ADVERTISEMENT

ಚಿಕ್ಕಬಳ್ಳಾಪುರ | ಎಚ್‌.ಎನ್.ವ್ಯಾಲಿ; ಮಣ್ಣು ಪರೀಕ್ಷೆ

ನೀರಿನಲ್ಲಿ ಭಾರ ಲೋಹಗಳು; ಆಂತಕ ದೂರ ಮಾಡಲು ಮುಂದಾದ ಕೃಷಿ ಇಲಾಖೆ

ಡಿ.ಎಂ.ಕುರ್ಕೆ ಪ್ರಶಾಂತ
Published 10 ಅಕ್ಟೋಬರ್ 2025, 5:22 IST
Last Updated 10 ಅಕ್ಟೋಬರ್ 2025, 5:22 IST
ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಯತ್ತ ಹರಿಯುತ್ತಿರುವ ಎಚ್‌.ಎನ್.ವ್ಯಾಲಿ ನೀರು (ಸಂಗ್ರಹ ಚಿತ್ರ)
ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಯತ್ತ ಹರಿಯುತ್ತಿರುವ ಎಚ್‌.ಎನ್.ವ್ಯಾಲಿ ನೀರು (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಯ 44 ಕೆರೆಗಳಿಗೆ ಎಚ್‌.ಎನ್.ವ್ಯಾಲಿ ನೀರಾವರಿ ಯೋಜನೆಯಡಿ ತುಂಬಿಸಲಾಗುತ್ತಿದೆ. 

ಈ ಎರಡು ಹಂತದಲ್ಲಿ ಸಂಸ್ಕರಿಸಿದ ನೀರಿನಲ್ಲಿ ಭಾರ ಲೋಹಗಳು ಇವೆ. ಆದ್ದರಿಂದ ಮೂರು ಹಂತದಲ್ಲಿ ನೀರು ಶುದ್ಧೀಕರಿಸಿ ಕೆರೆಗಳಿಗೆ ಹರಿಸಬೇಕು ಎನ್ನುವ ಕೂಗು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿದೆ. 

ಎಚ್‌.ಎನ್.ವ್ಯಾಲಿ ಯೋಜನೆಗೆ ಒಳಪಟ್ಟ ಕೆರೆಗಳ ಸುತ್ತಲಿನ ಜಮೀನುಗಳಲ್ಲಿ ಈ ನೀರು ಹರಿದ ಪರಿಣಾಮ ಮಣ್ಣು ಕಲುಷಿತವಾಗಿದೆ. ಇಲ್ಲಿ ಬೆಳೆಯುವ ತರಕಾರಿಗಳು, ಹಣ್ಣುಗಳು ಗುಣಮಟ್ಟವಿಲ್ಲ. ಹುಲ್ಲು ಸಹ ರಾಸುಗಳಿಗೆ ಅಪಾಯ ತಂದೊಡ್ಡುತ್ತಿವೆ ಎಂದು ಶಾಶ್ವತ ನೀರಾವರಿ ಹೋರಾಟಗಾರರು, ರೈತ ಮುಖಂಡರು ಹಾಗೂ ಪರಿಸರವಾದಿಗಳು ಆರೋಪಿಸುತ್ತಿದ್ದಾರೆ. ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಸಹ ಇದಕ್ಕೆ ಧ್ವನಿಗೂಡಿಸಿದ್ದಾರೆ.

ADVERTISEMENT

ಈ ಅನುಮಾನಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಿದ್ದಾರೆ. ಎಚ್‌.ಎನ್.ವ್ಯಾಲಿ ನೀರು ಕೆರೆಗಳಿಗೆ ತುಂಬಿ ಹರಿಯುವ ಮತ್ತು ಕೆರೆಗಳ ಸುತ್ತಲಿನ ಜಮೀನುಗಳಲ್ಲಿನ ಮಣ್ಣು ಪರೀಕ್ಷೆಗೆ ಕೃಷಿ ಇಲಾಖೆ ಮುಂದಾಗಿದೆ. 

