ADVERTISEMENT

ಹೆಚ್ಚಿದ ಧಗೆ: ಎಲ್ಲೆಡೆ ಕಲ್ಲಂಗಡಿ ಸುಗ್ಗಿ

ಆಂಧ್ರ, ತಮಿಳುನಾಡಿನಿಂದ ಹಣ್ಣು ತರಿಸುತ್ತಿರುವ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 5:38 IST
Last Updated 28 ಫೆಬ್ರುವರಿ 2023, 5:38 IST
ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಕಂಡುಬಂದ ಕಲ್ಲಂಗಡಿ ವ್ಯಾಪಾರ
ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಕಂಡುಬಂದ ಕಲ್ಲಂಗಡಿ ವ್ಯಾಪಾರ   

ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಮುಗಿದ ಬಳಿಕ ಬಿಸಿಲಿನ ಧಗೆ ಏರಿಕೆಯಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ದಾಹ ನೀಗಿಸುವ ಮತ್ತು ಉದರ ತಂಪಾಗಿಸುವ ಕಲ್ಲಂಗಡಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.

ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ತಂದ ರಾಶಿ ರಾಶಿ ಕಲ್ಲಂಗಡಿ ಹಣ್ಣುಗಳು ಇದೀಗ ದಾರಿಹೋಕರನ್ನು ದಾಹ ತಣಿಸಲು ಕೈಬೀಸಿ ಕರೆಯುತ್ತಿವೆ. ನಗರದ ಎಂ.ಜಿ. ರಸ್ತೆ, ಬಿ.ಬಿ. ರಸ್ತೆ, ಶಿಡ್ಲಘಟ್ಟ ರಸ್ತೆ, ಬಾಗೇಪಲ್ಲಿ ರಸ್ತೆ, ಜಿಲ್ಲಾಡಳಿತ ಭವನದ ಎದುರು, ಚದಲಪುರ ಕ್ರಾಸ್ ಸೇರಿದಂತೆ ಹಲವೆಡೆ ವ್ಯಾಪಾರಿಗಳು ಟನ್‍ಗಟ್ಟಲೇ ಕಲ್ಲಂಗಡಿ ಹಣ್ಣುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ.

ವಾರಕ್ಕೆ ಎರಡು ಬಾರಿ ನಾಲ್ಕೈದು ಕಲ್ಲಂಗಡಿ ವ್ಯಾಪಾರಿಗಳು ಒಟ್ಟುಗೂಡಿ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮಲ್ಕರ್ ಚೆರವು, ಪುಲಿವೆಂದಲು ಹಾಗೂ ತಮಿಳುನಾಡಿನ ವಿವಿಧ ಭಾಗದ ತೋಟಗಳಿಂದ ಸುಮಾರು 20 ರಿಂದ 40 ಟನ್ ಹಣ್ಣು ಖರೀದಿಸಿ ತಂದು ಮಾರಾಟ ಮಾಡಲಾಗುತ್ತಿದೆ.

ADVERTISEMENT

ತೋಟದಲ್ಲಿ ಪ್ರತಿ ಕೆ.ಜಿ ಹಣ್ಣಿಗೆ ₹10 ನಂತೆ ಖರೀದಿಸುವ ವ್ಯಾಪಾರಿಗಳು ಗ್ರಾಹಕರಿಗೆ ₹20 ರಿಂದ ₹25ಕ್ಕೆ ಮಾರಾಟ ಮಾಡುತ್ತಿದ್ದಾರೆ. ಸದ್ಯ ನಗರಕ್ಕೆ ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಲಗ್ಗೆ ಇಟ್ಟಿದ್ದು, ಹೆಚ್ಚಾಗಿರುವ ಬಿಸಿಲಿನ ಝಳದಿಂದಾಗಿ ಹೆಚ್ಚು ಕಲ್ಲಂಗಡಿ ಹಣ್ಣುಗಳು ಮಾರಾಟವಾಗುತ್ತಿವೆ.

