ಚಿಕ್ಕಬಳ್ಳಾಪುರ: ಸರ್ಕಾರವು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರಿಗೆ 39 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿದೆ.
ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡ ನಂದಿ ಆಂಜನಪ್ಪ ಮತ್ತು ಬಾಗೇಪಲ್ಲಿ ಮಾಜಿ ಶಾಸಕ ಎನ್.ಸಂಪಂಗಿ ಅವರು ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಿದ ಕಟ್ಟಾಳುಗಳಿಗೆ ಪಕ್ಷವು ಜವಾಬ್ದಾರಿ ನೀಡಿದೆ.
ಎನ್. ಸಂಪಂಗಿ ಅವರಿಗೆ ಕರ್ನಾಟಕ ಗೋದಾಮು ನಿಗಮ ಮತ್ತು ನಂದಿ ಆಂಜನಪ್ಪ ಅವರಿಗೆ ಕರ್ನಾಟಕ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಹಿಂದೆ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವರಿಗೆ ನೀಡಲಾಗಿತ್ತು. ಆದರೆ ಅವರು ಸಚಿವ ಸ್ಥಾನ ಬೇಕು ಎಂದು ಪಟ್ಟು ಹಾಕಿ ನಿಗಮದ ಅಧ್ಯಕ್ಷ ಸ್ಥಾನ ತಿರಸ್ಕರಿಸಿದರು.
ಚುನಾವಣೆಗೆ ಸ್ಪರ್ಧಿಸಿದ್ದ ಆಂಜನಪ್ಪ: ನಂದಿ ಆಂಜನಪ್ಪ ಅಥವಾ ಅಕ್ಕಿ ಆಂಜನಪ್ಪ ಎಂದೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಆಂಜನಪ್ಪ 2019ರ ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದವರು.
ನಂದಿ ಆಂಜನಪ್ಪ ಅವರಿಗೆ 2013ರ ವಿಧಾನಸಭಾ ಚುನಾವಣೆಯಲ್ಲಿಯೇ ವಿಧಾನಸಭೆ ಚುನಾವಣೆಯ ಟಿಕೆಟ್ ದೊರೆಯಬೇಕಾಗಿತ್ತು. ಆದರೆ ಅಂದು ಡಾ.ಕೆ.ಸುಧಾಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ನಂತರ 2019ರಲ್ಲಿ ಡಾ.ಕೆ.ಸುಧಾಕರ್ ಕಾಂಗ್ರೆಸ್ ತೊರೆದ ನಂತರ ನಂದಿ ಆಂಜನಪ್ಪ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಆದರೆ ಅವರು ಪರಾಭವಗೊಂಡರು.
2023ರ ವಿಧಾನಸಭಾ ಚುನಾವಣೆಯಲ್ಲಿಯೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ನಂತರ ಪ್ರದೀಪ್ ಈಶ್ವರ್ ಅವರನ್ನು ಒಮ್ಮತದಿಂದ ಅಭ್ಯರ್ಥಿಯನ್ನಾಗಿ ಮಾಡಿದರು.
ಮಾಜಿ ಶಾಸಕರಿಗೆ ಅವಕಾಶ: ಬಾಗೇಪಲ್ಲಿ ಮಾಜಿ ಶಾಸಕ ಎನ್.ಸಂಪಂಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಅವರ ಪಕ್ಷ ನಿಷ್ಠೆಗೆ ಈಗ ನಿಗಮದ ಜವಾಬ್ದಾರಿ ನೀಡಲಾಗಿದೆ.
2008ರ ವಿಧಾನಸಭೆ ಚುನಾವಣೆಯಲ್ಲಿ ಸಂಪಂಗಿ ಗೆಲುವು ಸಾಧಿಸಿ ಕಾಂಗ್ರೆಸ್ ಶಾಸಕರಾದರು. ಬಾಗೇಪಲ್ಲಿಯಲ್ಲಿ ಎರಡು ಬಾರಿ ಸಂಪಂಗಿ ಶಾಸಕರಾಗಿದ್ದರು. 2013ರಲ್ಲಿ ಪಕ್ಷೇತರವಾಗಿ ಗೆದ್ದ ಸುಬ್ಬಾರೆಡ್ಡಿ ನಂತರ ಕಾಂಗ್ರೆಸ್ ಸೇರಿದರು. ಸುಬ್ಬಾರೆಡ್ಡಿ ಕಾಂಗ್ರೆಸ್ ಸೇರ್ಪಡೆ ಎರಡು ಬಾರಿ ಶಾಸಕರಾಗಿದ್ದ ಎನ್.ಸಂಪಂಗಿ ಅವರ ರಾಜಕೀಯ ಅಸ್ತಿತ್ವಕ್ಕೆ ಪೆಟ್ಟು ನೀಡಿತು. 2018, 2023ರಲ್ಲಿ ‘ಕೈ’ ಟಿಕೆಟ್ ಸುಬ್ಬಾರೆಡ್ಡಿ ಪಾಲಾಯಿತು. ಸಂಪಂಗಿ ಸ್ಪರ್ಧೆಯ ಕಣದಿಂದಲೇ ದೂರವಾದರು.
ಹೀಗೆ ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಇಬ್ಬರು ನಾಯಕರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಪ್ರದೀಪ್ ಈಶ್ವರ್ ವಿರುದ್ಧ ಗುಟುರು
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಣಗಳಿವೆ. ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಒಂದು ಬಣವಾದರೆ ಮತ್ತು ನಂದಿ ಆಂಜನಪ್ಪ ಸೇರಿದಂತೆ ಹಲವು ನಾಯಕರು ಇವರ ವಿರೋಧಿ ಬಣದಲ್ಲಿ ಇದ್ದಾರೆ. ಪ್ರದೀಪ್ ಈಶ್ವರ್ ಗೆಲುವಿನ ನಂತರ ನಂದಿ ಆಂಜನಪ್ಪ ಮತ್ತು ಪ್ರದೀಪ್ ಈಶ್ವರ್ ನಡುವೆ ವೈಮನಸ್ಸು ಹೆಚ್ಚುತ್ತಲೇ ಇದೆ. ಪರಸ್ಪರ ಆರೋಪ ಪ್ರತ್ಯಾರೋಪ ಟೀಕೆಗಳು ನಡೆದಿವೆ. ಆಂಜನಪ್ಪ ಅವರ ನೇತೃತ್ವದಲ್ಲಿಯೇ ಕೆಪಿಸಿಸಿ ಅಧ್ಯಕ್ಷರಿಗೆ ಶಾಸಕರ ವಿರುದ್ಧ ದೂರು ಸಹ ನೀಡಲಾಗಿತ್ತು. ಪ್ರದೀಪ್ ಈಶ್ವರ್ ವಿರೋಧಿ ಬಣದಲ್ಲಿ ಅಗ್ರನಾಯಕನಾಗಿರುವ ಆಂಜನಪ್ಪ ಅವರು ಸಹ ಶಿಷ್ಟಾಚಾರದ ವ್ಯಾಪ್ತಿಗೆ ಬರುತ್ತಾರೆ. ಈಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಸುತ್ತಿನ ಜಟಾಪಟಿ ನಡೆಯಲಿದೆ ಅಥವಾ ಹೊಂದಾಣಿಕೆಯಾಗಿ ಮುಖಂಡರು ಸಾಗುವರೆ ಎನ್ನುವ ಕುತೂಹಲವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.