ಚೇಳೂರು(ಬಾಗೇಪಲ್ಲಿ): ಪಟ್ಟಣದ ಕೆಪಿಎಸ್ ಶಾಲಾವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚೇಳೂರು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಶನಿವಾರ ಸಾರ್ವಜನಿಕರ ಕುಂದು ಕೊರತೆಗಳ ಜನತಾ ದರ್ಶನ ಕಾರ್ಯಕ್ರಮ ನಡೆಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು, ಅಂಗವಿಕಲರು, ಮಹಿಳೆಯರು, ಶಾಲಾ ಮಕ್ಕಳು, ವೃದ್ಧರು ಅಹವಾಲು ಸಲ್ಲಿಸಿದರು. ಕಂದಾಯ ಇಲಾಖೆ 80, ಕೆಎಸ್‍ಆರ್‌ಟಿಸಿ 8, ಆರ್‌ಡಿಪಿಆರ್ 15, ಪೊಲೀಸ್ 3, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2, ಪಶುವೈದ್ಯಕೀಯ ಇಲಾಖೆ, ಅರಣ್ಯ ಇಲಾಖೆಗೆ ತಲಾ ಒಂದು, ಬೆಸ್ಕಾಂ 2, ತಾಲ್ಲೂಕು ಕ್ರೀಡಾಂಗಣ, ಬ್ಯಾಂಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 1, ಅಂಗವಿಕಲ ಮತ್ತು ಹಿರಿಯರ ಕಲ್ಯಾಣ ಇಲಾಖೆ 2 ಅರ್ಜಿ ಸಲ್ಲಿಕೆಯಾಯಿತು.
ಚೇಳೂರು ತಾಲ್ಲೂಕು ಮಿನಿವಿಧಾನಸೌಧದ ಕಚೇರಿಯನ್ನು ಪುಲಗಲ್ ಕ್ರಾಸ್‌ನಲ್ಲಿ ನಿರ್ಮಾಣ ಮಾಡಬೇಕು ಎಂದು ವಕೀಲ ಚಂದ್ರಶೇಖರರೆಡ್ಡಿ ಅಹವಾಲು ಸಲ್ಲಿಸಿದರು.
ಹಳೆ ದಾಖಲೆಗಳು ಕಚೇರಿಯಲ್ಲಿ ಸಿಗುತ್ತಿಲ್ಲ. ಪೋಡಿ, ಹದ್ದುಬಸ್ತು, ಪಹಣಿ ಸೇರಿದಂತೆ ಜಮೀನುಗಳ ದಾಖಲೆ ಪಡೆಯಲು ಕಚೇರಿಗಳಿಗೆ ಅಲೆದಾಡುತ್ತಿದ್ದೇವೆ. ಕೂಡಲೇ ಜಮೀನುಗಳ ಅಗತ್ಯ ದಾಖಲೆಗಳನ್ನು ಚೇಳೂರು ತಾಲ್ಲೂಕು ಕಚೇರಿಯಲ್ಲಿ ವಿತರಣೆ ಮಾಡಿಸುವಂತೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.
ನೆಟಕುಂಟಪಲ್ಲಿ ಗ್ರಾಮದಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ ಬರಲು ತೊಂದರೆ ಇದೆ. ಹೆಚ್ಚುವರಿಯಾಗಿ ಬಸ್ ಸಂಚಾರ ಮಾಡಿಸುವಂತೆ ಅಹವಾಲು ಸಲ್ಲಿಸಿದರು.
ಅನೇಕ ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಜೀವನ ಮಾಡಿದ್ದೇವೆ. ಇದೀಗ ಅರಣ್ಯ ಇಲಾಖೆ ಉಳುಮೆ ಮಾಡಲು ಬಿಡುತ್ತಿಲ್ಲ. ನೋಟೀಸ್ ಜಾರಿ ಮಾಡಿದ್ದಾರೆ ಎಂದು ರೈತರು ಅಹವಾಲು ಸಲ್ಲಿಸಿದರು. ಸೋಮನಾಥಪುರದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಆರಂಭಿಸಬೇಕು. ಚೇಳೂರು ತಾಲ್ಲೂಕು ಕೇಂದ್ರದಲ್ಲಿ ಆಸ್ಪತ್ರೆ ಮಾಡಿಸಬೇಕು. ಚೇಳೂರು ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಕೋರಿಕೆ ಸಲ್ಲಿಸಿದರು.
ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಪಂಪ್, ಮೋಟಾರ್, ಪೈಪ್ ವಿತರಣೆ ಮಾಡಲಾಯಿತು. ಶಾಲಾ ಮಕ್ಕಳಿಗೆ ಜನ್ಮ ದಿನಾಂಕದ ಪ್ರಮಾಣ ಪತ್ರ ವಿತರಿಸಲಾಯಿತು. ಸಂಜೀವಿನಿ ಡೇಎನ್‍ಆರ್‌ಎಲ್‍ಎಂ ಯೋಜನೆಯಡಿಯಲ್ಲಿ ಸಮುದಾಯ ಬಂಡವಾಳ ನಿಧಿಯನ್ನು 18 ಸ್ವಸಹಾಯ ಸಂಘಗಳಿಗೆ ಚೆಕ್ ವಿತರಿಸಲಾಯಿತು. ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ, ಔಷಧಿ ವಿತರಿಸಲಾಯಿತು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ‘ಚೇಳೂರು ನೂತನ ತಾಲ್ಲೂಕು ಆಗಿರುವುದರಿಂದ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ದಾಖಲೆಗಳು ಪಡೆಯಲು ವಿಳಂಬ ಆಗಿದೆ ಎಂಬ ದೂರು ಬಂದಿವೆ. ಚೇಳೂರು ತಾಲ್ಲೂಕಿಗೆ ಪ್ರತ್ಯೇಕವಾಗಿ ಭೂಮಿ ತಂತ್ರಾಂಶ ಸಿದ್ಧವಾಗಿದೆ. ಎಲ್ಲಾ ದಾಖಲೆ ಕೈಬರಹದಿಂದ ನೀಡದೇ, ಡಿಜಿಟಲ್ ಮಾಡಿರುವುದರಿಂದ, ಕೆಲ ದಾಖಲೆಗಳು ಸಮರ್ಪಕವಾಗಿ ನೀಡಲು ಆಗಿಲ್ಲ. ಕೆಲವೇ ತಿಂಗಳಲ್ಲಿ ದಾಖಲೆ ವಿತರಣೆ ಮಾಡುವ ಕಾರ್ಯ ಮಾಡಲಾಗುವುದು. ಹೊಸಹುಡ್ಯದ ಎರಡು ಗ್ರಾಮಗಳ ಹೆಸರುಗಳನ್ನು ಪ್ರತ್ಯೇಕ ಮಾಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ಅನುಮೋದನೆ ಬಂದ ತಕ್ಷಣವೇ ಬದಲಾಯಿಸುತ್ತೇವೆ’ ಎಂದು ತಿಳಿಸಿದರು.
ಶಾಸಕ ಸುಬ್ಬಾರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ 130 ಮಂದಿ ಅಹವಾಲು ಸಲ್ಲಿಸಿದ್ದಾರೆ. ಅಹವಾಲು ಪರಿಶೀಲನೆ ಮಾಡಿ ಅರ್ಹರಿಗೆ ಯೋಜನೆಗಳನ್ನು ತಲುಪಿಸಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಭಾಸ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್‍ಭಟ್, ಅಶ್ವಿನ್, ಬಿ.ಕೆ.ಶ್ವೇತಾ, ಜಿ.ವಿ.ರಮೇಶ್, ಜನಾರ್ದನ್, ಎನ್.ವೆಂಕಟೇಶಪ್ಪ, ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಚಲಪತಿ, ಕೌಸ್ತರ್, ರಾಮು, ಪಿ.ಆರ್.ಚಲಂ, ಕೆ.ಕೆ.ವೆಂಕಟೇಶ್, ಚಂದ್ರಶೇಖರರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.