ADVERTISEMENT

ಶಿಡ್ಲಘಟ್ಟ: ಶಿಲಾಯುಗದ ಸಮಾಧಿ ಕುರುಹು ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 4:50 IST
Last Updated 13 ಜುಲೈ 2025, 4:50 IST
ಶಿಡ್ಲಘಟ್ಟ ತಾಲ್ಲೂಕಿನ ಮದ್ದೇಗಾರಹಳ್ಳಿಯ ಬಳಿಯ ಗುಡ್ಡದ ಮೇಲ್ಭಾಗದಲ್ಲಿರುವ ಕಲ್ಗೋರಿ 
ಶಿಡ್ಲಘಟ್ಟ ತಾಲ್ಲೂಕಿನ ಮದ್ದೇಗಾರಹಳ್ಳಿಯ ಬಳಿಯ ಗುಡ್ಡದ ಮೇಲ್ಭಾಗದಲ್ಲಿರುವ ಕಲ್ಗೋರಿ    

ಶಿಡ್ಲಘಟ್ಟ: ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಮದ್ದೇಗಾರಹಳ್ಳಿಯ ಬಳಿಯ ಗುಡ್ಡದ ಮೇಲ್ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕಬ್ಬಿಣಯುಗದ ಬೃಹತ್ ಶಿಲಾಯುಗದ ಕಲ್ಗೋರಿಗಳು ಪತ್ತೆಯಾಗಿವೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊಟ್ಟಮೊದಲಬಾರಿಗೆ ಈ ರೀತಿಯ ಶಿಲಾಯುಗದ ನೆಲೆಗಳು ಕಂಡುಬಂದಿದೆ. ಈ ಭಾಗದ ಇತಿಹಾಸವು ಸುಮಾರು 2,300 ವರ್ಷಗಳ ಹಿಂದಕ್ಕೆ ಕೊಂಡೊಯ್ಯುತ್ತವೆ.

ಪುರಾತತ್ವ ಇಲಾಖೆಯಿಂದ ಗ್ರಾಮವಾರು ಸರ್ವೆ ನಡೆಸುತ್ತಿರುವ ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರಿಗೆ ತಾಲ್ಲೂಕಿನ ಮದ್ದೇಗಾರಹಳ್ಳಿಯ ಬಳಿಯ ಗುಡ್ಡದ ಮೇಲ್ಭಾಗದಲ್ಲಿ ಶಿಲಾಯುಗದ ಸಮಾಧಿಯ ಕುರುಹು ಪತ್ತೆಯಾಗಿವೆ. ಇವುಗಳನ್ನು ಒರಟು ಬಂಡೆ ಮತ್ತು ಚಪ್ಪಡಿ ಬಳಸಿ ನಿರ್ಮಿಸಲಾಗಿದೆ. 1.5 ರಿಂದ 2 ಮೀಟರ್ ಅಳತೆ ಹೊಂದಿವೆ. 

ADVERTISEMENT

‘ಇವನ್ನು ಕಬ್ಬಿಣಯುಗದ ಬೃಹತ್ ಶಿಲಾಯುಗದ ಸಂಸ್ಕೃತಿಗಳೆಂದು ಕರೆಯುತ್ತೇವೆ. ಇವು ಸುಮಾರು ಕ್ರಿ.ಪೂ 300 ಅಂದರೆ ಇಂದಿಗೆ ಸುಮಾರು 2,300 ವರ್ಷಗಳಷ್ಟು ಹಿಂದಿನವು. ಈ ಕಲ್ಗೋರಿಗಳು ಅಥವಾ ಕಲ್ಮನೆಗಳು ಶಿಲಾಯುಗದ ಜನರ ಜೀವನಶೈಲಿ ಮತ್ತು ಸಂಸ್ಕೃತಿ ಬಗ್ಗೆ ಮಾಹಿತಿ ಒದಗಿಸುತ್ತವೆ. ವಲಸಿಗರಾಗಿ ಜೀವನ ನಡೆಸುತ್ತಿದ್ದ ಆಗಿನ ಜನರು ಯಾವುದಾದರೂ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ತಮ್ಮ ಗುಂಪಿನ ಹಲವರು ಸತ್ತಾಗ, ಅವರನ್ನೊಂದು ಕಡೆ ಹೂತು, ಹತ್ತಿರದಲ್ಲಿ ಈ ರೀತಿಯ ಕಲ್ಗೋರಿ ನಿರ್ಮಿಸುತ್ತಿದ್ದರು. ಅವರು ಸಾಮಾನ್ಯವಾಗಿ ನೀರಿನ ಸೆಲೆಗಳ ಬಳಿಯೇ ವಾಸಿಸುತ್ತಿದ್ದರು’ ಎಂದು ಶಿಲಾಗೋರಿಗಳ ಕುರಿತಾಗಿ ಅಧ್ಯಯನ ಮಾಡಿರುವ ಡಾ.ಶಿವತಾರಕ್ ಮಾಹಿತಿ ನೀಡಿದರು.

‘ರಾಜ್ಯದಲ್ಲಿ 1,440ಕ್ಕೂ ಹೆಚ್ಚು ಬೃಹತ್ ಶಿಲಾ ತಾಣಗಳಿವೆ. ಅವುಗಳ ಪೈಕಿ ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್ ಅತಿದೊಡ್ಡ ಶಿಲಾ ಗೋರಿಗಳಿರುವ ತಾಣವಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಮಾಡಲು ಪ್ರಸ್ತಾಪಿಸಲಾಗಿದೆ. ಕೋಲಾರದ ಅರಾಬಿ ಕೊತ್ತನೂರು ಮತ್ತು ಕೊಯಿರಾ ಗ್ರಾಮಗಳಲ್ಲಿ ಬೃಹತ್ ಕಲ್ಗೋರಿಗಳನ್ನು ಕಾಣಬಹುದು’ ಎಂದು ಅವರು ಹೇಳಿದರು.

ಗ್ರಾಮಸ್ಥ ಮುನಿನಾರಾಯಣಪ್ಪ, ನರಸಪ್ಪ, ಮುನಿರಾಜು, ಶ್ರೀನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.