ಚಿಂತಾಮಣಿ: ಇಲ್ಲಿನ ಹೊರವಲಯದ ಚಿನ್ನಸಂದ್ರ ಬಳಿ ಸೋಮವಾರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ 75ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ‘ದೇಶದ ಅಭಿವೃದ್ಧಿಯಲ್ಲಿ ರಾಜಕಾರಣ ಬೇಕಿಲ್ಲ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು ಎಂಬುದಾಗಿ ಮಾರ್ಗದರ್ಶನ ಮಾಡಿರುವ ಪ್ರಧಾನಿ ಮೋದಿ ಅವರು ಜನರಿಗೆ ಪರಿಶುದ್ಧ ಕುಡಿಯುವ ನೀರು ಒದಗಿಸಲು ಸಣ್ಣ ನೀರಾವರಿ ಯೋಜನೆಗಳಿಗಾಗಿ ₹5 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ’ ಎಂದರು.
‘ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ಯುವಜನಾಂಗ, ಧ್ವನಿ ಇಲ್ಲದ ಸಮುದಾಯಗಳಿಗೆ ನೆರವಿನ ಹಸ್ತ ಚಾಚುವ ಮೂಲಕ ವಿಶ್ವ ಭೂಪಟದಲ್ಲಿ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಪ್ರಧಾನಿ ಧ್ಯೇಯವಾಗಿದೆ. ಸನಾತನ ಧರ್ಮ ಪಸರಿಸುತ್ತಿರುವ ಹಾಗೂ ಭವಿಷ್ಯದ ನಾಯಕನಾಗಿ ಹೊರಹೊಮ್ಮುತ್ತಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರಧಾನಿಗೆ ಸಾಥ್ ನೀಡುತ್ತಿದ್ದಾರೆ’ ಎಂದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ರೈತರು ಬಡತನವನ್ನು ಮೆಟ್ಟಿ ನಿಂತು ನೀರಾವರಿಗಾಗಿ ಹೋರಾಟ ಮಾಡುತ್ತಾ ಬಂದವರು. ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಮ್ಮ ಇಳಿ ವಯಸ್ಸಿನಲ್ಲೂ ಹೋರಾಟದ ನಾಯಕತ್ವ ವಹಿಸಿಕೊಂಡಿದ್ದಾರೆ. ಬಡತನವನ್ನು ಹೋಗಲಾಡಿಸಬೇಕು. ಜನರಲ್ಲಿ ಸಮಾನತೆ ತರಬೇಕು ಎಂಬ ದೂರದೃಷ್ಟಿಯ ಚಿಂತನೆಯುಳ್ಳ ವಿ.ಗೋಪಾಲಗೌಡ ಮುತ್ಸದ್ಧಿ ನಾಯಕರೂ ಹೌದು ಎಂದು ಕೊಂಡಾಡಿದರು.
ವಿ.ಗೋಪಾಲಗೌಡರು ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದಾಗ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದಾಗ ಹಲವು ಜನಪರ ತೀರ್ಪುಗಳನ್ನು ನೀಡಿದ್ದಾರೆ. ಅವರು ಬಡವರ ಭರವಸೆಯ ದೀಪ. ಕಾರ್ಮಿಕರು, ರೈತರ ಆಶಾಕಿರಣವಾಗಿದ್ದರು ಎಂದರು.
ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಲು ಸಹೋದರಭಾವನೆಯಿಂದ ಪ್ರಯತ್ನ ಮಾಡುವುದಾಗಿ ಆಂಧ್ರಪ್ರದೇಶದ ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್ ಭರವಸೆ ನೀಡಿದರು.
