ADVERTISEMENT

ಚಿಕ್ಕಬಳ್ಳಾಪುರ: ಜಡ್ಡುಗಟ್ಟಿದ ವ್ಯವಸ್ಥೆಗೆ ನ್ಯಾಯಾಂಗದ ಚಾಟಿ

ಜಿಲ್ಲೆಗೆ ನ್ಯಾಯಮೂರ್ತಿಗಳು ಭೇಟಿ ನೀಡಿದಾಗಲೆಲ್ಲಾ ಸಮಸ್ಯೆಗಳು ಬಯಲಿಗೆ

ಡಿ.ಎಂ.ಕುರ್ಕೆ ಪ್ರಶಾಂತ
Published 9 ಜನವರಿ 2023, 19:30 IST
Last Updated 9 ಜನವರಿ 2023, 19:30 IST
2022ರ ಜೂನ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮಿಕಾಂತ್ ಮಿಸ್ಕಿನ್ ಅವರು ಕಾರಾಗೃಹದ ಕಸದಲ್ಲಿದ್ದ ಗುಟ್ಕಾ, ಸಿಗರೇಟ್ ಪ್ಯಾಕ್‌ಗಳನ್ನು ನೋಡುತ್ತಿರುವುದು
2022ರ ಜೂನ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮಿಕಾಂತ್ ಮಿಸ್ಕಿನ್ ಅವರು ಕಾರಾಗೃಹದ ಕಸದಲ್ಲಿದ್ದ ಗುಟ್ಕಾ, ಸಿಗರೇಟ್ ಪ್ಯಾಕ್‌ಗಳನ್ನು ನೋಡುತ್ತಿರುವುದು   

ಚಿಕ್ಕಬಳ್ಳಾಪುರ: ಜಿಲ್ಲೆಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಭೇಟಿ ನೀಡಿದ ಸಂದರ್ಭದಲ್ಲೆಲ್ಲ ಅವ್ಯವಸ್ಥೆಗಳು ದೊಡ್ಡ ಮಟ್ಟದಲ್ಲಿ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುತ್ತಿವೆ. ಸ್ಥಳೀಯ ಆಡಳಿತಗಳು ಮತ್ತು ಸಂಬಂಧಿಸಿದ ಅಧಿಕಾರಿಗಳ ಲೋಪಗಳು ಬಯಲಾಗುತ್ತಿವೆ.

ಇದರಿಂದ ಸಾರ್ವಜನಿಕರಲ್ಲಿ ನ್ಯಾಯಾಂಗದ ಮೇಲೆ ವಿಶ್ವಾಸ ಬಲಗೊಳ್ಳುತ್ತಿದೆ. ‘ಮತ್ತೆ ಮತ್ತೆ ಜಿಲ್ಲೆಗೆ ಬನ್ನಿ, ಅವ್ಯವಸ್ಥೆಗಳು ಬಯಲಾಗುತ್ತಿರಲಿ’ ಎಂದು ನಾಗರಿಕರು ನ್ಯಾಯಮೂರ್ತಿಗಳ ಕೋರುತ್ತಿದ್ದಾರೆ.

ಕಳೆದ ಒಂಬತ್ತು ತಿಂಗಳಲ್ಲಿ ಜಿಲ್ಲೆಗೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಎರಡು ಬಾರಿ ಮತ್ತು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಒಮ್ಮೆ ಭೇಟಿ ನೀಡಿದ್ದಾರೆ. ಈ ಇಬ್ಬರು ನ್ಯಾಯಮೂರ್ತಿಗಳ ಭೇಟಿ ಜಿಲ್ಲೆಯಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ADVERTISEMENT

