ADVERTISEMENT

ಸಮಸ್ಯೆಗಳ ಆಗರವಾದ ಕಂಬಾರಹಳ್ಳಿ ಶಾಲೆ

1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಒಂದೇ ತರಗತಿಯಲ್ಲಿ ಪಾಠ

ಜೆ.ವೆಂಕಟರಾಯಪ್ಪ
Published 24 ಸೆಪ್ಟೆಂಬರ್ 2022, 5:25 IST
Last Updated 24 ಸೆಪ್ಟೆಂಬರ್ 2022, 5:25 IST
ಗುಡಿಬಂಡೆ ತಾಲ್ಲೂಕು ಗಡಿಯಲ್ಲಿನ ಕಂಬಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಗುಡಿಬಂಡೆ ತಾಲ್ಲೂಕು ಗಡಿಯಲ್ಲಿನ ಕಂಬಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಗುಡಿಬಂಡೆ: ಆಂಧ್ರದ ಗಡಿ ಪ್ರದೇಶದ 500 ಮೀಟರ್ ದೂರದಲ್ಲಿರುವ ತಾಲ್ಲೂಕಿನ ಕಂಬಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ಶಾಲೆಯಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲದ ಕಾರಣ ಹಾಜರಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಶಾಲೆ ಆವರಣದಲ್ಲಿನ ಅಂಗನವಾಡಿಯ 10 ಮಕ್ಕಳು ಸೇರಿದಂತೆ 1ನೇತರಗತಿಯಿಂದ 7ನೇ ತರಗತಿಯಲ್ಲಿ ಕೇವಲ 28 ಮಕ್ಕಳು ಇದ್ದಾರೆ.

ಶಾಲೆಯಲ್ಲಿ ಮೂವರು ಶಿಕ್ಷಕರಿದ್ದು, ಒಬ್ಬರು ಮುಖ್ಯ ಶಿಕ್ಷಕ, ಮತ್ತೊಬ್ಬ ಶಿಕ್ಷಕ ಬಿಸಿಯೂಟದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಕೂರಲು ಬೆಂಚುಗಳೇ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕಲಿಯುತ್ತಿದ್ದಾರೆ. ಒಬ್ಬ ಶಿಕ್ಷಕರು ಮಾತ್ರವೇ 1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಮಕ್ಕಳ ಬೌದ್ಧಿಕ ಗುಣಮಟ್ಟ ಕುಸಿಯುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

ಈ ಶಾಲೆಯ 1 ನೇ ತರಗತಿ, 3ನೇ ತರಗತಿ ಹಾಗೂ 5ನೇ ತರಗತಿಯಲ್ಲಿ ಕೇವಲ ಒಂದು ವಿದ್ಯಾರ್ಥಿ ಮಾತ್ರ ಇದ್ದಾರೆ. 2ನೇ ತರಗತಿಯಲ್ಲಿ 7 ವಿದ್ಯಾರ್ಥಿಗಳು, 4ನೇ ತರಗತಿಯಲ್ಲಿ ಇಬ್ಬರು ಹಾಗೂ 6 ಮತ್ತು 7ನೇ ತರಗತಿಯಲ್ಲಿ ತಲಾ 3 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗುತ್ತಿದ್ದು, ಶಾಲೆ ಮುಚ್ಚುವ ದುಃಸ್ಥಿತಿ ತಲುಪಿದೆ.

ADVERTISEMENT

ಆಂಧ್ರದ ಯೋಜನೆ ಕರ್ನಾಟಕ ಶಾಲೆಗೆ ಪೆಟ್ಟು: ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಹಲವು ವಿದ್ಯಾರ್ಥಿಗಳು ಇದೇ ಶಾಲೆಯನ್ನು ಅವಲಂಬಿಸಿದ್ದರು. ಆದರೆ, ಆಂಧ್ರಪ್ರದೇಶ ಸರ್ಕಾರ ‘ಅಮ್ಮ ವೊಡಿ’ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯಡಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಕುಟುಂಬದ ಮಹಿಳೆಯರಿಗೆ ಸರ್ಕಾರ ವಾರ್ಷಿಕ ₹15 ಸಾವಿರ ಸಹಾಯಧನ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಈ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳು ಇದೀಗ ಆಂಧ್ರಪ್ರದೇಶದ ಸರ್ಕಾರಿ ಶಾಲೆಗೆ ಸೇರುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.