ನ್ಯಾ. ವಿ.ಗೋಪಾಲಗೌಡ ಮಾತನಾಡಿ, ‘ಸಾರ್ವಜನಿಕವಾಗಿ ಜನ್ಮ ದಿನ ಆಚರಿಸಿರುವುದು ನನ್ನ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರಿಗೆ ನ್ಯಾಯದಾನ ಮಾಡಿದ್ದೇನೆ. ಈಗಲೂ ಅದೇ ಕೆಲಸ ಮಾಡುತ್ತಿದ್ದೇನೆ. ಬಡತನ, ನಿರುದ್ಯೋಗ ನಿವಾರಣೆ, ಸಮ ಸಮಾಜ, ಸಾಮಾಜಿಕ, ಪರಿಸರ ಸಂರಕ್ಷಣೆಗಾಗಿ ಹೋರಾಟ ಮಾಡುತ್ತೇನೆ’ ಎಂದು ಹೇಳಿದರು.
ಬಯಲು ಸೀಮೆ ಜಿಲ್ಲೆಗಳ ರೈತರು ಕುಡಿಯುವ ನೀರಿನ ಆತಂಕ ಎದುರಿಸುತ್ತಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆ ಪವನ್ ಕಲ್ಯಾಣ್ ಮಾತನಾಡಿ ಕೃಷ್ಣಾ ನದಿ ನೀರನ್ನು ಕೊಡಿಸುವ ಆಶಾಭಾವನೆಯನ್ನು ಜನರು ಹೊಂದಿದ್ದಾರೆ. ಪವನ್ ಕಲ್ಯಾಣ್ ಖಂಡಿತ ಆ ಕೆಲಸ ಮಾಡುತ್ತಾರೆ ಎಂದು ನುಡಿದರು.
ಕ್ಷೇತ್ರದ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ವಿ. ಗೋಪಾಲಗೌಡ ಅವರ ಜನ್ಮ ದಿನಾಚರಣೆ ನೆಪಮಾತ್ರ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರನ್ನು ಹರಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಕೇಂದ್ರ ಜಲಶಕ್ತಿ ಸಚಿವ ವಿ.ಸೋಮಣ್ಣ ಅವರನ್ನು ಆಹ್ವಾನಿಸಲಾಗಿದೆ ಎಂದರು.
ಮೂರು ಜಿಲ್ಲೆಗಳ ರೈತರು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ಎತ್ತಿನ ಹೊಳೆ ಯೋಜನೆಯು 2014ರಿಂದ ಕುಂಟುತ್ತಾ ಸಾಗುತ್ತಿದೆ. ₹12.5 ಸಾವಿರ ಕೋಟಿಯಿಂದ ಆರಂಭವಾದ ಯೋಜನೆ ₹30 ಸಾವಿರ ಕೋಟಿಗೆ ತಲುಪಿದೆ. ಆದರೂ ನೀರು ಬರುವ ಗ್ಯಾರಂಟಿ ಇಲ್ಲ. ಕೃಷ್ಣಾ ನದಿ ನೀರು ಕರ್ನಾಟಕದ ಗಡಿ ಭಾಗವಾದ ಬಾಗೇಪಲ್ಲಿ, ಮುಳಬಾಗಿಲು, ಕೆ.ಜಿ.ಎಫ್ ಸಮೀಪದವರೆಗೆ ಹರಿಯುತ್ತಿದೆ. ಪವನ್ ಕಲ್ಯಾಣ್ ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜತೆ ಮಾತನಾಡಿ ಮೂರು ಜಿಲ್ಲೆಗಳಿಗೆ ನೀರು ಹರಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ವಕೀಲ ಶ್ರೀನಾಥ್ ಮಾತನಾಡಿದರು. ಸಂಸದ ಮಲ್ಲೇಶಬಾಬು, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯರೆಡ್ಡಿ, ಮುಖಂಡ ವೇಣುಗೋಪಾಲ್, ನವೀನ್ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.
ಆಂಧ್ರಪ್ರದೇಶದ ಹಿಂದೂಪುರ, ಮದನಪಲ್ಲಿ, ಬಿ.ಕೋತ್ತಕೋಟ, ಚಿತ್ತೂರು ಮತ್ತಿತರ ಗಡಿಭಾಗಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.