ಕಳೆದ ಮೇ ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ, ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕು ಆಸ್ಪತ್ರೆಗಳಿಗೆ ಬಿ.ವೀರಪ್ಪ ಭೇಟಿ ನೀಡಿದ್ದರು. ಶಿಡ್ಲಘಟ್ಟ ಆಸ್ಪತ್ರೆಯ ಶೌಚಾಲಯ ಸ್ವಚ್ಛತೆ ಇಲ್ಲದಿರುವುದು, ಹಾಸಿಗೆಗಳ ಮೇಲೆ ಹೊದಿಕೆ ಇಲ್ಲದಿರುವುದು ಕಂಡು ಬೇಸರ ವ್ಯಕ್ತಪಡಿಸಿದ್ದರು. ಅವಧಿ ಮೀರಿದ ಮಾತ್ರೆಗಳನ್ನು ಕಂಡು ಹೌಹಾರಿದರು. ‘ಇದೇನಿದು ರೋಗಿಗಳನ್ನು ವಾಸಿ ಮಾಡಲು ನೀವು ಮಾತ್ರೆಗಳನ್ನು ನೀಡುತ್ತಿದ್ದೀರೋ, ಇಲ್ಲವೇ ಸಾಯಿಸಲು ಕೊಡುತ್ತಿದ್ದೀರೊ’ ಎಂದು ಕಿಡಿಕಾರಿದ್ದರು.

ಚಿಂತಾಮಣಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ಗೈರು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದಿರುವುದು ಸೇರಿದಂತೆ ಹಲವು ಅಧ್ವಾನಗಳು ಅವರ ಗಮನಕ್ಕೆ ಬಂದಿದ್ದವು. ವೈದ್ಯರನ್ನು ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಕಾಪಾಡಿ. ಪ್ಯಾನ್‌ಗಳನ್ನು ಅಳವಡಿಸಿ. ರೋಗಿಗಳಿಗೆ ಅನುಕೂಲ ಆಗುವಂತೆ ಕುರ್ಚಿಗಳನ್ನು ಹಾಕಿ. ಶೌಚಾಲಯದ ಸ್ವಚ್ಛತೆ ಕಾಪಾಡಿ. ಶೌಚಾಲಯವನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ ಗುತ್ತಿಗೆದಾರರನ್ನು ಬದಲಿಸಿ...ಹೀಗೆ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದರು ಬಿ.ವೀರಪ್ಪ.

ನ್ಯಾಯಮೂರ್ತಿ ಸಾರ್ವಜನಿಕ ಅವ್ಯವಸ್ಥೆಗಳ ವಿರುದ್ಧ ಕೆಂಡಾಮಂಡಲರಾಗಿದ್ದು ಮಾಸುವ ಮುನ್ನವೇ ನವೆಂಬರ್‌ನಲ್ಲಿ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡರು. ಸಾರ್ವಜನಿಕರ ದೂರುಗಳನ್ನು ಆಲಿಸಿ ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ಸಮಸ್ಯೆಗಳನ್ನು ಪರಿಹರಿಸಿದ್ದರು. ಕೆಲವು ಸಮಸ್ಯೆಗಳ ಪರಿಹಾರಕ್ಕೆ ನಿಗದಿತ ಗಡುವು ಸಹ ನೀಡಿದ್ದರು.

ಉಪಲೋಕಾಯುಕ್ತರ ಭೇಟಿ ಜಿಲ್ಲಾ ಕೇಂದ್ರದಲ್ಲಿ ಹಲವು ಅವ್ಯವಸ್ಥೆಗಳನ್ನು ಸಾರ್ವಜನಿಕರಿಗೆ ತೆರೆದು ತೋರಿಸಿತ್ತು. ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣ ಹಂತದಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ, ಜಿಲ್ಲಾ ಆಸ್ಪತ್ರೆ, ಅಣಕನೂರು ಬಳಿಯ ಜಿಲ್ಲಾ ಕಾರಾಗೃಹ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಎಂ.ಜಿ.ರಸ್ತೆಯ ಮೆಟ್ರಿಕ್ ಪೂರ್ವ ಬಾಲಕಿಯರು ಮತ್ತು ಪದವಿ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ನ್ಯಾಯಮೂರ್ತಿ ಸಂವಾದ ನಡೆಸಿದ್ದರು.

