ADVERTISEMENT

ಜ್ಞಾನದ ಜತೆಗೆ ಸಂಸ್ಕಾರ ಬೆಳೆಸುವುದು ಮುಖ್ಯ

ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 12:11 IST
Last Updated 6 ಸೆಪ್ಟೆಂಬರ್ 2019, 12:11 IST
ಕಾರ್ಯಕ್ರಮದಲ್ಲಿ ಶಿಕ್ಷಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ಚಿಕ್ಕಬಳ್ಳಾಪುರ: ‘ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯ ಜತೆಗೆ ಸಂಸ್ಕಾರವನ್ನು ಬೆಳೆಸಬೇಕು. ಸಂಸ್ಕಾರ ನೀಡದ ಶಿಕ್ಷಣದಿಂದ ಆಗುವ ಲಾಭಕ್ಕಿಂತ ಅಪಾಯವೇ ಹೆಚ್ಚು’ ಎಂದು ಶಾಂತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಹೇಳಿದರು.

ತಾಲ್ಲೂಕಿನ ಪೇರೇಸಂದ್ರದಲ್ಲಿರುವ ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೋಧನೆಯು ಪಠ್ಯಕ್ರಮ ಮುಗಿಸಿ ಹೆಚ್ಚು ಅಂಕ ಗಳಿಸುವಂತೆ ಮಾಡುವುದಕ್ಕೆ ಸೀಮಿತವಾಗದೇ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಅಗತ್ಯವಾದ ಮೌಲ್ಯಗಳು, ಕಾಯಕ ಗೌರವ, ಸಾಮಾಜಿಕ ಕಾಳಜಿ ಮತ್ತು ಮಾನವೀಯ ಕಾಳಜಿಯನ್ನು ಬೆಳೆಸಬೇಕು. ಶಿಕ್ಷಕ ಸಮುದಾಯ ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವ ಮೂಲಕ ಸಮಾಜ ಹಾಗೂ ದೇಶದ ಜ್ಞಾನ ಮತ್ತು ನೈತಿಕ ಉನ್ನತಿಗೆ ಕಾರಣರಾಗಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಪ್ರಾಂಶುಪಾಲ ಪ್ರೊ.ಕೋಡಿರಂಗಪ್ಪ ಮಾತನಾಡಿ, ‘ಶಾಲಾ ಕೊಠಡಿಗಳಲ್ಲಿ ನಡೆಯುವ ಬೋಧನೆ ಹಾಗೂ ಚರ್ಚೆಗಳು ಮಕ್ಕಳ ಕಲಿಕೆಯ ದಾಹವನ್ನು ಹೆಚ್ಚಿಸಬೇಕು. ರಚನಾತ್ಮಕ ಬೋಧನೆ-, ಕಲಿಕೆ, ನಿರಂತರ ಮೌಲ್ಯಮಾಪನ ಹಾಗೂ ವ್ಯಕ್ತಿಗತ ಮಾರ್ಗದರ್ಶನದಿಂದ ಮಕ್ಕಳ ಶೈಕ್ಷಣಿಕ ಪರಿಣಿತಿ ಹಾಗೂ ಅಧ್ಯಯನಶೀಲತೆಯನ್ನು ಪ್ರೋತ್ಸಾಹಿಸಬೇಕು’ ಎಂದರು.

‘ಪ್ರತಿ ವಿದ್ಯಾರ್ಥಿಯ ಶಕ್ತಿ ಸಾಮರ್ಥ್ಯಗಳನ್ನು ಗುರ್ತಿಸಿ ಅವರ ಸರ್ವಾಂಗೀಣ ವಿಕಾಸಕ್ಕೆ ಅಗತ್ಯ ಚಟುವಟಿಕೆಗಳನ್ನು ರೂಪಿಸಬೇಕು. ಶಾಲೆ, ತರಗತಿಯ ವಾತಾವರಣ ಹಾಗೂ ಶಿಕ್ಷಕರ ಬೋಧನಾ ಕ್ರಮವು ಎಲ್ಲ ಮಕ್ಕಳನ್ನು ಒಳಗೊಳ್ಳುವಂತಾಗಬೇಕು. ಇದಕ್ಕಾಗಿ ಶಿಕ್ಷಕರು ನಿರಂತರ ವಿದ್ಯಾರ್ಥಿಗಳಂತೆ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

ಶಿಕ್ಷಕಿಯರಾದ ಅಂಬಿಕಾ, ಅರುಣಾ ಮತ್ತು ಶಾಂತಿಪ್ರಿಯ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಕೃಷಿ ಅಧಿಕಾರಿ ಚಿನ್ನಪ್ಪರೆಡ್ಡಿ ಅವರು ರಾಧಾಕೃಷ್ಣನ್ ಅವರ ಜೀವನ ಮತ್ತು ಸಾಧನೆಯನ್ನು ಪರಿಚಯಿಸಿದರು. ಆಡಳಿತ ಮಂಡಳಿಯಿಂದ ಎಲ್ಲ ಶಿಕ್ಷಕರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.

ಶಾಲೆಯ ಪ್ರಾಂಶುಪಾಲ ಅಮ್ಜದ್ ಪಾಷಾ, ಮಾನವ ಸಂಪನ್ಮೂಲ ಅಧಿಕಾರಿ ದೀಪಕ್ ಮ್ಯಾಥ್ಯೂ, ಶಿಕ್ಷಕರಾದ ಪ್ರೊ.ಹನುಮಂತರೆಡ್ಡಿ, ಸಿ. ನಾಗರಾಜು, ನಜರೀನ್ ತಾಜ್, ಅಜೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.