ADVERTISEMENT

ಚಿಂತಾಮಣಿ: ಕುರುಟಹಳ್ಳಿಯಲ್ಲಿ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 6:15 IST
Last Updated 6 ಫೆಬ್ರುವರಿ 2023, 6:15 IST
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯಲ್ಲಿ ವೀರಾಂಜನೇಯಸ್ವಾಮಿಗೆ ನಡೆದ ಕಲ್ಯಾಣೋತ್ಸವ
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯಲ್ಲಿ ವೀರಾಂಜನೇಯಸ್ವಾಮಿಗೆ ನಡೆದ ಕಲ್ಯಾಣೋತ್ಸವ   

ಚಿಂತಾಮಣಿ: ತಾಲ್ಲೂಕಿನ ಕುರುಟಹಳ್ಳಿಯಲ್ಲಿನ ವೀರಾಂಜನೇಯ ಬ್ರಹ್ಮರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ಏರ್ಪಡಿಸಲಾಗಿತ್ತು. ಬೆಳಿಗ್ಗೆ ಕಲಶಾರಾಧನೆ, ಅಭಿಷೇಕ, ಹೋಮ, ಅಷ್ಟಾವಧಾನ ಸೇವೆ, ಪೂರ್ಣಾಹುತಿ, ಬಲಿಹರಣ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.

ವೀರಾಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಏರ್ಪಡಿಸಲಾಗಿತ್ತು. ನಂತರ ವಿಶೇಷ ಅಭಿಷೇಕ, ಅಷ್ಟಾವಧನ ಸೇರಿದಂತೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯದ ಒಳಗೆ ಹಾಗೂ ಹೊರಗೆ ವಿದ್ಯುತ್ ದೀಪಗಳ ಅಲಂಕಾರ ಜಗಮಗಿಸುತ್ತಿತ್ತು.

ADVERTISEMENT

ಮಧ್ಯಾಹ್ನ 1.30ಕ್ಕೆ ಶ್ರೀರಾಮಚಂದ್ರ ಸಮೇತ ಹನುಮಂತನ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಕರೆತಂದು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಕೈವಾರ ಕ್ಷೇತ್ರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ, ಬಸವಮಠದ ಮಹದೇವಸ್ವಾಮಿ ಹಾಗೂ ದೇವಾಲಯದ ಧರ್ಮದರ್ಶಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.

ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು. ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ವೀರಾಂಜನೇಯ ದರ್ಶನ ಪಡೆಯುತ್ತಿದ್ದರು. ಭಕ್ತರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ರಾತ್ರಿವರೆಗೂ ಮುಂದುವರೆದಿತ್ತು.

ದಾಸಸಾಹಿತ್ಯ ಪರಿಷತ್, ಜಾನಪದ ಹುಂಜ ಮುನಿರೆಡ್ಡಿ ಜಾನಪದ ಕಾರ್ಯಕ್ರಮ, ಗ್ರಾಮದ ಅಂಬೇಡ್ಕರ್ ಯುವಕ ಸಂಘದಿಂದ ಚಕ್ಕಲ ಭಜನೆ, ಮದನಪಲ್ಲಿ ತಂಡದಿಂದ ಸೀತಾರಾಮ ಕುಲುಕು ಚಕ್ಕಲ ಭಜನೆ ಭಕ್ತರಿಗೆ ಮನರಂಜನೆ ಒದಗಿಸಿತು.

ಗ್ರಾಮದ ಮಹಿಳೆಯರಿಂದ ದೀಪಗಳ ಸಮರ್ಪಣೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡೊಳ್ಳುಕುಣಿತ, ವೀರಗಾಸೆ, ಜಾಲಹಳ್ಳಿ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಸಿಂಗಾರಿ ಮೇಳ(ಚಂಡಿ) ಸಾಂಸ್ಕೃತಿಕ ಕಾರ್ಯಕ್ರಮಗಳು ರಥೋತ್ಸವಕ್ಕೆ ಸಾಥ್ ನೀಡಿದವು. ರಾತ್ರಿ ಮದನಪಲ್ಲಿ ಮಂಡಲಂನ ಪೆಂಚುಪಾಡು ಪಂಚಾಯಿತಿಯ ಪಾಶಂವಾರಿಪಲ್ಲಿ ಸಿದ್ದೇಶ್ವರ ನಾಟಕ ಮಂಡಳಿಯಿಂದ ಸತ್ಯಹರಿಶ್ಚಂದ್ರ ನಾಟಕ ಏರ್ಪಡಿಸಲಾಗಿತ್ತು.

ದೇವಾಲಯದ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಟ್ರಸ್ಟಿಗಳಾದ ಸೀನಪ್ಪ, ಗೋವಿಂದಪ್ಪ, ತಮ್ಮಾರೆಡ್ಡಿ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.