ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುರಿ ಮುಟ್ಟದ ರಾಜಧನ ಸಂಗ್ರಹ

ಡಿ.ಎಂ.ಕುರ್ಕೆ ಪ್ರಶಾಂತ
Published 21 ಜುಲೈ 2024, 4:46 IST
Last Updated 21 ಜುಲೈ 2024, 4:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಟ್ಟಡ ಕಲ್ಲುಗಣಿಗಾರಿಕೆ, ಗ್ರಾನೈಟ್ ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ ಹೀಗೆ ವಿವಿಧ ರೀತಿಯ ಗಣಿಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ.

ಗಣಿ ಮಾಲೀಕರು ಸರ್ಕಾರಕ್ಕೆ ರಾಜಧನ ಸಹ ಪಾವತಿಸುವರು. ಸರ್ಕಾರ ಸಹ ಪ್ರತಿ ವರ್ಷ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವಾರ್ಷಿಕ ರಾಜಧನ ಸಂಗ್ರಹದ ಗುರಿ ನೀಡುತ್ತದೆ. ವರ್ಷದಿಂದ ವರ್ಷಕ್ಕೆ ರಾಜಧನ ಸಂಗ್ರಹದ ಗುರಿಯಲ್ಲಿ ವ್ಯತ್ಯಾಸಗಳು ಆಗುತ್ತವೆ.

ADVERTISEMENT

ಆದರೆ ಕಳೆದ ನಾಲ್ಕು ವರ್ಷಗಳಿಂದಲೂ ಜಿಲ್ಲೆಯಲ್ಲಿ ರಾಜಧನ ಸಂಗ್ರಹದ ಗುರಿಯನ್ನು ಇಲಾಖೆಯು ಮುಟ್ಟಿಲ್ಲ. ಗಣಿ ಮಾಲೀಕರು ಕೋಟ್ಯಂತರ ರೂಪಾಯಿ ರಾಜಧನ ಬಾಕಿ ಉಳಿಸಿಕೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿಯೇ ಬಾಕಿ ಇದೆ. 

2020–21ನೇ ಸಾಲಿನಿಂದ 2023–24ನೇ ಸಾಲಿನವರೆಗೆ ಜಿಲ್ಲೆಯಲ್ಲಿ ಸುಮಾರು ₹ 154 ಕೋಟಿ ರಾಜಧನ ಸಂಗ್ರಹವು ಬಾಕಿ ಇದೆ. ಇದು ಕೇವಲ ಮೂರ್ನಾಲ್ಕು ವರ್ಷಗಳಿಂದ ಮಾತ್ರ  ಬಾಕಿ ಉಳಿಯುತ್ತಿಲ್ಲ. ಇದಕ್ಕೂ ಹಿಂದಿನ ವರ್ಷಗಳಿಂದಲೂ ರಾಜಧನ ಸಂಗ್ರಹದ ಗುರಿ ಪೂರ್ಣವಾಗಿ ಮುಟ್ಟುತ್ತಿಲ್ಲ.

2015–16ರಲ್ಲಿ ₹ 27 ಕೋಟಿ ಇದ್ದ ರಾಜಧನ ಬಾಕಿ 2019–20ಕ್ಕೆ 42 ಕೋಟಿ ಮುಟ್ಟಿತ್ತು. 2015–16ರಲ್ಲಿ ₹ 27 ಕೋಟಿ, 2016–17ರಲ್ಲಿ ₹ 22 ಕೋಟಿ, 2017–18ರಲ್ಲಿ ₹ 27 ಕೋಟಿ, 2018–19ರಲ್ಲಿ ₹ 51 ಕೋಟಿ ಮತ್ತು 2019–20ರಲ್ಲಿ ₹ 42 ಕೋಟಿ ರಾಜಧನ ಬಾಕಿ ಇತ್ತು ಎನ್ನುತ್ತವೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂಕಿ ಅಂಶಗಳು. 

