
ಚಿಕ್ಕಬಳ್ಳಾಪುರ: ದಾಸರಲ್ಲಿ ಶ್ರೇಷ್ಠ ದಾಸರು ಕನಕದಾಸರು. 15ನೇ ಮತ್ತು 16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿ, ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುರುಬರ ಸಂಘದಿಂದ ಶನಿವಾರ ನಗರದ ಕನ್ನಡ ಭವನದಲ್ಲಿ ನಡೆದ ದಾಸಶ್ರೇಷ್ಠ ಕನಕದಾಸರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು 15-16ನೇ ಶತಮಾನದ ಸಂತ ಕವಿ. ಜಾತಿ ಪದ್ಧತಿ ಖಂಡಿಸಿ ತಮ್ಮ ಕೀರ್ತನೆ, ಕಾವ್ಯಗಳ ಮೂಲಕ ಅರಿವು ಮೂಡಿಸಿದ್ದಾರೆ. ದಾಸರು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಎಲ್ಲರ ಒಳಿತಿಗಾಗಿ ಅಂದಿನ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದರು.
‘ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆ ನೀಡಿದ್ದಾರೆ. ಅವರಿಂದ ರಚನೆ ಆಗಿರುವ ‘ಮೋಹನ ತರಂಗಿಣಿ’, ‘ನಳಚರಿತ್ರೆ’, ‘ರಾಮಧಾನ್ಯ ಚರಿತೆ’ ಮತ್ತು ‘ಹರಿಭಕ್ತಿಸಾರ’ ಕೃತಿಗಳ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೇಲು ಕೀಳು ಎಂಬ ಭಾವ ತೋರದೆ ಸಮಾನತೆ ಸಾರಬೇಕು. ಮಕ್ಕಳಿಗೆ ಶೈಕ್ಷಣಿಕ ಜ್ಞಾನವನ್ನು ನೀಡಲು ಎಲ್ಲರೂ ಹೆಚ್ಚಿನ ಪ್ರಯತ್ನ ಮಾಡಬೇಕು’ ಎಂದು ತಿಳಿಸಿದರು.
ನ.24ರಂದು ಮುಖ್ಯಮಂತ್ರಿ ಶಿಡ್ಲಘಟ್ಟದಲ್ಲಿ ₹1,700 ಕೋಟಿಗೂ ಹೆಚ್ಚಿನ ಅನುದಾನದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸುವರು ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, 20ಕ್ಕೂ ಹೆಚ್ಚು ಅಧಿಕಾರಿಗಳೊಂದಿಗೆ ತಾಲ್ಲೂಕಿನ ಕೊರ್ಲಹಳ್ಳಿ ಮತ್ತು ವೊಡ್ಡರೆಪಾಳ್ಯಕ್ಕೆ ಭೇಟಿ ನೀಡಿ ಅಲ್ಲಿನ 19 ಜನರಿಗೆ ಹೊಸ ಪಿಂಚಣಿ ಮಂಜೂರಾತಿಗೆ ಕ್ರಮ ವಹಿಸಲಾಗಿದೆ. ಸಮುದಾಯದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆದು ಸಾಧಕರಾಗಬೇಕು ಎಂದು ಅಶಿಸಿದರು.
ಸಮುದಾಯದ ಮುಖಂಡ ಎಂ. ಚಂದ್ರಶೇಖರ್ ಕನಕದಾಸರ ಜಯಂತಿಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರಿಗೆ ಸನ್ಮಾನಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ನಗರದ ಎಂ.ಜಿ ರಸ್ತೆಯಲ್ಲಿರುವ ಮರಳಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕನಕದಾಸರ ಪಲ್ಲಕ್ಕಿ ಮತ್ತು ಜಾನಪದ ಕಲಾತಂಡದ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಬಿ.ಬಿ ರಸ್ತೆ ಮೂಲಕ ವೇದಿಕೆ ಕಾರ್ಯಕ್ರಮದ ಕನ್ನಡ ಭವನದ ವರೆಗೂ ಅದ್ದೂರಿಯಾಗಿ ಸಾಗಿತು.
ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಸಮುದಾಯದ ಎ.ನಾಗರಾಜ್, ಎಂ. ಎಲೆಮರಿಸ್ವಾಮಿ, ವೆಂಕಟರಮಣಪ್ಪ, ಶ್ರೀನಿವಾಸ್, ರಂಗಪ್ಪ, ಎಂ. ಶಂಕರ್, ಎನ್. ಎಸ್. ನಾರಾಯಣಸ್ವಾಮಿ, ನಾಗರಾಜ್, ವೀಣಾ ರಾಮು, ಚಂದ್ರು, ಗೋಪಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.