ಅವರು ಪ್ರವಾಸ ಮುಗಿಸಿ ತೆರಳಿದ ಎರಡು ವಾರಕ್ಕೆ ಅವ್ಯವಸ್ಥೆಗಳು, ಲೋಪಗಳ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ‍್ರಾಂಶುಪಾಲರು, ಉಪನ್ಯಾಸಕರ ವಿರುದ್ಧ ಉಪಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿ, ಲೋಕಾಯುಕ್ತ ಸಂಸ್ಥೆ ಎದುರು ಹಾಜರಾಗಿ ಹೇಳಿಕೆಗಳನ್ನು ನೀಡುವಂತೆ ನೋಟಿಸ್ ಸಹ ನೀಡಿದರು. ಉಪಲೋಕಾಯುಕ್ತರೇ ಮತ್ತೆ ಜಿಲ್ಲೆಗೆ ಬನ್ನಿ ಎಂದು ಆಗ್ರಹ ಈ ವೇಳೆ ವ್ಯಕ್ತವಾಗಿತ್ತು.

ಉಪಲೋಕಾಯುಕ್ತರು ಬಂದು ಹೋದ ಎರಡೇ ತಿಂಗಳಿಗೆ ಮತ್ತೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಬಿ.ವೀರಪ್ಪ ಜಿಲ್ಲಾ ಕೇಂದ್ರದ ಮಹಿಳಾ ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿ, ಅಲ್ಲಿನ ಅನೈರ್ಮಲ್ಯ ಕಂಡು ತಾವೇ ಕುಡುಗೋಲು ಹಿಡಿದು ಸ್ವಚ್ಛತೆಗೆ ಮುಂದಾಗಿದ್ದು ರಾಜ್ಯ ಮಟ್ಟದಲ್ಲಿ ಸದ್ದಾಗಿದೆ.

ಹೀಗೆ ಜಿಲ್ಲೆಗೆ ನ್ಯಾಯಮೂರ್ತಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಒಂದಲ್ಲಾ ಒಂದು ಹುಳುಕು, ಅವ್ಯವಸ್ಥೆಗಳು ಬಯಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ‘ನ್ಯಾಯಮೂರ್ತಿಗಳೇ ಪದೇ ಪದೇ ಬನ್ನಿ. ಜಡ್ಡುಗಟ್ಟಿದ ವ್ಯವಸ್ಥೆಗೆ ಸಾಣೆ ಹಿಡಿಯಿರಿ’ ಎನ್ನುವ ಆಗ್ರಹ ಪ್ರಜ್ಞಾವಂತರದ್ದಾಗಿದೆ.

‘ಅಧಿಕಾರಿಗಳು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು’
ಅಧಿಕಾರಿಗಳು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು. ಆತ್ಮಸಾಕ್ಷಿಯಿಂದ ಕೆಲಸ ಮಾಡಿದರೆ ಸಮಸ್ಯೆಗಳು ಎದುರಾಗುವುದಿಲ್ಲ. ಜನರು ಸಹ ದೂರುಗಳನ್ನು ತರುವುದಿಲ್ಲ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶ ಲಕ್ಷ್ಮಿಕಾಂತ್ ಜೆ.ಮಿಸ್ಕಿನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕರು ವೈಯಕ್ತಿಕ ಮತ್ತು ಸಮುದಾಯಕ್ಕೆ ಎದುರಾಗುವ ಸಮಸ್ಯೆಗಳ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಬಹುದು. ನಾವು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರದ ಮೂಲಕ ಸಮಸ್ಯೆ ಪರಿಹಾರಕ್ಕೆ ಸೂಚಿಸುತ್ತೇವೆ. ಒಂದು ವೇಳೆ ಸಮಸ್ಯೆ ಸರಿಪಡಿಸದಿದ್ದರೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.

