ADVERTISEMENT

ಚಿಕ್ಕಬಳ್ಳಾಪುರ: ಆರನೇ ಗೆಲುವಿನತ್ತ ನಾಗರಾಜ್ ದೃಷ್ಟಿ

ಪೆರೇಸಂದ್ರ ಕ್ಷೇತ್ರದಲ್ಲಿ ಎನ್‌ಡಿಎ–ಕಾಂಗ್ರೆಸ್ ನಡುವೆ ಹಣಾಹಣಿ

ಡಿ.ಎಂ.ಕುರ್ಕೆ ಪ್ರಶಾಂತ
Published 30 ಜನವರಿ 2026, 6:19 IST
Last Updated 30 ಜನವರಿ 2026, 6:19 IST
ಕೆ.ವಿ.ನಾಗರಾಜ್
ಕೆ.ವಿ.ನಾಗರಾಜ್   

ಚಿಕ್ಕಬಳ್ಳಾಪುರ: ಪೆರೇಸಂದ್ರ ಕ್ಷೇತ್ರದಿಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರಾಗಲು ಕೆ.ವಿ.ನಾಗರಾಜ್ ಮತ್ತು ಕೆ.ಆರ್.ರಾಜಣ್ಣ ಅವರ ನಡುವೆ ನೇರಾ ನೇರ ಹಣಾಹಣಿ ನಡೆದಿದೆ.

ಪೆರೇಸಂದ್ರ ಕ್ಷೇತ್ರವು ತಿಪ್ಪೇನಹಳ್ಳಿ, ಪಟ್ರೇನಹಳ್ಳಿ, ಮಂಚನಬಲೆ, ಆವಲಗುರ್ಕಿ, ಎಸ್‌.ಗೊಲ್ಲಹಳ್ಳಿ, ದಿಬ್ಬೂರು, ದೊಡ್ಡಪೈಲಗುರ್ಕಿ, ಹಾರೋಬಂಡೆ, ಪೆರೇಸಂದ್ರ, ಅರೂರು, ಅಡ್ಡಗಲ್ಲು ಪಂಚಾಯಿತಿ ವ್ಯಾಪ್ತಿಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿ 86 ಡೆಲಿಗೇಟ್‌ಗಳು ಇದ್ದು ತಮ್ಮ ಹಕ್ಕು ಚಲಾಯಿಸುವರು.

ಐದು ಬಾರಿ ಕೋಚಿಮುಲ್ ನಿರ್ದೇಶಕರಾಗಿದ್ದ ಕೆ.ವಿ.ನಾಗರಾಜ್ ಒಮ್ಮೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಎರಡೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಕೆ.ಆರ್.ರಾಜಣ್ಣ ಈ ಹಿಂದೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದೇ ಮೊದಲ ಬಾರಿಗೆ ಹಾಲು ಒಕ್ಕೂಟದ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ADVERTISEMENT

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವಿದ್ದ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಒಬ್ಬರೇ ನಿರ್ದೇಶಕರು ಇದ್ದರು. ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ಚಿಕ್ಕಬಳ್ಳಾಪುರ ಮತ್ತು ಪೆರೇಸಂದ್ರ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿವೆ.

ಪೆರೇಸಂದ್ರ ಕ್ಷೇತ್ರದಲ್ಲಿ ಜಿಲ್ಲೆಯ ಹಿರಿಯ ಸಹಕಾರ ಧುರೀಣ ಕೆ.ವಿ.ನಾಗರಾಜ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರು ಹಾಲು ಒಕ್ಕೂಟದಿಂದ ಎದುರಿಸುತ್ತಿರುವ 7ನೇ ಚುನಾವಣೆ ಇದಾಗಿದೆ. ಸುದೀರ್ಘ ಅನುಭವದ ಕಾರಣ ಅವರಿಗೆ ಹಾಲು ಒಕ್ಕೂಟದ ಆಳ ಅಗಲದ ಅರಿವು ಚೆನ್ನಾಗಿದೆ. ಎನ್‌ಡಿಎ ಅಭ್ಯರ್ಥಿಯಾಗಿರುವ ಅವರ ಪರವಾಗಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದಾರೆ.

