರೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಕೂಲಿ ಕಾರ್ಮಿಕರು ತೆರಳುವುದು ಕಷ್ಟ. ಅವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ತಾಲ್ಲೂಕು ಕೇಂದ್ರಗಳಲ್ಲಿ ಕ್ಲಿನಿಕ್ ಕಾರ್ಯಾರಂಭ ಮಾಡುತ್ತಿದೆ. 2011ರ ಜನಸಂಖ್ಯೆ ಆಧಾರದ ಮೇಲೆ ಕ್ಲಿನಿಕ್‌ಗಳು ಆರಂಭವಾಗುತ್ತಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.