ADVERTISEMENT

ಗೌರಿಬಿದನೂರು: ಕಮಲಕ್ಕೆ ಹೊಸ ನಾಯಕನಾರು?

ಬಿಜೆಪಿ ಅಭ್ಯರ್ಥಿಯ ಬಗ್ಗೆ ತೀವ್ರ ಚರ್ಚೆ; ಹಲವು ಹೆಸರುಗಳು ಮುನ್ನೆಲೆಗೆ

ಎ.ಎಸ್.ಜಗನ್ನಾಥ್
Published 22 ಜುಲೈ 2022, 4:49 IST
Last Updated 22 ಜುಲೈ 2022, 4:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೌರಿಬಿದನೂರು: ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎನ್ನುವ ಚರ್ಚೆ ಬಿಜೆಪಿ ಸೇರಿದಂತೆ ತಾಲ್ಲೂಕು ರಾಜಕಾರಣದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ.

ತಿಂಗಳಿಗೊಂದು ಹೆಸರುಗಳು ಚರ್ಚೆಗೆ ಬರುತ್ತಿವೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿಗೆ ಗ್ರಾಮೀಣ ಭಾಗಗಳಲ್ಲಿಯೂ ನೆಲೆ ಇರುವ ಕ್ಷೇತ್ರಗಳಲ್ಲಿ ಗೌರಿಬಿದನೂರು ಪ್ರಮುಖವಾಗಿದೆ. ಇಡೀ ಜಿಲ್ಲೆಯಲ್ಲಿ ಕಮಲಕ್ಕೆ ಬಲವೇ ಇಲ್ಲ ಎನ್ನುವಂತಹ ಸಂದರ್ಭದಲ್ಲಿ ಅತೀ ಹೆಚ್ಚು ಮತವನ್ನು ಬಿಜೆಪಿಗೆ ನೀಡಿದ ಕ್ಷೇತ್ರ ಗೌರಿಬಿದನೂರು.

ಈ ಹಿಂದಿನ ಎರಡು ಚುನಾವಣೆಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ.2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಎನ್.ಎಂ.ರವಿನಾರಾಯಣ ರೆಡ್ಡಿ 31,840 ಮತ್ತು 2018ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದಕೆ.ಜೈಪಾಲ್ ರೆಡ್ಡಿ 34,759 ಮತಗಳನ್ನು ಪಡೆದಿದ್ದಾರೆ. ಈ ಎರಡೂ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಪಡೆದ ಕ್ಷೇತ್ರ ಗೌರಿಬಿದನೂರು.

ADVERTISEMENT

ಸದ್ಯಗೌರಿಬಿದನೂರಿನಮಾನಸ ಆಸ್ಪತ್ರೆಯ ವೈದ್ಯ ಡಾ.ಎಚ್.ಎಸ್ ಶಶಿಧರ್ ಹೆಸರು ಚಾಲ್ತಿಗೆ ಬಂದಿದೆ. ತಿರುಮಲ ತಿರುಪತಿ ದೇವಾಲಯ ಸಮಿತಿ ನಿರ್ದೇಶಕ ಎಂ.ಎನ್.ಶಶಿಧರ್, ಗೌರಿಬಿದನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಜಿ.ವೇಣುಗೋಪಾಲರೆಡ್ಡಿ ಹೆಸರು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹರಿದಾಡಿತ್ತು. ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಕೆಂಪರಾಜು ಮತ್ತುಕೆ.ಎಚ್.ಪುಟ್ಟಸ್ವಾಮಿ ಗೌಡರೂ ಬಿಜೆಪಿಗೆ ಬರುವರು ಎನ್ನುವ ಅಂತೆ ಕಂತೆಗಳ ಸುದ್ದಿ ಇದೆ. ಹೀಗೆ ಬಿಜೆಪಿ ಅಭ್ಯರ್ಥಿಯ ಹೆಸರುಗಳ ಪಟ್ಟಿ ಬೆಳೆಯುತ್ತಿದೆ. ತಿಂಗಳಿಗೆ ಒಂದು ಹೆಸರುಗಳು ಚರ್ಚೆಗೆ ಬರುತ್ತಿದೆ.

ಡಾ.ಎಚ್.ಎಸ್ ಶಶಿಧರ್ಹೆಸರು ಪಕ್ಷದ ಹೈಕಮಾಂಡ್‌ ಅಂಗಳದಲ್ಲಿದೆ ಎಂಬ ಚರ್ಚೆಗಳು ಬಿಜೆಪಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹೆಚ್ಚು ಹರಿದಾಡುತ್ತಿದೆ. ತಾಲ್ಲೂಕು ಬಿಜೆಪಿಯಲ್ಲಿ ಪ್ರಭಾವಿ ಎನಿಸಿರುವ ಮುಖಂಡ ಎನ್.ಎಂ.ರವಿನಾರಾಯಣರೆಡ್ಡಿ, ‘ಹೂಡಿಕೆಯ ಕುಳ ಬೆಂಗಳೂರಿನ ಕೆ.ಆರ್.ಪುರಂ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಅಭ್ಯರ್ಥಿಯಾದರೆ ಪಕ್ಷಕ್ಕೆ ಅನುಕೂಲ’ ಎಂದು ಬಹಿರಂಗವಾಗಿ ನುಡಿದಿದ್ದರು. ಈ ವಿಚಾರವನ್ನು ಪಕ್ಷದ ರಾಜ್ಯ ನಾಯಕರ ಗಮನಕ್ಕೆ ಈಗಾಗಲೇ ರವಿನಾರಾಯಣರೆಡ್ಡಿ ತಂದಿದ್ದಾರೆ ಎನ್ನಲಾಗಿದೆ.

ಎಂ.ಎನ್.ಶಶಿಧರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನಗರದಲ್ಲಿ ಇತ್ತೀಚೆಗೆ ಅವರು ಶರಣೋತ್ಸವದ ಹೆಸರಿನಲ್ಲಿ ಕಾರ್ಯಕ್ರಮ ಸಂಘಟಿಸಿದ್ದರು. ಅವರೂ ಟಿಕೆಟ್ ಆಕಾಂಕ್ಷಿ ಎನ್ನುತ್ತಾರೆ ಎಂ.ಎನ್.ಶಶಿಧರ್ ಆಪ್ತರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರ ಶಿಷ್ಯ, ಕುರುಬ ಸಮುದಾಯದ ಕೆ.ಕೆಂಪರಾಜು ಮತ್ತು ವಿವಿಧ ರಾಜಕೀಯ ‍ಪಕ್ಷಗಳ ಅತೃಪ್ತರನ್ನು ಸೆಳೆದು ತಮ್ಮದೇ ಆದ ಬಣವನ್ನು ಕಟ್ಟಿರುವಕೆ.ಎಚ್.ಪುಟ್ಟಸ್ವಾಮಿಗೌಡಗೌರಿಬಿದನೂರು ಕ್ಷೇತ್ರದಲ್ಲಿ ‘ಸಮಾಜ ಸೇವಕ’ರಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರ ಹೆಸರುಗಳು ಸಹ ಬಿಜೆಪಿ ಪಾಳಯದಲ್ಲಿಚಾಲ್ತಿಯಲ್ಲಿದೆ.

‘ಸಚಿವ ಡಾ.ಕೆ.ಸುಧಾಕರ್ ಒಪ್ಪಿಗೆ ನೀಡಿದರೆ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ’ ಎನ್ನುತ್ತಾರೆ ಗೌರಿಬಿದನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಜಿ.ವೇಣುಗೋಪಾಲರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.