ADVERTISEMENT

ಚಿಕ್ಕಬಳ್ಳಾಪುರದಲ್ಲಿ ಕಾವೇರಿದ ‘ಜಯಂತಿ ರಾಜಕೀಯ’

2023ರ ವಿಧಾನಸಭಾ ಚುನಾವಣೆಯತ್ತ ಚಿತ್ತ ಹರಿಸಿದರೆ ಡಾ.ಕೆ.ಸುಧಾಕರ್?

ಡಿ.ಎಂ.ಕುರ್ಕೆ ಪ್ರಶಾಂತ
Published 13 ಏಪ್ರಿಲ್ 2022, 19:30 IST
Last Updated 13 ಏಪ್ರಿಲ್ 2022, 19:30 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಮ್ಮಿಕೊಳ್ಳುವ ಜಯಂತಿಗಳ ಸುತ್ತ ರಾಜಕೀಯದ ವಾಸನೆ ಜೋರಾಗಿಯೇ ಬಡಿಯುತ್ತಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕಾರಣದಲ್ಲಿ ಕಾವೇರಿದ ಚರ್ಚೆ ಗರಿಗೆದರಿದೆ.

ಬಲಾಢ್ಯ ಅಥವಾ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಗಣನೀಯವಾಗಿ ಹೊಂದಿರುವ ಸಮುದಾಯಗಳು ಆರಾಧಿಸುವವರ ಜಯಂತಿಗಳನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ. ಅದೇ ಸಣ್ಣ ಪುಟ್ಟ ಸಮುದಾಯಗಳಿಗೆ ಸೇರಿದ ಮಹನೀಯರ ಜಯಂತಿಗಳು ಜಿಲ್ಲಾಡಳಿತದ ಸಭಾಂಗಣಕ್ಕೆ ಮಾತ್ರ ಸೀಮಿತವಾಗುತ್ತಿದೆ.

ಶ್ರೀಕೃಷ್ಣ ಜಯಂತಿ, ದೇವರ ದಾಸಿಮಯ್ಯ ಜಯಂತಿ, ನಿಜಶರಣ ಅಂಬಿಗರ ಚೌಡಯ್ಯ ಜಯಂತಿಗಳು ಜಿಲ್ಲಾಡಳಿತ ಕಚೇರಿ ಸಭಾಂಗಣಕ್ಕೆ ಮಾತ್ರ ಸೀಮಿತವಾಗಿ ನಡೆದವು. ಕನಕದಾಸರ ಜಯಂತಿ, ಕೈವಾರ ತಾತಯ್ಯ ಜಯಂತಿಗಳು ಅದ್ಧೂರಿಯಾಗಿ ನಡೆದವು. ಇದು ಸಚಿವ ಡಾ.ಕೆ.ಸುಧಾಕರ್ ಅವರ ರಾಜಕಾರಣದ ಭಾಗ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನುಡಿಯುತ್ತಿದ್ದಾರೆ. ಕೆಲವು ಮಹನೀಯರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಖುದ್ದು ಡಾ.ಕೆ.ಸುಧಾಕರ್ ಪೂರ್ವಭಾವಿ ಸಭೆ ನಡೆಸಿದ್ದರು.

ADVERTISEMENT

ಜಾತ್ಯತೀತತೆ ಮತ್ತು ಸಮಾನತೆ ಪ್ರತಿಪಾದಿಸಿದ ದಾರ್ಶನಿಕರ ಜನ್ಮದಿನವನ್ನು ಸರ್ಕಾರ ಜಯಂತಿಯಾಗಿ ಆಚರಿಸುತ್ತಿದೆ. ದಾರ್ಶನಿಕರ ಜಯಂತಿಗಳೂ ಜಾತಿಯ ಚೌಕಟ್ಟುಗಳನ್ನು ಮೀರುತ್ತಿಲ್ಲ. ಜಯಂತಿ ಹಿನ್ನೆಲೆಯಲ್ಲಿ ಆಯಾ ಸಮುದಾಯದ ಜನರು ಮತ್ತು ಮುಖಂಡರು ಒಂದೆಡೆ ಸೇರುವರು.

ಎಲ್ಲಜನಪ್ರತಿನಿಧಿಗಳು ಈ ಜಯಂತಿಗಳನ್ನು ‘ಮತ’ ರಾಜಕಾರಣಕ್ಕೆ ಬಳಸಿಕೊಳ್ಳುವುದು ಸಾಮಾನ್ಯ. ಅದರಲ್ಲಿಯೂ ಚುನಾವಣೆ ಪೂರ್ವದ ಈ ವರ್ಷದಲ್ಲಿ ಜಯಂತಿ ರಾಜಕೀಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. 2023ರ ವಿಧಾನಸಭೆ ಚುನಾವಣೆಗೆ 2022 ಪೂರ್ವ ತಾಲೀಮು. ಈ ತಾಲೀಮಿನಲ್ಲಿ ಸಚಿವ ಡಾ.ಕೆ.ಸುಧಾಕರ್ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಇದ್ದಾರೆ. ಬಲಾಢ್ಯ ಸಮುದಾಯಗಳ ಜಯಂತಿ ಆಚರಣೆಯ ವೇಳೆ ಖುದ್ದು ಅವರೇ ಮುತುವರ್ಜಿವಹಿಸುತ್ತಿದ್ದಾರೆ. ಸುಧಾಕರ್ ಅವರ ನಡೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ‘ಜಯಂತಿ ರಾಜಕಾರಣ’ ಎಂದು ಟೀಕಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಕನಕದಾಸರ ಜಯಂತಿಯಲ್ಲಿ ಕುರುಬ ಸಮುದಾಯದ ಮುಖಂಡ ವರ್ತೂರು ಪ್ರಕಾಶ್, ‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗ ಸಮಾಜದ 50 ಸಾವಿರ ಮತದಾರರು ಇದ್ದಾರೆ. ನಾವು 27 ಸಾವಿರ ಇದ್ದೇವೆ. ನೀವು ಸಚಿವ ಸುಧಾಕರ್ ಜತೆ ಇರಬೇಕು. ಸುಧಾಕರ್ ಕೈ ಬಲಪಡಿಸೋಣ’ ಎಂದು ಏರಿದ ಧ್ವನಿಯಲ್ಲಿ ಸಮುದಾಯಕ್ಕೆ ಕರೆ ನೀಡಿದ್ದರು.

