ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಜಿಲ್ಲೆಯಿಂದ ಪ್ರತ್ಯೇಕಗೊಂಡ ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಸೋಮವಾರಕ್ಕೆ (ಆ.23) ಹದಿನಾಲ್ಕು ವರ್ಷಗಳು ತುಂಬಿ ಹದಿನೈದನೇ ವರ್ಷಕ್ಕೆ ಕಾಲಿಡುತ್ತದೆ. ಜಿಲ್ಲೆಗೆ ಹದಿನೈದರ ಪ್ರಾಯವಾಗುತ್ತದೆ. ಚಿಕ್ಕಬಳ್ಳಾಪುರ ರಚನೆಯಾಗಿ 14 ವರ್ಷಗಳು ಪೂರ್ಣವಾದರೂ ಕೈಗಾರೀಕರಣದ ವಿಚಾರದಲ್ಲಿ ಮಹತ್ವದ ಬೆಳವಣಿಗೆಗಳೇನೂ ಘಟಿಸಿಲ್ಲ.
ಆದರೆ ಈಗ ಜಿಲ್ಲೆಯಲ್ಲಿ ಕೈಗಾರಿಕೆಗಳ ಆರಂಭಕ್ಕೆ ಪ್ರಯತ್ನಗಳು ಆರಂಭವಾಗಿವೆ. ವಿಶೇಷವಾಗಿ ಕೈಗಾರಿಕಾ ಹಬ್ ನಿರ್ಮಾಣಕ್ಕೆ ಜಮೀನು ಗುರುತಿಸುವ ಕಾರ್ಯ ಸದ್ದಿಲ್ಲದೆ ನಡೆದಿದೆ. 15ನೇ ವರ್ಷಕ್ಕೆ ಕಾಲಿಡುತ್ತಿರುವ ಜಿಲ್ಲೆಗೆ ಈ ಕೈಗಾರಿಕಾ ಹಬ್ ಜನ್ಮದಿನದ ಉಡುಗೊರೆ ಎನ್ನುವಂತಿದೆ.
ಒಂದೇ ಕಡೆ ಕನಿಷ್ಠ 2 ಸಾವಿರ ಎಕರೆ ಜಮೀನು ಅಗತ್ಯ. ಪೂರ್ಣ ಪ್ರಮಾಣದಲ್ಲಿ ಖಾಸಗಿ ಜಮೀನು ಸ್ವಾಧೀನಕ್ಕೆ ತೆಗೆದುಕೊಂಡು ಕೈಗಾರಿಕಾ ಹಬ್ ನಿರ್ಮಿಸುವುದಕ್ಕಿಂತ ಸರ್ಕಾರಿ ಜಮೀನಿದ್ದರೆ ಒಳ್ಳಿತು ಎನ್ನುವ ಭಾವನೆ ಸರ್ಕಾರಕ್ಕೆ ಇದ್ದಂತಿದೆ.
ಸಚಿವ ಡಾ.ಕೆ.ಸುಧಾಕರ್ ಪ್ರತಿನಿಧಿಸುತ್ತಿರುವ ಚಿಕ್ಕಬಳ್ಳಾಪುರದಲ್ಲಿಯೇ ಕೈಗಾರಿಕಾ ಹಬ್ ನಿರ್ಮಾಣಕ್ಕೆ ಸಚಿವರು ಸಹ ಆಸಕ್ತಿ ತೋರಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಜಮೀನು ಹುಡುಕುವ ಕಾರ್ಯ ಸದ್ದಿಲ್ಲದೆ ನಡೆಸಿದೆ. ಮಂಚೇನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ 4,500 ಎಕರೆ ಸರ್ಕಾರಿ ಜಮೀನು ಸಹ ಗುರುತಿಸಲಾಗಿದೆ. ಆದರೆ ಇಷ್ಟು ದೊಡ್ಡ ಪ್ರಮಾಣದ ಸರ್ಕಾರಿ ಜಮೀನು ಒಂದೆಡೆಯೇ ಇಲ್ಲ. ಕೈಗಾರಿಕಾ ಹಬ್ ನಿರ್ಮಾಣಕ್ಕೆ ಜಮೀನು ಒಂದೆಡೆ ಇದ್ದರೆ ಅನುಕೂಲ. ಕೈಗಾರಿಕಾ ಹಬ್ ಪ್ರಕ್ರಿಯೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎನ್ನುತ್ತದೆ ಜಿಲ್ಲಾ ಕೈಗಾರಿಕಾ ಇಲಾಖೆ ಮೂಲಗಳು. ಮಂಚೇನಹಳ್ಳಿಯಲ್ಲಿ ಸರ್ಕಾರಿ ಭೂಮಿ ಗರಿಷ್ಠ ಪ್ರಮಾಣದಲ್ಲಿ ಇದೆ.