ಎಚ್‌.ಎನ್.ವ್ಯಾಲಿ ನೀರು ಹರಿದ ಮಣ್ಣಿನಲ್ಲಿ ಭಾರಲೋಹಗಳು ಇವೆಯೇ ಎನ್ನುವುದನ್ನು ತಿಳಿಯಲು ಪರೀಕ್ಷೆ ನಡೆಸಲಾಗುತ್ತಿದೆ. ಈ ಭಾಗವಾಗಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಎಚ್‌.ಎನ್.ವ್ಯಾಲಿ ನೀರು ಹರಿಯುವ 9 ಕೆರೆಗಳ ಸುತ್ತಲಿನ ಮತ್ತು ಯೋಜನೆಯ ನೀರು ಹರಿಯುವ ಹೊಲಗಳಲ್ಲಿ ಪರೀಕ್ಷೆಗೆ ಮಣ್ಣಿನ 65 ಮಾದರಿಗಳನ್ನು ಸಂಗ್ರಹಿಸಲಾಗಿದೆ.

‘ಕೆ.ಸಿ ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ನೀರು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪವಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಕೆರೆಗಳ ಸಮೀಪದ ಜಮೀನುಗಳಲ್ಲಿ ಬೆಳೆದ ಹುಲ್ಲು ಸೇವಿಸಿ ರಾಸುಗಳ ಹಾಲಿನ ಇಳುವರಿ ಕಡಿಮೆ ಆಗಿದೆ. ಹಣ್ಣು, ತರಕಾರಿಗಳ ಗುಣಮಟ್ಟ ಪರೀಕ್ಷಿಸಬೇಕು’ ಎಂದು ಏ.21ರಂದು ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಆಗ್ರಹಿಸಿದ್ದರು. 

‘ಕೆ.ಸಿ.ವ್ಯಾಲಿ, ಎಚ್‌.ಎನ್.ವ್ಯಾಲಿ ಯೋಜನೆ ನೀರು ತುಂಬಿರುವ ಕೆರೆಗಳ ಸುತ್ತ ಬೆಳೆಯುವ ಹಣ್ಣು, ತರಕಾರಿಗಳ ಗುಣಮಟ್ಟ ಪರೀಕ್ಷಿಸಬೇಕು. ನೀರಿನ ಬಗ್ಗೆ ಎದುರಾಗಿರುವ ಅನುಮಾನಗಳ ಬಗ್ಗೆ ಖಚಿತತೆ ಕಂಡುಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಹ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆ ಪ್ರಕಾರ ಸಣ್ಣ ನೀರಾವರಿ ಇಲಾಖೆಯಿಂದ ಎಚ್‌.ಎನ್.ವ್ಯಾಲಿ ಕೆರೆಗಳ ಪಟ್ಟಿಯನ್ನು ಕೃಷಿ ಇಲಾಖೆ ಪಡೆದಿದೆ. ಮಣ್ಣು ಪರೀಕ್ಷೆಗೆ ಹೆಜ್ಜೆ ಇಟ್ಟಿದೆ.

ನೀರಿನ ಗುಣಮಟ್ಟ ಪರೀಕ್ಷೆ: ಕೆ.ಸಿ ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗಿದ್ದು ಪಿ.ಎಚ್‌.ಮೌಲ್ಯ 8.5 ಇದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ನೀರಿನ ಗುಣಮಟ್ಟದ ಬಗ್ಗೆ ಮಾಸಿಕ ಪರೀಕ್ಷೆ ನಡೆಸಿ ವರದಿ ರೂಪಿಸುವಂತೆಯೂ ಸಚಿವರು ಸೂಚಿಸಿದ್ದರು. 

ಇಎಚ್‌ಎಸ್‌ಆರ್‌ಡಿಸಿ ಮತ್ತು ಐಐಎಸ್‌ಸಿ ಕೆರೆ ನೀರಿನ ಗುಣಮಟ್ಟ ಪರೀಕ್ಷೆ ನಡೆಸಿದೆ. ನಿಗದಿತ ಪ್ಯಾರಾ ಮೀಟರ್‌ಗಳಿಗೆ ಫಲಿತಾಂಶವು ಹೋಲಿಕೆಯಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ತಿಳಿಸಿತ್ತು. 