ಒಂದು ಟನ್ ಕಟ್ಟಡ ಕಲ್ಲಿಗೆ ₹ 70 ಹಾಗೂ ಗ್ರಾನೈಟ್‌ಗೆ ₹ 250ರಿಂದ ₹ 350 ದರದಲ್ಲಿ ರಾಜಧನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಲೀಕರು ಪಾವತಿಸಬೇಕು. ಪಾವತಿ ಆಗದ ರಾಜಧನ ಮತ್ತೆ ಮುಂದಿನ ವರ್ಷದ ರಾಜಧನದ ಒಟ್ಟಿಗೆ ಸೇರಿ ಬೆಳೆಯುತ್ತಲೇ ಇದೆ.  

ಜಿಲ್ಲಾ ಮಟ್ಟದ ಗಣಿ ಸಮಿತಿ ಸಭೆಗಳಲ್ಲಿ, ‘ಜಿಲ್ಲೆಯಲ್ಲಿ ಕ್ವಾರಿಗಳಿಂದ ಸರ್ಕಾರಕ್ಕೆ ಬರಬೇಕಾದ ಬಾಕಿ ರಾಜಧನವನ್ನು ಕೂಡಲೇ ವಸೂಲಿ ಮಾಡಬೇಕು. ರಾಜಧನ ಬಾಕಿ ಉಳಿಸಿಕೊಂಡ ಕ್ವಾರಿಗಳಿಗೆ ನೋಟಿಸ್ ನೀಡಿ, ಪರವಾನಿಗೆ ರದ್ದು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆಗಳನ್ನು ನೀಡಲಾಗುತ್ತದೆ. ಹೀಗಿದ್ದರೂ ರಾಜಧನದ ಬಾಕಿ ಮೊತ್ತ ಮಾತ್ರ ಕರಗುತ್ತಲೇ ಇಲ್ಲ. ವರ್ಷದಿಂದ ವರ್ಷಕ್ಕೆ ರಾಜಧನ ಬಾಕಿ ಬೆಟ್ಟದಂತೆ ಬೆಳೆಯುತ್ತಲೇ ಇದೆ.

ಜಿಲ್ಲೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಗಣಿಗಾರಿಕೆ ನಡೆಸಿದ ಸಂಸ್ಥೆಗಳಿಗೆ ನಿಗದಿತ ರಾಜಧನದ 5 ಪಟ್ಟು ದಂಡ ವಿಧಿಸಲಾಗಿದೆ. ಈ ದಂಡದ ವಿವಾದ ಬಗೆಹರಿದಿಲ್ಲ. ಆ ದಂಡದ ಹಣವೂ ಸೇರಿದ ಕಾರಣ ರಾಜಧನ ಬಾಕಿ ಹೆಚ್ಚಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಗಳು ತಿಳಿಸುತ್ತವೆ. 

ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲ್ಲುಗಣಿಗಾರಿಕೆ ಹೆಚ್ಚು ನಡೆಯುತ್ತಿದೆ. ಗುಡಿಬಂಡೆ ತಾಲ್ಲೂಕಿನ ಹಿರೇನಾಗಲ್ಲಿಯಲ್ಲಿ ಸ್ಫೋಟ ಸಂಭವಿಸಿ ಆರು ಜನರು ಮೃತಪಟ್ಟ ನಂತರ ಗಣಿಗಾರಿಕೆ ವಿಚಾರದಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿಯೇ ಸದ್ದು ಮಾಡಿತು. ನಂತರ ಜಿಲ್ಲೆಯ ಎಲ್ಲ ಗಣಿಗಳ ಸರ್ವೆ ಸಹ ನಡೆದಿತ್ತು.

ಹಿರೇನಾಗವಲ್ಲಿ ಸ್ಫೋಟದ ನಂತರ ಜಿಲ್ಲೆಯಲ್ಲಿ ಗಣಿಗಾರಿಕೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಎನ್ನುವ ಬಗ್ಗೆ ದೊಡ್ಡ ಮಟ್ಟದಲ್ಲಿ ಪರಿಶೀಲನೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.