ADVERTISEMENT

ಅದ್ದೂರಿಯ ಶ್ರೀಕೃಷ್ಣ ಜಯಂತಿ

ಮೆರವಣಿಗೆಯಲ್ಲಿ ಕೀರ್ತನೆಗಳನ್ನು ಅಳವಡಿಸಿಕೊಳ್ಳಲು ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:42 IST
Last Updated 14 ಸೆಪ್ಟೆಂಬರ್ 2025, 5:42 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿಯನ್ನು ಕೃಷ್ಣ ಯಾದವಾನಂದ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿಯನ್ನು ಕೃಷ್ಣ ಯಾದವಾನಂದ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ಯಾರ ಮನಸ್ಸು ಪರಿಶುದ್ಧವಾಗಿ ಶ್ರದ್ಧೆ, ಭಕ್ತಿ, ಸಹನೆ ಹಾಗೂ ನಿಷ್ಠೆಯಿಂದ ಇರುತ್ತದೆಯೊ ಅಂತವರಿಗೆ ಭಗವಂತ ಆಶೀರ್ವದಿಸುತ್ತಾನೆ ಎಂದು ಚಿತ್ರದುರ್ಗ ಯಾದವ ಗುರುಪೀಠದ ಕೃಷ್ಣ ಯಾದವಾನಂದ ಸ್ವಾಮೀಜಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಾದವ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೂ ಧರ್ಮಿಯರು ಶ್ರೀಕೃಷ್ಣನನ್ನು ಆರಾಧಿಸುವ, ಪೂಜಿಸುವ ಸಂಪ್ರದಾಯವನ್ನು ಅನಾದಿಕಾಲದಿಂದಲೂ ಪಾಲಿಸುತ್ತಿದ್ದಾರೆ. ಶ್ರೀಕೃಷ್ಣ ದೇವರು ವಿಶೇಷವಾಗಿ ಬಡವರಿಗೆ ಪ್ರತ್ಯಕ್ಷವಾಗಿ ಆಶೀರ್ವದಿಸುವಂತಹ ದೇವರು ಎಂದರು.

ADVERTISEMENT

ಸತ್ಯ, ಪರಿಶುದ್ದ ಭಕ್ತಿದಾಯಕ ಮನಸ್ಸು ಸಹನೆ, ನಿಷ್ಠೆಯಿಂದಿರುವ ಭಕ್ತನಾದ ಫಂಡರಾಪುರದ ತುಕಾರಾಂ, ಸಂತನಾಮದೇವ ಇನ್ನು ಮುಂತಾದವರಿಗೆ ಪ್ರತ್ಯಕ್ಷವಾಗಿ ಆಶೀರ್ವದಿಸಿದರು. ಅಂತಹ ಭಗವಾನ್ ಶ್ರೀಕೃಷ್ಣರಿಗೆ ಪ್ರಪಂಚದಾದ್ಯಂತ ಭಕ್ತರಿದ್ದಾರೆ. ವರ್ಷಕ್ಕೊಮ್ಮೆ ಜಯಂತಿಗಳ ರೂಪದಲ್ಲಿ ಶ್ರೀ ಕೃಷ್ಣನನ್ನು ನೆನಪಿಸಿಕೊಳ್ಳದೆ ಪ್ರತಿನಿತ್ಯವೂ ಶ್ರೀಕೃಷ್ಣನ ನೆನಪು ನಮ್ಮಲ್ಲಿರಬೇಕು ಎಂದರು.

ದೇವಾಲಯಕ್ಕೆ ಹೋದಾಗ ಕನಿಷ್ಠ 5 ನಿಮಿಷ ಪ್ರಾರ್ಥನೆ ಮಾಡುವ ದೆಸೆಯಲ್ಲಿ ನಮ್ಮ ಧಾರ್ಮಿಕ ಜೀವನವನ್ನು ಪಾಲಿಸುವ ಪ್ರಯತ್ನ ಮಾಡಿದಾಗ ಅದು ಶ್ರೀ ಕೃಷ್ಣನಿಗೆ ಅರ್ಪಣೆ ಆಗುತ್ತದೆ. ಶ್ರೀಕೃಷ್ಣನ ಮೆರವಣಿಗೆಯಲ್ಲಿ ಧ್ವನಿವರ್ಧಕ ಉಪಯೋಗಿಸಿ ಕುಣಿದು ಕುಪ್ಪಳಿಸುವ ಬದಲು ಕನಕದಾಸರ, ಪುರಂದರದಾಸರ ಕೀರ್ತನೆಗಳನ್ನು ಅದರ ಜೊತೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಪೆರೇಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪಿ.ಎನ್. ನರಸಿಂಹರೆಡ್ಡಿ,  ಶ್ರೀಕೃಷ್ಣ ದೇವರ ಲೀಲೆಗಳ ಕುರಿತು ಉಪನ್ಯಾಸ ನೀಡಿದರು. 

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಉಪ ವಿಭಾಗಾಧಿಕಾರಿ ಅಶ್ವಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ಸಮುದಾಯದ ಮುಖಂಡರಾದ ಕೆ.ಎಂ ಮುನೇಗೌಡ, ಆರ್. ವೆಂಕಟೇಶ್, ವಿ.ಮನಿಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್, ನರಸಪ್ಪ, ಗೋಪಾಲಪ್ಪ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

ಶ್ರೀಕೃಷ್ಣ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯಾದವ ಸಮುದಾಯದ ಜನರು

ಮೆರವಣಿಗೆಯ ಸಂಭ್ರಮ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀಕೃಷ್ಣ ಹೂವಿನ ಪಲ್ಲಕ್ಕಿಯು ಮೆರವಣಿಗೆಯೊಂದಿಗೆ ವೇಣುಗೊಪಾಲ ದೇವಾಲಯದಿಂದ ಆರಂಭಗೊಂಡು ಬಿ.ಬಿ ರಸ್ತೆ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ಅದ್ದೂರಿಯಾಗಿ ಸಾಗಿತು. ಜಾನಪದ ತಮಟೆ ವಾದ್ಯ ಸೋಮನ ಕುಣಿತಗಳು ಸಾರ್ವಜನಿಕರ ಗಮನ ಸೆಳೆದವು. ಸಮುದಾಯದ ಹಿರಿಯ ಮುಖಂಡರು ಹಾಗೂ ಅತಿಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.