ವಕೀಲರೂ ಆಗಿರುವ ಕೆ.ಆರ್.ರಾಜಣ್ಣ ಅವರ ಪರವಾಗಿ ಕಾಂಗ್ರೆಸ್ ಮುಖಂಡರು ಸಕ್ರಿಯವಾಗಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ರಾಜೇಶ್ ಸಹ ನಾಮಪತ್ರ ಸಲ್ಲಿಸಿದ್ದರು. ನಂತರ ಅವರು ನಾಮಪತ್ರ ವಾಪಸ್ ಪಡೆದರು. ಅನುಭವಿ ಮತ್ತು ಹೊಸ ಅಭ್ಯರ್ಥಿಯ ನಡುವಿನ ಹಣಾಹಣಿ ಆಗಿರುವ ಕಾರಣಕ್ಕೆ ಈ ಕ್ಷೇತ್ರ ಗಮನ ಸೆಳೆದಿದೆ.

ಪೆರೇಸಂದ್ರ ಕ್ಷೇತ್ರದಲ್ಲಿ ಗರಗಿರೆಡ್ಡಿ ಎನ್‌ಡಿಎ ಅಭ್ಯರ್ಥಿ ಆಗುವರು ಎನ್ನುವ ಚರ್ಚೆಗಳು ಆರಂಭದಲ್ಲಿ ಇದ್ದವು. ಆದರೆ ಸಂಸದ ಡಾ.ಕೆ.ಸುಧಾಕರ್ ಅವರ ಪ್ರವೇಶದ ಮೂಲಕ ಈ ಚರ್ಚೆಗೆ ತೆರೆ ಎಳೆಯಲಾಯಿತು. ಪ್ರಭಾವ, ಸಂಪರ್ಕ, ಕೆಲಸಗಳು, ಪಕ್ಷ, ಒಳೇಟು ಹೀಗೆ ವಿವಿಧ ವಿಚಾರಗಳು ‍‍ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ಪ್ರಮುಖವಾಗುತ್ತವೆ.

ಕೆ.ಆರ್.ರಾಜಣ್ಣ

‘132 ಡೇರಿ ರಚನೆಗೆ ಕಾರಣ’

ನಾನು ನಿರ್ದೇಶನನಾಗಿದ್ದ ವೇಳೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 132 ಡೇರಿಗಳ ಅಸ್ತಿತ್ವಕ್ಕೆ ಕಾರಣನಾಗಿದ್ದೇನೆ. ಈ ವಿಚಾರವನ್ನು ಬಹಳಷ್ಟು ಡೆಲಿಗೇಟ್‌ಗಳು ಪ್ರಸ್ತಾಪಿಸಿದ್ದಾರೆ. ಇದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಲು ಕಾರಣ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೇರಿ ನಿರ್ಮಿಸಲಾಯಿತು. ಮೆಗಾ ಡೇರಿ ನಿರ್ಮಾಣಕ್ಕೆ ಪ್ರಮುಖವಾಗಿ ಶ್ರಮಿಸಿದ್ದೇನೆ. ಹೈನುಗಾರರ ಪರವಾಗಿ ಮಾಡಿರುವ ಕೆಲಸಗಳು ನನ್ನ ಕೈ ಹಿಡಿಯಲಿವೆ. ಕೆ.ವಿ.ನಾಗರಾಜ್ *** ಡೆಲಿಗೇಟ್‌ಗಳಿಂದ ಉತ್ತಮ ಸ್ಪಂದನೆ ಹೈನುಗಾರಿಕೆಯಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸಬೇಕು. ಈ ಮೂಲಕ ಹಾಲು ಉತ್ಪಾದನೆ ಮತ್ತು ಗುಣಮಟ್ಟವನ್ನು ಹೆಚ್ಚಿಸಬೇಕು ಎನ್ನುವುದನ್ನು ಮುಖ್ಯವಾಗಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ಹೈನುಗಾರರ ಅಭಿವೃದ್ಧಿಗೆ ನನ್ನದೇ ಆದ ಮುನ್ನೋಟಗಳಿವೆ. ನನಗೆ ಡೆಲಿಗೇಟ್‌ಗಳಿಂದ ಉತ್ತಮ ಸ್ಪಂದನೆ ಇದೆ. ಎದುರಾಳಿಗಳು ಡೆಲಿಗೇಟ್‌ಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾರೆ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು.   ಕೆ.ಆರ್.ರಾಜಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.