ADVERTISEMENT

ಬೇಡಿಕೆ ಈಡೇರದಿದ್ದರೆ ಅ.17 ರಂದು ಪ್ರತಿಭಟನೆ

ಶ್ರಮಯೋಗಿ ಮಾನ್‌ಧನ್ ಯೋಜನೆ ಬದಲು ಎಲ್ಐಸಿ ಮೂಲಕವೇ ಪಿಂಚಣಿ ಹಣ ನೀಡುವಂತೆ ಬಿಸಿಯೂಟ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 12:46 IST
Last Updated 27 ಸೆಪ್ಟೆಂಬರ್ 2019, 12:46 IST

ಚಿಕ್ಕಬಳ್ಳಾಪುರ: ‘ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಈ ಹಿಂದೆ ನೀಡಿದ ಭರವಸೆಯಂತೆ ಎಲ್ಐಸಿ ಮೂಲಕವೇ ಪಿಂಚಣಿ ಹಣ ನೀಡದಿದ್ದರೆ, ಅ.17 ರಂದು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್‌. ಮಂಜುಳಾ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆಗೆ 18 ರಿಂದ 40 ವರ್ಷದ ಒಳಗಿನ ವಯೋಮಾನದವರು ಮಾತ್ರ ಅರ್ಹರಾಗುತ್ತಾರೆ. ಆದರೆ, ಅನೇಕ ಬಿಸಿಯೂಟ ನೌಕರರು ಸುಮಾರು 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಸಾಕಷ್ಟು ಮಹಿಳೆಯರು 40 ವರ್ಷದ ದಾಟಿದವರಿದ್ದಾರೆ. ಇದರಿಂದಾಗಿ ಅವರಿಗೆ ಅನ್ಯಾಯವಾಗುತ್ತದೆ’ ಎಂದು ಹೇಳಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಸಿಯೂಟ ನೌಕರರಿಗೆ ಕಳೆದ 17 ವರ್ಷಗಳಿಂದ ಸರಿಯಾದ ವೇತನ, ಪಿಂಚಣಿ ಇತರೆ ಸೌಲಭ್ಯಗಳನ್ನು ನೀಡದೆ ಮೋಸ ಮಾಡುತ್ತಿವೆ. ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು ಎಂಬ ಬೇಡಿಕೆ ಈಡೇರಿಸಿಲ್ಲ’ ಎಂದರು.

ADVERTISEMENT

‘ರಾಜ್ಯದಲ್ಲಿ 1.18 ಲಕ್ಷ ಮಹಿಳೆಯರು ಬಿಸಿಊಟ ನೌಕರರಾಗಿ ದುಡಿಯುತ್ತಿದ್ದಾರೆ. ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ದುಡಿಯುವ ಈ ಮಹಿಳೆಯರಿಗೆ ತಿಂಗಳಿಗೆ ಸುಮಾರು ₹2,700 ವೇತನ ಬಿಟ್ಟರೆ ಯಾವುದೇ ಸೌಲಭ್ಯಗಳಿಲ್ಲ. ಸದ್ಯ ನಿವೃತ್ತಿ ಅಂಚಿನಲ್ಲಿರುವವರಿಗೆ ಈ ಯೋಜನೆಯಿಂದ ಅನ್ಯಾಯವಾಗಲಿದೆ’ ಎಂದು ತಿಳಿಸಿದರು.

‘ನಮ್ಮ ಬೇಡಿಕೆಗಳಿಗೆ ಸರ್ಕಾರಗಳು ಸ್ಪಂದಿಸದಿದ್ದರೆ ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಹೋರಾಟ ನಡೆಸಲಾಗುತ್ತದೆ’ ಎಂದು ಹೇಳಿದರು. ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಉಪಾಧ್ಯಕ್ಷೆ ಮುನಿಲಕ್ಷಮ್ಮ, ತಾಲ್ಲೂಕು ಘಟಕದ ಅಧ್ಯಕ್ಷರಾದ ವೆಂಕಟಲಕ್ಷ್ಮಮ್ಮ, ಉಮಾ, ಭಾರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.