ಯಾವುದೇ ಅರ್ಜಿಯನ್ನು ಹಿರಿತನದ ಆಧಾರದಲ್ಲಿ ವಿಲೇವಾರಿ ಮಾಡಬೇಕು. ಮೇಲಧಿಕಾರಿಗಳು ಅರ್ಜಿಗಳ ವಿಲೇವಾರಿ ಬಗ್ಗೆ ನಿಗಾವಹಿಸಬೇಕು ಎಂದರು.

ಕಾನೂನು ಸೇವಾ ಪ್ರಾಧಿಕಾರದ ಬಿಸಿ
ಜಿಲ್ಲೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಒಂದೆಡೆಯಾದರೆ ಮತ್ತೊಂದೆಡೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶ ಲಕ್ಷ್ಮಿಕಾಂತ್ ಜೆ.ಮಿಸ್ಕಿನ್ ಅವರು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಹಾಸ್ಟೆಲ್‌ಗಳು, ಆಸ್ಪತ್ರೆಗಳು, ಪೊಲೀಸ್‌ ಠಾಣೆ ಮತ್ತಿತರ ಕಡೆಗಳಿಗೆ ಭೇಟಿ ನೀಡಿ ಲೋಪಗಳನ್ನು ಸರಿಪಡಿಸುವಂತೆ ತಾಕೀತು ಮಾಡುತ್ತಿದ್ದಾರೆ. ಭೇಟಿಯ ವೇಳೆ ತೀರಾ ಅಧ್ವಾನಗಳು ಕಂಡು ಬಂದರೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ನೀಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ, ಗುಡಿಬಂಡೆ, ಗೌರಿಬಿದನೂರು ತಾಲ್ಲೂಕು ಆಸ್ಪತ್ರೆ, ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಸೂಚಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿನ ಅಧ್ವಾನಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಸಹ ಸಲ್ಲಿಸಿದ್ದರು.

ಕೆಳಹಂತದ ಸಿಬ್ಬಂದಿಯ ನಿರ್ಲಕ್ಷ್ಯ
ಮಹಿಳಾ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಕೇವಲ ಐದಾರು ಜನರು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಅನುದಾನ ಸಹ ನೀಡಿದ್ದಾರೆ. ಹೀಗೆ ನಿಧಾನವಾಗಿ ಕೆಲಸ ಮಾಡಿದರೆ ಹೇಗೆ ವೇಗವಾಗಿ ಕಾಮಗಾರಿ ಪೂರ್ಣವಾಗಲಿದೆ. ಯಾವುದೇ ಕಾರ್ಯಕ್ರಮ ಮತ್ತು ಕಾಮಗಾರಿ ಅನುಷ್ಠಾನದ ವಿಚಾರದಲ್ಲಿ ಕೆಳಹಂತದ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು. ಕಾಲೇಜು ಕಟ್ಟಡದ ವಿಚಾರವಾಗಿ ಇದು ಆಗುತ್ತಿಲ್ಲ.
–ಮಂಜುನಾಥ್, ವಕೀಲ, ಚಿಕ್ಕಬಳ್ಳಾಪುರ

***

ನ್ಯಾಯಾಂಗ ಮೇಲೆ ಅಂತಿಮ ಭರವಸೆ
ಮಹಿಳಾ ಕಾಲೇಜು ವಿಚಾರದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ವಿಫಲವಾಗಿವೆ. ಈ ಎರಡೂ ಅಂಗಗಳು ಜನರ ವಿಶ್ವಾಸ ಕಳೆದುಕೊಂಡಿವೆ. ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕನಿಷ್ಠ ಕಾಳಜಿ ಬೇಡವೇ? ಕಾಲೇಜು ಸೇರಿ ಜಿಲ್ಲೆಯ ಬಹುತೇಕ ಸಮಸ್ಯೆಗಳ ಪರಿಹಾರ ಮತ್ತು ಅಭಿವೃದ್ಧಿ ವಿಚಾರವಾಗಿ ನ್ಯಾಯಾಂಗವೇ ಅಂತಿಮ ದಾರಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
–ಎನ್.ಚಂದ್ರಶೇಖರ್, ಉಪನ್ಯಾಸಕರು, ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.