ಚಿಂತಾಮಣಿ: ಕೈವಾರದಲ್ಲಿ ನಡೆಯುತ್ತಿರುವ ಮೂರು ದಿನಗಳ ನಿರಂತರ ಸಂಗೀತೋತ್ಸವಕ್ಕೆ ಜನರು ಹರಿದು ಬರುತ್ತಿದ್ದಾರೆ. ಮೂರನೇ ದಿನವಾದ ಗುರುವಾರ ಅಂದಾಜು 1ಲಕ್ಷ ಜನರು ಸೇರಿದ್ದರು ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ಜನರು ಗುಂಪು ಗುಂಪುಗಳಾಗಿ ಸಾಗರದಂತೆ ಬರುತ್ತಿದ್ದಾರೆ. ಗ್ರಾಮದ ತುಂಬಾ ಜನಜಂಗುಳಿ ತುಂಬಿದೆ. ಹೆಜ್ಜೆ ಇಡಲು ಸಾಧ್ಯವಿಲ್ಲದಂತೆ ಜನ ಸೇರಿದ್ದಾರೆ. ಅದರಲ್ಲೂ ವಿಶೇಷವಾಗಿ ಸಂಜೆ ಮತ್ತು ರಾತ್ರಿ ಹೆಚ್ಚು ಜನರು ಜಮಾಯಿಸುತ್ತಿದ್ದಾರೆ. ಸ್ಥಳೀಯ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಸಂಜೆ ಹಾಗೂ ರಾತ್ರಿ ಭಾಗವಹಿಸುವುದರಿಂದ ಮತ್ತಷ್ಟು ಜನಜಂಗುಳಿ ಅಧಿಕವಾಗಿದೆ.
ಸುಮಾರು 5000 ಭಜನಾ ತಂಡಗಳು ಆಗಮಿಸಿವೆ. ಮಠಕ್ಕೆ ಆಗಮಿಸುತ್ತಿರುವ ಎಲ್ಲ ಜನರಿಗೆ ಯಾವುದೇ ಅಡೆ-ತಡೆಯಿಲ್ಲದೆ ಉಚಿತವಾಗಿ ಅನ್ನದಾಸೋಹ ಏರ್ಪಡಿಸಲಾಗಿದೆ ಎಂದು ಮಠದ ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್ ತಿಳಿಸಿದರು.
ಮೂರು ದಿನಗಳ ಕಾಲ ಪ್ರತಿನಿತ್ಯ ಬೆಳಗ್ಗೆ 7ರಿಂದ ರಾತ್ರಿ 11ರವರೆಗೆ ನಿರಂತರವಾಗಿ ಅನ್ನದಾಸೋಹದ ವ್ಯವಸ್ಥೆ ಇದೆ. ಉಪಾಹಾರಕ್ಕೆ ಉಪ್ಪಿಟ್ಟು, ಪೊಂಗಲ್, ಊಟಕ್ಕೆ ಅನ್ನ–ಸಾಂಬಾರ್, ಪಲ್ಯ, ಮೊಸರನ್ನ, ಒಂದು ಸಿಹಿ, ರಸಂ, ಮಜ್ಜಿಗೆ ನೀಡಲಾಗುತ್ತಿದೆ.
ಪ್ರತಿನಿತ್ಯ ಅಂದಾಜು 50-60 ಸಾವಿರ ಜನ ಊಟ ಮಾಡುತ್ತಿದ್ದಾರೆ. ಭಕ್ತರೇ ಅಕ್ಕಿ, ತರಕಾರಿ, ಬೆಳೆ, ಬೆಲ್ಲ ಮತ್ತಿತರ ಆಹಾರ ಪದಾರ್ಥಗಳನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿ ಕಳುಹಿಸಿದ್ದಾರೆ. ಅಡುಗೆ ಮಾಡಲು 400 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.