10 ದಿನಗಳಲ್ಲಿ ವರದಿ; ಎಲ್ಲ ಕೆರೆಗಳ ಬಳಿ ಪರೀಕ್ಷೆ

ಈಗ ಪರೀಕ್ಷೆಗೆ ರವಾನಿಸಿರುವ 65 ಮಣ್ಣಿನ ಮಾದರಿಗಳ ವರದಿಯು 10 ದಿನಗಳಲ್ಲಿ ಬರಲಿವೆ. ಎಚ್‌.ಎನ್.ವ್ಯಾಲಿ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ಜಿಲ್ಲೆಯ ಎಲ್ಲ ಕೆರೆಗಳ ಸುತ್ತಮುತ್ತ ಹಾಗೂ ಈ ಕೆರೆಗಳ ನೀರು ಹರಿದಿರುವ ರೈತರ ಜಮೀನುಗಳಲ್ಲಿನ ಮಣ್ಣಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. 

ಸಚಿವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈ ಬಗ್ಗೆ ಅನುಮಾನುಗಳು ವ್ಯಕ್ತವಾಗಿದ್ದವು. ಶಿಡ್ಲಘಟ್ಟ ಶಾಸಕರು ಈ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಆ ಕಾರಣದಿಂದ ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳ ಬಳಿಯ ಮಣ್ಣನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹಂತ ಹಂತವಾಗಿ ಎಚ್‌.ಎನ್.ವ್ಯಾಲಿ ಯೋಜನೆ ವ್ಯಾಪ್ತಿಯ ಉಳಿದ ಕೆರೆಗಳ ಬಳಿಯೂ ಮಣ್ಣಿನ ಮಾದರಿಗಳ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿವೆ.

ಎಚ್‌.ಎನ್.ವ್ಯಾಲಿ ನೀರು ತುಂಬುವ ಕೆರೆಗಳು

ಚಿಕ್ಕಬಳ್ಳಾಪುರ;ಕಂದವಾರ, ಅಮಾನಿಗೋಪಾಲಕೃಷ್ಣ ಕೆರೆ, ಜಾತವಾರ, ಹೊಸಹುಡ್ಯ, ಕೇಶವಾರ, ರಂಗಧಾಮ, ಶ್ರೀನಿವಾಸಸಾಗರ, ದಿಬ್ಬೂರು, ಕತ್ರಿಗುಪ್ಪೆ, ಚಿಕ್ಕ ಆವಲಹಳ್ಳಿ, ಅಂಗರೇಖನಹಳ್ಳಿ, ಲಕ್ಕನಾಯಕನಹಳ್ಳಿ, ಶೆಟ್ಟಿವರಹಳ್ಳಿ, ಮಾರ್ಗಾನಪರ್ತಿ, ಗೊಲ್ಲಹಳ್ಳಿ, ಮೊಗಲಿಕುಪ್ಪೆ, ಪೂರ್ಣಸಾಗರ, ಪಾಪಿನಾಯಕನಹಳ್ಳಿ, ರೆಡ್ಡಿಹಳ್ಳಿ, ಪೆರೇಸಂದ್ರ ಬೈರಸಾಗರ, ಪೆರೇಸಂದ್ರ ಹೊಸ ಕೆರೆ, ಚಲಕಪರ್ತಿ, ಕೃಷ್ಣಾಪುರ, ಹಿರಿಯಣ್ಣನಹಳ್ಳಿ, ಮುಷ್ಟೂರು ಕೆರೆ

ಗೌರಿಬಿದನೂರು;ವರವಣಿ ಇಟ್ಟಮ್ಮನಕೆರೆ, ಚಿಗಟಗೆರೆ ಚಿಕ್ಕಕೆರೆ, ಕುರುಬರಹಳ್ಳಿ, ಚಿಗಟಗೆರೆ ದೊಡ್ಡ ಕೆರೆ, ಗಂಗಸಂದ್ರ, ಮರಳೂರು ದೊಡ್ಡ ಕೆರೆ, ಇಡಗೂರು ದೊಡ್ಡ ಕೆರೆ, ಚಂದನೂರು ದೊಡ್ಡಕೆರೆ

ಗುಡಿಬಂಡೆ; ಸೋಮೇಶ್ವರ, ಸೋಮೇನಹಳ್ಳಿ, ತಿರುಮಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.