ADVERTISEMENT

ರೈತರ ಸಮಸ್ಯೆ ಇತ್ಯರ್ಥಕ್ಕೆ ಸ್ಥಳದಲ್ಲೇ ಕ್ರಮ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 7:26 IST
Last Updated 7 ಆಗಸ್ಟ್ 2025, 7:26 IST
ಚಿಕ್ಕಬಳ್ಳಾಪುರದಲ್ಲಿ ನಡೆದ ‘ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಭೆ’ಯಲ್ಲಿ ರೈತ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ‘ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಭೆ’ಯಲ್ಲಿ ರೈತ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು   

ಚಿಕ್ಕಬಳ್ಳಾಪುರ: ಚಿತ್ರಾವತಿ ನದಿಗೆ ಬಾಗೇಪಲ್ಲಿಯ ಕೊಳಚೆ ನೀರು ಸೇರುವುದನ್ನು ಶಾಶ್ವತವಾಗಿ ತಪ್ಪಿಸಲು ಸರ್ಕಾರವು ಅಮೃತ–2 ಯೋಜನೆಯಡಿ ₹ 3.5 ಕೋಟಿ  ನೀಡಿದೆ. ಈ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ‘ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಭೆ’ಯಲ್ಲಿ ರೈತ ಮುಖಂಡರಿಂದ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಪರಿಹರಿಸಲು ರೈತ ಸಂಘಟನೆಗಳಿಂದ ಮನವಿ ಬಂದಿತ್ತು. ಆ ಪ್ರಕಾರ ಸಭೆ ನಡೆಸಿ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಸ್ಥಳದಲ್ಲೆ ಕೈಗೊಳ್ಳಲಾಯಿತು. ಕೆಲವು ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು ಎಂದು ತಿಳಿಸಿದರು.

ADVERTISEMENT

ಚಿತ್ರಾವತಿ ನದಿಗೆ ಬಾಗೇಪಲ್ಲಿಯ ಕೊಳಚೆ ನೀರು ಸೇರ್ಪಡೆ ಆಗುವುದನ್ನು ತಪ್ಪಿಸಲು ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಮೃತ–2 ಯೋಜನೆಯಡಿ ಕಾಮಗಾರಿ ಕೈಗೊಂಡು ಶಾಶ್ವತವಾಗಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ಚೇಳೂರು ಎಪಿಎಂಸಿ ಅಂಗಳದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮಳೆ ನೀರು ಸರಾಗವಾಗಿ ಹರಿಯಲು ಕೆರೆಯಿಂದ ಕೆರೆಗೆ ಸಂಪರ್ಕ ಇರುವ ರಾಜ ಕಾಲುವೆಗಳಲ್ಲಿನ ತ್ಯಾಜ್ಯ ಹಾಗೂ ಹೂಳು ತೆರವುಗೊಳಿಸಬೇಕು. ರೈತರು ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸಿ, ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ, ಸಿಬ್ಬಂದಿ ಗಮನಕ್ಕೆ ತಂದಾಗ ಕಾನೂನು ರೀತಿ ಪರಿಹರಿಸಲು ಸ್ವಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳೆ ವಿಮೆಗೆ ಮನವಿ: 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳ ಅವಧಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ವಿಮಾ ಅಧಿಸೂಚನೆ ಆದೇಶ ಹೊರಡಿಸಲಾಗಿದೆ.

ಜಿಲ್ಲೆಯಲ್ಲಿ ಮಾವು, ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳನ್ನು ವಿಮೆ ಅಡಿ ಅಧಿಸೂಚಿಸಲಾಗಿದೆ. ಬೆಳೆಗಳಿಗೆ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ವಿಮೆ ಪಾವತಿಸಬಹುದು ಎಂದು ತಿಳಿಸಿದರು.

ಚೇಳೂರು ತಾಲ್ಲೂಕು ಕೇಂದ್ರವಾಗಿದೆ. ನಗರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು. ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಬೇಕು. ಬಗರ್‌ ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಬಡ ರೈತ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ರೈತ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಜಿ.ಜಿ. ಹಳ್ಳಿ ಬಿ. ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಕೆ.ಬೈರಾರೆಡ್ಡಿ, ಮುನಿವೆಂಕಟರೆಡ್ಡಿ, ನಾರಾಯಣಸ್ವಾಮಿ, ಮುನಿರಾಜು, ಕೆ.ಎಸ್. ಸೋಮಶೇಖರ್, ನಂಜುಂಡಪ್ಪ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಿಸಿ

ಚೇಳೂರಿಗೆ ಹೊಂದಿಕೊಂಡಿರುವ ಸರ್ವೆ ನಂ. 53ರಲ್ಲಿನ 55.33 ಎಕರೆ ಸರ್ಕಾರಿ ಜಮೀನು ಇದೆ. ಇಲ್ಲಿ ನ್ಯಾಯಾಲಯ ಆಸ್ಪತ್ರೆ ಕಂದಾಯ ಭವನ ಹಾಗೂ ಶಾಲಾ-ಕಾಲೇಜುಗಳ ಸರ್ಕಾರಿ ಕಟ್ಟಡ ನಿರ್ಮಿಸಬೇಕು ಎಂದು ರೈತ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.