ಚಿಂತಾಮಣಿ: ಉತ್ತರ ಭಾರತದ ಪ್ರವಾಸಕ್ಕೆ ತೆರಳಿದ್ದ ನಗರದ ಎರಡು ವರ್ತಕರ ಕುಟುಂಬಗಳ ಆರು ಮಂದಿ ಹಿಮಾಚಲ ಪ್ರದೇಶದ ಪ್ರವಾಹದಲ್ಲಿ ಸಿಲುಕಿದ್ದಾರೆ.
ಟ್ರಾವೆಲ್ ಏಜೆನ್ಸಿಯೊಂದು ರಾಜ್ಯದ 105 ಮಂದಿಯನ್ನು ಉತ್ತರ ಭಾರತದ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ. ಇದರಲ್ಲಿ ನಗರದ ಗ್ರೇಟ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಮಾಲೀಕ ಸುಜಯ್ ಕುಮಾರ್, ಪತ್ನಿ, ಮಗಳು ಮತ್ತು ಚೌಡೇಶ್ವರಿ ಎಲೆಕ್ಟ್ರಾನಿಕ್ಸ್ ಮಾಲೀಕ ರಘುನಾಥರೆಡ್ಡಿ ಕುಟುಂಬದ ಮೂವರು ಪ್ರವಾಸಕ್ಕೆ ತೆರಳಿದ್ದಾರೆ.
ಭಾನುವಾರ ಕುಲು ಮನಾಲಿಯ ಪಂಚತಾರಾ ಹೋಟೆಲ್‌ನಲ್ಲಿ ಈ ಕುಟುಂಬಗಳು ತಂಗಿವೆ. ಹಿಮಾಚಲ ಪ್ರದೇಶದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಹೋಟೆಲ್‌ನ ನೆಲ ಅಂತಸ್ತಿಗೆ ಮಳೆ ನೀರು ನುಗ್ಗಿದೆ.
‘ಹೋಟೆಲ್‌ನಿಂದ ಯಾರಿಗೂ ಹೊರಬರಲು ಸಾಧ್ಯವಾಗುತ್ತಿಲ್ಲ. ವಿದ್ಯುತ್, ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ. ಊಟ, ತಿಂಡಿಗೂ ಪರದಾಡುವಂತಾಗಿದೆ’ ಎಂದು ಸುಜಯ್ ಕುಮಾರ್ ಸೋಮವಾರ ನಗರದ ಸ್ನೇಹಿತರೊಬ್ಬರಿಗೆ ಮಾಹಿತಿ ರವಾನಿಸಿದ್ದಾರೆ.
‘ಮಂಗಳವಾರ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರಿಂದ ಅವರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಸುಜಯ್ ಕುಮಾರ್ ಅವರ ಸ್ನೇಹಿತ ಟಿ.ಎಸ್. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.