ಚಿಕ್ಕಬಳ್ಳಾಪುರ: ‘ಡ್ರಗ್ಸ್ ದಂಧೆಯನ್ನು ಕಾಂಗ್ರೆಸ್‌ನವರು ಲಘುವಾಗಿ ಪರಿಗಣಿಸಿದಂತೆ ಕಾಣುತ್ತದೆ. ಇಡೀ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತಹದ್ದನ್ನು ಬುಡ ಸಮೇತ ಕಿತ್ತು ಹಾಕಲು ವಿರೋಧ ಪಕ್ಷದವರೂ ಸಹಕಾರ ನೀಡಬೇಕು. ವಿರೋಧ ಪಕ್ಷದವರು ಕೂಡ ಯಾರನ್ನೂ ರಕ್ಷಣೆ ಮಾಡಬಾರದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಗೃಹ ಸಚಿವರು, ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ಹಿಂದಿನ ಸರ್ಕಾರಗಳು ಏಕೆ ಗಮನ ಕೊಡಲಿಲ್ಲ’ ಎಂದು ಪ್ರಶ್ನಿಸಿದರು.
‘ಇದು ಲಘು ಪ್ರಕರಣವಲ್ಲ. ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಡ್ರಗ್ಸ್ ದಂಧೆ ಮಟ್ಟ ಹಾಕುವ ಜವಾಬ್ದಾರಿ ಕೆಲಸದಲ್ಲಿ ಯಾರು ಕೂಡ ನುಣುಚಿಕೊಳ್ಳಬಾರದು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸ್ಪಷ್ಟ ಕಾಯ್ದೆ ತಂದು ಯುವಕರನ್ನು ರಕ್ಷಿಸುವ ಅವಶ್ಯವಿದೆ. ಯುವಜನರನ್ನು ರಕ್ಷಿಸದೆ ಹೋದರೆ ಇಡೀ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ’ ಎಂದು ತಿಳಿಸಿದರು.
‘ಜಮೀರ್ ಅಹಮ್ಮದ್ ಅವರಿಗೆ ಅಲ್ಪಸಂಖ್ಯಾತ ಎನ್ನುವುದು ರಕ್ಷಣೆಗೆ ಟ್ಯಾಗ್ ಅಲ್ಲ. ತಪ್ಪಿತಸ್ಥರು ಯಾರೇ ಇರಲಿ, ಯಾವುದೇ ಜನಾಂಗದವರು, ಭಾಷಿಕರು, ಶ್ರೀಮಂತ, ಬಡವರೇ ಆಗಿರಲಿ, ಪಕ್ಷಾತೀತ, ಜಾತ್ಯತೀತವಾಗಿ ಬಿಜೆಪಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.