ಬಲಿಜ ಸಮುದಾಯದ ಕೈವಾರ ತಾತಯ್ಯ ಜಯಂತಿಯಲ್ಲಿ, ‘ನನ್ನ ಜೀವವಿರುವವರೆಗೂ ಬಲಿಜ ಸಮುದಾಯದ ಜತೆ ಇರುತ್ತೇನೆ’ ಎಂದು ಸಚಿವ ಸುಧಾಕರ್ ಹೇಳಿದ್ದರು. ಇದೇ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಸಹ ಸುಧಾಕರ್ ಪರವಾಗಿ ಬಿಡು ಬೀಸಾಗಿ ಮಾತನಾಡಿದ್ದರು.

‘ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಯಂತಿಗಳನ್ನು ಆಚರಿಸಲಾಗುತ್ತಿದೆ. ಸಮುದಾಯಗಳ ಮತಗಳನ್ನು ದೃಷ್ಟಿಯಲ್ಲಿ ಇಟ್ಟುಕೊಳ್ಳಲಾಗುತ್ತಿದೆ.ಸರ್ಕಾರದಿಂದ ನಡೆಯುವ ಜಯಂತಿಗಳು ಸಚಿವ ಡಾ.ಕೆ.ಸುಧಾಕರ್ಹೊಗಳಿಕೆಗೆ ಮೀಸಲಾಗಿವೆ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ದೂರುವರು.

ಬಾಬೂ ಜಗಜೀವನ ರಾಂ ಜಯಂತಿಯ ವೇಳೆ ನಡೆದ ಜಟಾಪಟಿಯು ದಲಿತ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ನ ಮೂವರು ಮಾಜಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗುವ ಹಂತಕ್ಕೂ ತಲುಪಿತ್ತು. ಹೀಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜಯಂತಿ ರಾಜಕಾರಣ ಪ್ರಬಲವಾಗಿಯೇ ಪ್ರವಹಿಸಿದ್ದು ರಾಜಕೀಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ರಾಜಕೀಯ ಗಿಮಿಕ್

ಮುಂದಿನ ವರ್ಷ ಚುನಾವಣೆ ಇಲ್ಲ ಎಂದಿದ್ದರೆ ಈ ರೀತಿಯಲ್ಲಿ ಜಯಂತಿಗಳನ್ನು ಅದ್ದೂರಿಯಾಗಿ ಮಾಡುತ್ತಿರಲಿಲ್ಲ. ಸಮುದಾಯಗಳನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ದೂರುವರು.

ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಬಲಿಷ್ಠ ಸಮುದಾಯದ ಜಯಂತಿಗಳು ಒಂದು ರೀತಿಯಲ್ಲಿ ನಡೆದರೆ ಸಣ್ಣ ಪುಟ್ಟ ಸಮುದಾಯಗಳ ಜಯಂತಿಗಳು ಮತ್ತೊಂದು ರೀತಿಯಲ್ಲಿ ನಡೆಯುತ್ತಿವೆ. ಸಾಮಾಜಿಕ ನ್ಯಾಯ ಪಾಲನೆ ಆಗುತ್ತಿಲ್ಲ. ಇದನ್ನು ನೋಡಿದರೆ ಇದು ಚುನಾವಣೆಯ ಗಿಮಿಕ್ ಎನ್ನುವುದು ತಿಳಿಯುತ್ತದೆ ಎಂದರು.

ಚುನಾವಣೆ: ಎಲ್ಲರೂ ಬೇಕು

ಈ ಹಿಂದೆ ‌ಸರ್ಕಾರಿ ಕಾರ್ಯಕ್ರಮಗಳು ಸರ್ಕಾರದ ಮಟ್ಟದಲ್ಲಿ ಯಾವುದೇ ರಾಜಕೀಯ ಬಳಸಿಕೊಳ್ಳದೆ ನಡೆಯುತ್ತಿದ್ದವು. ಸುಸಂಸ್ಕೃತವಾಗಿತ್ತು. ಆದರೆ ಈಗ ಚುನಾವಣೆಯ ಪೂರ್ವದ ವರ್ಷದಲ್ಲಿ ಮಾತ್ರ ಎಲ್ಲರೂ ಎಚ್ಚೆತ್ತುಕೊಳ್ಳುವರು ಎಂದುಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಂ. ಹನುಮಂತಪ್ಪ ತಿಳಿಸಿದರು.

ಎಸ್‌ಸಿ, ಎಸ್‌ಟಿ, ಕುರುಬರು ಈಗ ಎಲ್ಲರೂ ಬೇಕು. ಏಕೆಂದರೆ ಇದು ಚುನಾವಣೆ ತಯಾರಿಯ ವರ್ಷ. ಚುನಾವಣೆ ಮುಗಿದ ನಂತರ ಸರ್ಕಾರದ ನಾಲ್ಕು ಗೋಡೆಗಳ ನಡುವೆ ಜಯಂತಿಗಳು ನಡೆಯುತ್ತವೆ. ಇದು ಎಲ್ಲ ಕಾಲದಲ್ಲಿಯೂ ಇದಿದ್ದೇ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.