ADVERTISEMENT

ಬಸ್ ಶೆಲ್ಟರ್‌ನಲ್ಲಿ ಇದ್ದವರಿಗೆ ಮನೆ: ಜಿಲ್ಲಾಧಿಕಾರಿ ಆರ್. ಲತಾ ಅಭಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 1:56 IST
Last Updated 30 ಜನವರಿ 2021, 1:56 IST
ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದಲ್ಲಿ ವಾಸಿಸಲು ನೆಲೆ ಇಲ್ಲದ ಕುಟುಂಬದೊಂದಿಗೆ ಜಿಲ್ಲಾಧಿಕಾರಿ ಆರ್.ಲತಾ ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಮಾತುಕತೆ ನಡೆಸಿದರು
ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದಲ್ಲಿ ವಾಸಿಸಲು ನೆಲೆ ಇಲ್ಲದ ಕುಟುಂಬದೊಂದಿಗೆ ಜಿಲ್ಲಾಧಿಕಾರಿ ಆರ್.ಲತಾ ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಮಾತುಕತೆ ನಡೆಸಿದರು   

ಚಿಂತಾಮಣಿ: ವಾಸಿಸಲು ನೆಲೆ ಇಲ್ಲದೆ ಬಸ್ ಶೆಲ್ಟರ್‌ನಲ್ಲಿ ವಾಸವಾಗಿದ್ದ ತಾಯಿ ಹಾಗೂ ಮೂವರು ಹೆಣ್ಣು ಮಕ್ಕಳ ಕುಟುಂಬಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ.

ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದಲ್ಲಿ ಈ ಕುಟುಂಬವು ಬಾಡಿಗೆ ಮನೆಯಲ್ಲಿ ವಾಸವಿತ್ತು. ಮನೆಯವರು ಮನೆ ಖಾಲಿ ಮಾಡಿಸಿದ್ದರಿಂದ ಬೇರೆ ದಾರಿ ಕಾಣದೆ ಬಸ್ ಶೆಲ್ಟರ್‌ನಲ್ಲಿ ವಾಸವಾಗಿದ್ದರು. ಜಿಲ್ಲಾಧಿಕಾರಿಯವರು ಶುಕ್ರವಾರ ಅವರನ್ನು ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಸಂಪೂರ್ಣ ವಿವರಗಳನ್ನು ಪಡೆದುಕೊಂಡರು.

‘ತಾಯಿ ಮಂಜುಳಮ್ಮ ಕುಟುಂಬಕ್ಕೆ ಸ್ವಂತ ನಿವೇಶನವಿದೆ. ಗ್ರಾಮ ಪಂಚಾಯಿತಿಗೆ ಮಂಜೂರಾಗಿರುವ 20 ಮನೆಗಳಲ್ಲಿ ಆದ್ಯತೆ ಮೇರೆಗೆ ಒಂದು ಮನೆಯನ್ನು ಅವರಿಗೆ ನೀಡಲಾಗುವುದು. ₹1.25 ಲಕ್ಷ ಹಣ ಬರುತ್ತದೆ. ನರೇಗಾ ಯೋಜನೆಯಲ್ಲಿ ಮನೆಯನ್ನು ಕಟ್ಟಿಸಿಕೊಡಲಾಗುವುದು. ಮನೆ ಕಟ್ಟಿಕೊಡುವವರೆಗೂ ಗ್ರಾಮದಲ್ಲೇ ಒಂದು ಬಾಡಿಗೆ ಮನೆಯನ್ನು ಮಾಡಿಕೊಡಲಾಗುವುದು. ಬಾಡಿಗೆ ಹಣವನ್ನು ಸಹ ಜಿಲ್ಲಾಡಳಿತವೇ ಭರಿಸುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬಳು ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯನ್ನು ವ್ಯಾಸಂಗ ಮಾಡುತ್ತಿದ್ದಾಳೆ. ಉಳಿದ ಇಬ್ಬರಿಗೆ ಅವರು ವ್ಯಾಸಂಗ ಮಾಡುತ್ತಿರುವ ಶಾಲೆಯ ಸಮೀಪವಿರುವ ವಸತಿನಿಲಯದಲ್ಲಿ ಅವಕಾಶ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಮನೆ ಕಟ್ಟಿಸಿಕೊಡುವ ಜವಾಬ್ದಾರಿಯನ್ನು ಜಿಲ್ಲಾಡಳಿತವೇ ವಹಿಸಿಕೊಂಡಿದೆ.

ಅವರ ನಿವೇಶನದ ದಾಖಲೆಗಳನ್ನು ಪರಿಶೀಲಿಸಲಾಗಿದ್ದು ಕ್ರಮಬದ್ಧವಾಗಿವೆ. ಅಕ್ಕಪಕ್ಕದವರು ತೊಂದರೆ ನೀಡಿದರೆ ಸೂಕ್ತ ಕಾನೂನು ಕ್ರಮಕೈಗೊಂಡು ರಕ್ಷಣೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೂ ಆದೇಶ ನೀಡಿದರು.

ಕುಟುಂಬಕ್ಕೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾನ ಗುರುತಿನ ಪತ್ರ ಎಲ್ಲ ದಾಖಲೆಗಳು ಇವೆ. 20 ವರ್ಷದಿಂದ ಅದೇ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಜೀವನಕ್ಕೆ ತೊಂದರೆ ಇಲ್ಲ. ವಸತಿಗೆ ತೊಂದರೆ ಇದೆ. ಜಿಲ್ಲಾಧಿಕಾರಿಯವರ ಆದೇಶದಂತೆ ಎಲ್ಲ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್ ಹನುಮಂತರಾಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.