ADVERTISEMENT

‘2ಎ ಸೌಲಭ್ಯ ನೀಡದಿದ್ದರೆ ತಕ್ಕ ಪಾಠ’

ರಾಜ್ಯ ಸರ್ಕಾರದ ವಿರುದ್ಧ ಬಲಿಜ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 5:56 IST
Last Updated 7 ಜನವರಿ 2023, 5:56 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಲಿಜ ಸಮುದಾಯದ ಮುಖಂಡ ಡಾಂಬು ಶ್ರೀನಿವಾಸ್ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಲಿಜ ಸಮುದಾಯದ ಮುಖಂಡ ಡಾಂಬು ಶ್ರೀನಿವಾಸ್ ಮಾತನಾಡಿದರು   

ಚಿಕ್ಕಬಳ್ಳಾಪುರ: ಬಲಿಜ ಸಮುದಾಯಕ್ಕೆ ‘2ಎ’ ಮೀಸಲಾತಿಯನ್ನು ರಾಜ್ಯ ಸರ್ಕಾರ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸಮುದಾಯ ಪಾಠ ಕಲಿಸಲಿದೆ ಎಂದು ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಲಿಜ ಸಮುದಾಯದ ಮುಖಂಡರು ಎಚ್ಚರಿಸಿದರು.

ಮುಖಂಡ ಡಾಂಬು ಶ್ರೀನಿವಾಸ್ ಮಾತನಾಡಿ, ‘ಕರ್ನಾಟಕ ರಾಜ್ಯ ಬಲಿಜ ಸಂಘ ಮತ್ತು ಬಲಿಜ ಸಂಘಗಳ ಒಕ್ಕೂಟದಿಂದ ‘2ಎ’ ಮೀಸಲಾತಿ ನೀಡುವಂತೆ ಆಗ್ರಹಿಸಿ ಜ.9ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಜಿಲ್ಲೆಯಲ್ಲಿರುವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಬಲಿಜ ಜನಾಂಗದ ಜನಸಂಖ್ಯೆ 45 ಲಕ್ಷವಿದೆ. 1994ರ ಮುಂಚೆ ಸಮುದಾಯ ‘2ಎ’ನಲ್ಲಿಯೇ ಇತ್ತು. ವೀರಪ್ಪ ಮೊಯಿಲಿ ಅವರ ಸರ್ಕಾರ ತಾತ್ಕಾಲಿಕವಾಗಿ ತೆಗೆಯುತ್ತಿದ್ದೇವೆ ಎಂದರು. ನಂತರ ಶಾಶ್ವತವಾಗಿ ತೆಗೆದರು. ಇದರಿಂದ ಜನಾಂಗಕ್ಕೆ ಅನ್ಯಾಯವಾಗಿದೆ ಎಂದು ದೂರಿದರು.

ADVERTISEMENT

ರಾಜಕೀಯ, ಸಾಮಾಜಿಕ ಸೇರಿದಂತೆ ನಮಗೆ ಯಾವುದೇ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಶೈಕ್ಷಣಿಕವಾಗಿ ’2ಎ’ ಮೀಸಲಾತಿ ಕೊಟ್ಟರು. ಪೂರ್ಣವಾಗಿ ನಮಗೆ ‘2ಎ’ ಕೊಡಿ ಎಂದು ಕೇಳುತ್ತಿದ್ದೇವೆ. ಆದರೆ ಇಂದಿಗೂ ಸರ್ಕಾರ ಈ ಮೀಸಲಾತಿ ಕೊಟ್ಟಿಲ್ಲ. ಈಗ ‘2ಸಿ’ ಎನ್ನುತ್ತಿದ್ದು ಇದು ನಮಗೆ ಅರ್ಥವೇ ಆಗಿಲ್ಲ.

ಮುಖಂಡ ನಾರಾಯಣಸ್ವಾಮಿ ಮಾತನಾಡಿ, ಬಲಿಜ ಸಮುದಾಯ ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದಿದೆ. ಎಲ್ಲ ಕ್ಷೇತ್ರಗಳಲ್ಲಿ
ಹಿಂದುಳಿದಿರುವ ಸಮುದಾಯದ ಜನರು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.

ಮುಖಂಡ ಮೋಹನ್ ಮುರುಳಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದುಳಿದ ಬಲಿಜ ಸಮುದಾಯಕ್ಕೆ ನೆರವಾಗುತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಅವರು ನಮ್ಮ ಬೆಂಬಲಕ್ಕಿದ್ದರು. ಇದಕ್ಕೆ ಬಸವರಾಜ ಬೊಮ್ಮಾಯಿ ತಕ್ಕ ಪಾಠ ಎದುರಿಸಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಬಲಿಜಿಗರು ಎಲ್ಲಿಯೇ ಇದ್ದರೂ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಆದರೆ ನಮಗೆ ಸೌಲಭ್ಯವಿಲ್ಲ. ಬೊಮ್ಮಾಯಿ ಅವರು ದಯಮಾಡಿ ನಮ್ಮ ಜನಾಂಗಕ್ಕೆ ‘2ಎ’ ಸೌಲಭ್ಯ ಕೊಡಿಸಬೇಕು ಎಂದು ಹೇಳಿದರು.

ಬಲಿಜ ಜಾಗೃತಿ ಸಮಿತಿಯ ಮಂಜುನಾಥ್ ಮಾತನಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 40 ಸಾವಿರ ಮತದಾರರು ಇದ್ದಾರೆ. ನಮ್ಮ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಳಿಗಾಲದ ಅಧಿವೇಶನದಲ್ಲಿಯ
ಸಮುದಾಯದ ವಿಚಾರವಾಗಿ ಯಾರೂ ಮಾತನಾಡಲಿಲ್ಲ ಎಂದರು.

ಬಲಿಜ ಸಮುದಾಯ ಬಿಜೆಪಿಗೆ ಬೆಂಬಲ ಕೊಟ್ಟಿದೆ. ನಮಗೆ ‘2ಎ’ ಮೀಸಲಾತಿ ಕೊಟ್ಟರೆ ನಾವು ಬಿಜೆಪಿಗೆ ಸದಾಕಾಲ ಬೆಂಬಲವಾಗಿ ಇರುತ್ತೇವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಾರಿಗೆ ಬೆಂಬಲ ಕೊಡಬೇಕು ಎನ್ನುವುದನ್ನು ಸಮುದಾಯ ತೀರ್ಮಾನಿಸಲಿದೆ ಎಂದು ಹೇಳಿದರು.

ಸಮುದಾಯದ ಮುಖಂಡರಾದ ಶಿವಕುಮಾರ್, ಕೃಷ್ಣಪ್ಪ, ಬೈರಪ್ಪ, ದಯಾನಂದ್, ರಾಮಚಂದ್ರಪ್ಪ ಇತರರು ಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.