ಮಂಚೇನಹಳ್ಳಿ ಜತೆಗೆ, ನಂದಿ, ಮಂಡಿಕಲ್ ವ್ಯಾಪ್ತಿಯಲ್ಲಿಯೂ ಜಮೀನು ಗುರುತಿಸಲು ಕಂದಾಯ ಇಲಾಖೆಗೆ ವಹಿಸಲಾಗಿದೆ. ಯಾವ ಪ್ರದೇಶದಲ್ಲಿ ಒಂದೇ ಕಡೆ ಹೆಚ್ಚು ಸರ್ಕಾರಿ ಜಮೀನು ಲಭ್ಯವಾಗುತ್ತದೆಯೊ ಆ ಪ್ರದೇಶದಲ್ಲಿ ಕೈಗಾರಿಕಾ ಹಬ್ ನಿರ್ಮಾಣಕ್ಕೆ ಅಡಿ ಇಡಲಾಗುತ್ತದೆ ಎನ್ನಲಾಗುತ್ತಿದೆ.
ಮೂರನೇಹಂತದಲ್ಲಿ ಜಮೀನು ಗುರುತು: ಚಿಂತಾಮಣಿ ತಾಲ್ಲೂಕು ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ 2ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ 414.25 ಎಕರೆ ಮತ್ತು 3ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ 1,489 ಎಕರೆ ಜಮೀನನ್ನು ಈಗಾಗಲೇ ಗುರುತಿಸಲಾಗಿದೆ. ಕೆಐಎಡಿಬಿಯಿಂದ ಅಂತಿಮ ಅಧಿಸೂಚನೆ ಸಹ ಹೊರಡಿಸಲಾಗಿದೆ.
ಗೌರಿಬಿದನೂರು ತಾಲ್ಲೂಕು ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ 3ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ 839 ಎಕರೆ ಜಮೀನು ಗುರುತಿಸಿ ಕೆಐಎಡಿಬಿಯಿಂದ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನ ಹೊಸಹುಡ್ಯ, ಕೊಂಡರೆಡ್ಡಿಪಲ್ಲಿಯಲ್ಲಿಯೂ ಕೈಗಾರೀಕರಣ ಯೋಜನೆಗಳನ್ನು ಕಾರ್ಯಗತವಾಗುವ ಸಾಧ್ಯತೆ ಇದೆ.
ಕೇಂದ್ರ ಸಚಿವರ ಭೇಟಿ: ಬೆಂಗಳೂರಿಗೆ ಹತ್ತಿರವಿರುವ ಕಾರಣ ಜಿಲ್ಲೆಯನ್ನು ಕೈಗಾರಿಕಾ ಹಬ್ ಆಗಿ ರೂಪಿಸಬೇಕು. ಇದಕ್ಕೆ ಸಹಕಾರ ನೀಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಹ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಕೈಗಾರೀಕರಣ ವೇಗ ಪಡೆದುಕೊಂಡಿದ್ದೇ ಆದಲ್ಲಿ ಉದ್ಯೋಗ ಸೃಷ್ಟಿಯೂ ಆಗುತ್ತದೆ. ಬೆಂಗಳೂರಿನ ಮೇಲಿನ ಒತ್ತಡವೂ ತಗ್ಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.