ಕಲ್ಲಂಗಡಿ ಸುಗ್ಗಿ ಈಗಷ್ಟೇ ಆರಂಭವಾಗಿದ್ದು, ಬಿಸಿಲಿನ ತಾಪ ಹೆಚ್ಚಾದರೆ ಹೊಟ್ಟೆ ತಂಪಾಗಿಸಲು ಕಲ್ಲಂಗಡಿ ಹಣ್ಣು ತಿನ್ನಲು ಎಲ್ಲರೂ ಬರುತ್ತಾರೆ. ಈಗಷ್ಟೇ ಕಲ್ಲಂಗಡಿ ವ್ಯಾಪಾರ ಆರಂಭಿಸಿದ್ದೇವೆ. ಏಪ್ರಿಲ್, ಮೇ ತಿಂಗಳವರೆಗೂ ವ್ಯಾಪಾರ ಮಾಡುತ್ತೇವೆ. ನಿತ್ಯ ನಮ್ಮಲ್ಲಿ 100 ರಿಂದ 200 ಹಣ್ಣು ಮಾರಾಟವಾಗುತ್ತಿದೆ. ದಿನಕ್ಕೆ ₹1,000 ರಿಂದ ₹2 ಸಾವಿರದವರೆಗೂ ಆದಾಯ ಮಾಡುತ್ತಿದ್ದೇವೆ ಎನ್ನುತ್ತಾರೆ ನಗರದ ಕಲ್ಲಂಗಡಿ ವ್ಯಾಪಾರಿ ಸುರೇಶ್.

ಕಳೆದ ಎರಡು ವರ್ಷಗಳಿಂದ ಬೇಸಿಗೆ ವೇಳೆ ಕೊರೊನಾ ಸೋಂಕಿನಿಂದಾಗಿ ಕಲ್ಲಂಗಡಿ ವ್ಯಾಪಾರ
ನಡೆದಿರಲಿಲ್ಲ. ಇದರಿಂದ ಹಣ್ಣುಗಳು ಮಾರಾಟವಾಗದೆ, ಕೊಳೆತು ಹೋಗಿದ್ದವು. ಇದರಿಂದ ಹೆಚ್ಚು ನಷ್ಟ ಅನುಭವಿಸಿದೆವು. ಈಗ ವ್ಯಾಪಾರ ಚೆನ್ನಾಗಿದೆ. ಒಂದು ಹಣ್ಣು 3 ರಿಂದ 10 ಕೆ.ಜಿವರೆಗೆ ಬರುತ್ತದೆ. ಹಣ್ಣನ್ನು ಹೋಳು ಮಾಡಿ ಮಾರಿದರೆ ₹15ಗೆ ಮಾರಲಾಗುತ್ತಿದೆ. ತೂಕದ ಲೆಕ್ಕದಲ್ಲಿ ಇದು ಲಾಭದಾಯಕ. ಇದಲ್ಲದೆ ಕೆ.ಜಿಗಟ್ಟಲೇ ಹಣ್ಣು ಖರೀದಿಸಿದರೆ ಕೆ.ಜಿಗೆ ₹20 ರಂತೆ ಮಾರಾಟ ಮಾಡಲಾಗುತ್ತದೆ. ಖರೀದಿದಾರರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಹೇಳಿದರು.

ಕಲ್ಲಂಗಡಿ ಸೇವನೆ ಆರೋಗ್ಯಕ್ಕೆ ಪ್ರಯೋಜನ

ಬೇಸಿಗೆಯಲ್ಲಿ ಕಲ್ಲಂಗಡಿ ತಿಂದರೆ ದೇಹಕ್ಕೆ ಹಾನಿಯುಂಟು ಮಾಡುವ ಮತ್ತು ಬೇಡದ ರಾಸಾಯನಿಕಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಮತ್ತು ಹೃದಯಾಘಾತ, ಅಸ್ತಮಾ ಸೇರಿದಂತೆ ಇನ್ನಿತರ ಅನಾರೋಗ್ಯಗಳನ್ನು ದೂರ ಮಾಡುತ್ತದೆ.

ಮೆದುಳಿನ ಚೈತನ್ಯ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಅನೇಕ ರೀತಿಯಲ್ಲಿ ದೇಹದ ಆರೋಗ್ಯಕ್ಕೆ ಕಲ್ಲಂಗಡಿ ಪ್ರಯೋಜನಕಾರಿಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.