ADVERTISEMENT

‘ಕಾರ್ಮಿಕ ಸಂಹಿತೆ ವಿರೋಧಿಸಿ 20ರಂದು ಮುಷ್ಕರ’

ಕೇಂದ್ರ ಸರ್ಕಾರದ ವಿರುದ್ಧ ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 3 ಮೇ 2025, 16:15 IST
Last Updated 3 ಮೇ 2025, 16:15 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿದರು   

ಚಿಕ್ಕಬಳ್ಳಾಪುರ: ಕಾರ್ಮಿಕರಿಗೆ ಸಂಬಂಧಿಸಿದ 29 ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಕೇಂದ್ರ ಸರ್ಕಾರ ರೂಪಿಸಿದೆ. ಕಾರ್ಮಿಕ ವಿರೋಧಿ ಈ ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮೇ 20ರಂದು ದೇಶದಾದ್ಯಂತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು. 

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿದೆ ಎಂದರು. 

ಶೇ 70ರಷ್ಟು ಕಾರ್ಮಿಕರು ಈ ಸಂಹಿತೆಗಳ ವ್ಯಾಪ್ತಿಗೆ ಒಳಪಡುವುದೇ ಇಲ್ಲ. ಕಾರ್ಮಿಕ ಸಂಘಗಳ ಮುಷ್ಕರ ಹಕ್ಕುಗಳನ್ನು ನಿರ್ಬಂಧಿಸಲಾಗುತ್ತಿದೆ. ಸಂಘಟಿತರಾಗಿ ಕಾರ್ಯಕ್ರಮಗಳನ್ನು ನಡೆಸಿದರೆ ಅದೂ ಅಪರಾಧ ಆಗುತ್ತದೆ. ಬಂಡವಾಳಶಾಹಿಗಳ ಹಿತಕ್ಕಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ದೂರಿದರು.

ADVERTISEMENT

ನರೇಂದ್ರ ಮೋದಿ ಅವರು ದೇಶವನ್ನು ಹಿಂದುತ್ವದ ಆಧಾರದಲ್ಲಿ ಕಟ್ಟಬೇಕು ಎನ್ನುತ್ತಾರೆ. ಇಲ್ಲಿ ಕೆಲಸ ಮಾಡುವ ಬಹುತೇಕರು ಹಿಂದೂಗಳೇ ಆಗಿದ್ದಾರೆ. ಆದರೆ ಹಿಂದೂ ಎನ್ನುವ ಪದವನ್ನು ಬಂಡವಾಳಶಾಹಿಗಳ ಹಿತ ಕಾಯಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಕಾರ್ಮಿಕರನ್ನು ಜೀತದಾಳು ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಈ ಸಂಹಿತೆಗಳು ಅನುಷ್ಠಾನವಾದರೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇರುವುದಿಲ್ಲ. 8 ಗಂಟೆಗಳ ಬದಲಾಗಿ 12 ಗಂಟೆ ಕೆಲಸ ಮಾಡಬೇಕು. ಹೀಗೆ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸುವಂತೆ ನಡೆಸುತ್ತಿರುವ ಹೋರಾಟಕ್ಕೆ ವಿವಿಧ ವಲಯಗಳ ಕಾರ್ಮಿಕರು ಬೆಂಬಲ ನೀಡಿದ್ದಾರೆ. ಅಂದು ಅವರು ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು. 

ದೇಶದಲ್ಲಿರುವ ಅಸಂಘಟಿತ, ಅನೌಪಚಾರಿಕ ಕಾರ್ಮಿಕರನ್ನು ಕಾರ್ಮಿಕ ಕಾನೂನಿನ ಅಡಿ ತರಬೇಕು ಎನ್ನುವ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ತಿರಸ್ಕರಿಸಿದೆ. 40 ಜನ ಕಾರ್ಮಿಕರಿದ್ದು, ವಿದ್ಯುತ್‌ ರಹಿತ ಉದ್ಯಮಗಳಲ್ಲಿರುವ ಕಾರ್ಮಿಕರು ಮತ್ತು 50 ಕ್ಕಿಂತ ಕಡಿಮೆ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಗುತ್ತಿಗೆದಾರರು ಲೈಸೆನ್ಸ್‌ ಪಡೆಯುವಂತಿಲ್ಲ. ಇದರಿಂದ ದೇಶದ ಶೇ 70ರಷ್ಟು ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯಿಸುವುದಿಲ್ಲ. ಇದರಿಂದ ಕಾರ್ಮಿಕರು ನಾನಾ ಸೌಲಭ್ಯ ವಂಚಿತರಾಗುತ್ತಾರೆ ಎಂದರು.

ಮುಷ್ಕರ ಮಾಡುವವರಿಗೆ, ಬೆಂಬಲ ಸೂಚಿಸುವವರಿಗೆ ಜೈಲು, ದಂಡ, ಕೆಲಸದಿಂದ ತೆಗೆಯುವ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಇದರಿಂದ ಇನ್ನು ಮುಂದೆ ಮುಷ್ಕರ ಮಾಡುವಂತಿಲ್ಲ. ಸಂಘಗಳನ್ನು ಕಟ್ಟುವಂತಿಲ್ಲ. ಇಂತಹ ಮಾರಕವಾದ ಅಂಶಗಳನ್ನು ಈ ಕಾಯಿದೆಯಲ್ಲಿ ಅಡಕಗೊಳಿಸಲಾಗಿದೆ ಎಂದರು.

ಸಿಐಟಿಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ, ಸುಜಾತಾ, ಮಂಜುಳಾ, ವೆಂಕಟಲಕ್ಷ್ಮಮ್ಮ ಮತ್ತಿತರರು ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.