ಬಾಗೇಪಲ್ಲಿ: ಇಲ್ಲಿನ ಸರ್ಕಾರಿ ಬಾಲಕಿಯರ ಶಾಲಾವರಣದಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿಚಾರಗೋಷ್ಠಿಯಲ್ಲಿ ನ್ಯಾಷನಲ್ ಪಿಯು ಕಾಲೇಜು ಪ್ರಾಂಶುಪಾಲ ಡಾ. ವೆಂಕಟಶಿವಾರೆಡ್ಡಿ ‘ಗಡಿಯಲ್ಲಿ ಕನ್ನಡ ಸರ್ಕಾರಿ ಶಾಲೆಗಳ ಸ್ಥಿತಿಗತಿ’ ಬಗ್ಗೆ ಮಾತನಾಡಿದರು.
‘ತಾಲ್ಲೂಕಿನಲ್ಲಿ 80ಕ್ಕೂ ಹೆಚ್ಚು ಸರ್ಕಾರಿ ಕನ್ನಡ ಶಾಲೆಗಳನ್ನು ವಿಲೀನ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಶಿಕ್ಷಣ ಹಾಗೂ ಉದ್ಯೋಗ, ಬ್ಯಾಂಕ್, ಕಂಪನಿಗಳಲ್ಲಿ ಮೀಸಲು ಕಲ್ಪಿಸಿದಾಗ ಮಾತ್ರ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಉಳಿಯಲಿವೆ. ಹೊಸ ಖಾಸಗಿ ಶಾಲೆಗಳ ಆರಂಭಕ್ಕೆ ಕಡಿವಾಣ ಹಾಕಬೇಕು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಕಡ್ಡಾಯ ಮಾಡಬೇಕು. ತಾಲ್ಲೂಕಿನ 606 ಶಿಕ್ಷಕರ ಪೈಕಿ 478 ಶಿಕ್ಷಕರಿದ್ದಾರೆ. ಉಳಿದ 128 ಹುದ್ದೆಗಳು ಖಾಲಿ ಇವೆ. 18 ಶಾಲೆಗಳಲ್ಲಿ ಅತಿಥಿ ಶಿಕ್ಷಕರಿದ್ದು, ಒಬ್ಬರೂ ಸರ್ಕಾರಿ ಶಿಕ್ಷಕರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಕರನ್ನು ಮಧ್ಯಾಹ್ನದ ಬಿಸಿಯೂಟ, ಗಣತಿಗಳು ಸೇರಿದಂತೆ ವಿವಿಧ ಹೆಚ್ಚುವರಿ ಸೇವೆಗಳಿಗೆ ನಿಯೋಜಿಸಲಾಗಿದೆ. ಇದರಿಂದ ಕೃಷಿಕೂಲಿಕಾರ್ಮಿಕ ಹಾಗೂ ಬಡ ಜನಸಾಮಾನ್ಯರ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಆರ್.ಸುಧಾಕರ್ ಮಾತನಾಡಿ, ಕನ್ನಡ ಸರ್ಕಾರಿ ಶಾಲೆಗಳ ಸ್ಥಿತಿಯು ಶೋಚನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾರೂಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ವೈದ್ಯ ಡಾ.ಎಸ್.ಟಿ.ರವೀಂದ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಅನ್ಯ ರಾಜ್ಯಗಳಲ್ಲಿ ಅವರವರ ಭಾಷೆಗಳಲ್ಲಿ ಮಾತನಾಡುತ್ತಾರೆ ಮತ್ತು ವ್ಯವಹಾರ ಮಾಡುತ್ತಾರೆ. ಅನ್ಯ ರಾಜ್ಯಗಳಿಂದ ವಲಸೆ ಬಂದ ಜನರ ಜೊತೆ ಅವರ ಭಾಷೆಯನ್ನು ನಾವು ಮಾತನಾಡುವುದು ತಪ್ಪು ಎಂದರು.
ತಾಲ್ಲೂಕಿನ 25 ಮಂದಿ ಕವಿ, ಕವಿಯಿತ್ರಿಯರು ಸ್ವರಚಿತ ಕವನಗಳನ್ನು ವಾಚನ ಮಾಡಿದವರಿಗೆ ಪರಿಷತ್ ವತಿಯಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಪಿಎಂಶ್ರೀ ಸರ್ಕಾರಿ ಬಾಲಕಿಯರ ಶಾಲೆ, ಅರಣೋದಯ ಶಾಲೆ ಹಾಗು ಸರ್ಕಾರಿ ಬಾಲಕಿಯರ ಶಾಲಾ ವಿದ್ಯಾರ್ಥಿಗಳು ಕನ್ನಡ ಹಾಡುಗಳಿಗೆ ನೃತ್ಯ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಚಿಕ್ಕಬಳ್ಳಾಪುರ ಸಮಿತಿ ಅಧ್ಯಕ್ಷ ಯಲುವಳ್ಳಿಸೊಣ್ಣೇಗೌಡ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎ.ವಿ.ಪೂಜಪ್ಪ, ಜಿಲ್ಲಾ ಪರಿಷತ್ ಅಧ್ಯಕ್ಷ ಡಾ.ಕೋಡಿರಂಗಪ್ಪ, ನಿಕಟಪೂರ್ವ ಅಧ್ಯಕ್ಷ ಎ.ಜಿ.ಸುಧಾಕರ್, ಸಂಚಾಲಕ ಆರ್.ಹನುಮಂತರೆಡ್ಡಿ, ಗೌರವ ಕಾರ್ಯದರ್ಶಿ ಬಾಣಾಲಪಲ್ಲಿ ಶ್ರೀನಿವಾಸ್, ಎನ್.ಶಿವಪ್ಪ, ಎಚ್.ಎನ್.ಗೋವಿಂದರೆಡ್ಡಿ, ಪಿ.ವೆಂಕಟರವಣಪ್ಪ, ಪಿ.ವೆಂಕಟರಾಯಪ್ಪ, ಬಿ.ವಿ.ಶಿವಯ್ಯ, ಕೆ.ಎನ್.ಹರೀಶ್, ಪಿ.ವೆಂಕಟಸ್ವಾಮಿ, ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಕರ ಸಂಘದ ಅಧ್ಯಕ್ಷೆ ರಾಜರಾಜೇಶ್ವರಿ, ಆಂಜನಪ್ಪ, ಎಂ.ಸಿ.ಅಶ್ವಥ್ಥಪ್ಪ, ಮಹಮದ್ ನೂರುಲ್ಲಾ, ಬಿ.ಎಸ್.ಸುರೇಶ್, ಗೋಪಿನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.