ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಶಂಕುಸ್ಥಾಪನೆಗೊಂಡ ಮೊದಲ ಸರ್ಕಾರಿ ಗೋಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಹೋಬಳಿ ನಾಗರೆಡ್ಡಿಹಳ್ಳಿ ಬಳಿಯ ಗೋಶಾಲೆ ಬಳಕೆಗೆ ಸಿದ್ಧವಾಗಿದೆ. ಆದರೆ ನಿರ್ವಹಣೆಗೆ ಯಾರೂ ಮುಂದೆ ಬರುತ್ತಿಲ್ಲ.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಜಿಲ್ಲಾ ಉಪನಿರ್ದೇಶಕರು 2025ರ ಜ.15ರ ಒಳಗೆ ಆಸಕ್ತ ಸಂಘ ಸಂಸ್ಥೆಗಳು ಸೂಕ್ತ ದಾಖಲಾತಿಗಳೊಂದಿಗೆ ನಿರ್ವಹಣೆಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ಹೊರಡಿಸಿದ್ದರು. ಹೀಗೆ ಪ್ರಕಟಣೆ ಹೊರಡಿಸಿ ಐದು ತಿಂಗಳಾಗಿದೆ. ಆದರೆ ನಿರ್ವಹಣೆಯ ಟೆಂಡರ್ ಪಡೆಯಲು ಯಾರೂ ಮುಂದೆ ಬಂದಿಲ್ಲ!
ಈ ಕಾರಣದಿಂದ ಮಹತ್ವದ ಯೋಜನೆಯೊಂದು ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದರೂ ಬಳಕೆಯಾಗುತ್ತಿಲ್ಲ. ಜಿಲ್ಲೆಯ ಮೊದಲ ಸರ್ಕಾರಿ ಗೋಶಾಲೆಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ)ಯಲ್ಲಿ ನಿರ್ವಹಣೆ ಮಾಡಲು ಪಶುಪಾಲನಾ ಇಲಾಖೆ ಅನುಮತಿ ಸಹ ನೀಡಿದೆ.
ಗೋಶಾಲೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ಹಾಗೂ ಆಸಕ್ತ ಸಾರ್ವಜನಿಕರು, ಸಂಘ ಸಂಸ್ಥೆಗಳು ನಿರ್ವಹಣೆಯ ಕಾರ್ಯಭಾರ ವಹಿಸಿಕೊಳ್ಳಬಹುದು. ಗೋಶಾಲೆಯಲ್ಲಿ ಸಂಬಂಧಿತ ಚಟುಚಟಿಕೆ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಸರ್ಕಾರದಿಂದ ಆಗಿಂದಾಗ್ಗೆ ಹೊರಡಿಸುವ ಷರತ್ತುಗಳನ್ನು ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಗೋಶಾಲೆಯಲ್ಲಿರುವ ಜಾನುವಾರುಗಳಿಗೆ ಕನಿಷ್ಠ ಮೂರು ತಿಂಗಳಿಗೆ ಅಗತ್ಯವಿರುವ ಮೇವನ್ನು ಮುಂಗಡ ದಾಸ್ತಾನು ಮಾಡಿಕೊಳ್ಳಬೇಕು. ಗೋಶಾಲೆ ನಿರ್ವಹಿಸಲು ಅಗತ್ಯ ಸಿಬ್ಬಂದಿ ಇರಬೇಕು. ಇಲಾಖೆಯ ಅಧಿಕಾರಿಗಳು, ಇಲಾಖೆಯಿಂದ ಅಧಿಕೃತ ವ್ಯಕ್ತಿ ಯಾವುದೇ ಸಮಯದಲ್ಲಿ ಭೇಟಿ ನೀಡಿ ಗೋಶಾಲೆಯ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಬಹುದು ಎಂದು ನಿಬಂಧನೆಯೂ ಇದೆ.
ಗೋಶಾಲೆ ಜಾಗವನ್ನು ಒತ್ತುವರಿ ಆಗದಂತೆ ಕ್ರಮವಹಿಸಬೇಕು. ಗೋಶಾಲೆಯ ಜಮೀನು, ಕಟ್ಟಡ, ಉಪಕರಣ, ಜಾನುವಾರಗಳನ್ನು ಅಡಮಾನ ಇಡಬಾರದು. ಇವುಗಳ ಮೇಲೆ ಯಾವುದೇ ರೀತಿಯ ಸಾಲ ಪಡೆಯುವಂತಿಲ್ಲ. ಗುತ್ತಿಗೆ ಅವಧಿ ಮುಗಿದ ನಂತರ ಗೋಶಾಲೆಯ ಸ್ಥಳ ಕಟ್ಟಡ, ಉಪಕರಣ, ಜಾನುವಾರಗಳನ್ನು ಜಿಲ್ಲಾ ಪ್ರಾಣಿದಯಾ ಸಂಘ (ಎಸ್‌ಪಿಸಿಎ) ಸಂಸ್ಥೆಗೆ ಹಿಂದಿರುಗಿಸಬೇಕು.
ಗೋಶಾಲೆಯಲ್ಲಿರುವ ರಾಸುಗಳ ದಾಸ್ತಾನು ವಹಿ, ಜನನ ಮರಣ ವಹಿ, ಮೇವು ದಾಸ್ತಾನು ಪುಸ್ತಕ ಹಾಗೂ ಇತರೆ ಎಲ್ಲಾ ದಾಖಲಾತಿ ವಹಿಗಳನ್ನು ನಿರ್ವಹಿಸಬೇಕು. ಸರ್ಕಾರಿ ಗೋಶಾಲೆಯ ಜಮೀನಿನಲ್ಲಿ ಯಾವುದೇ ಕಟ್ಟಡ ಹಾಗೂ ನಿರ್ಮಾಣ ಕಾರ್ಯ ನಿಷೇಧಿಸಿದೆ. ಯಾವುದೇ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿರ್ದೇಶನ ಪಾಲಿಸಬೇಕು. ನಿಯಮ ಹಾಗೂ ಒಪ್ಪಂದದ ಪ್ರಕಾರ ನಿರ್ವಹಣೆ ಮಾಡದಿದ್ದ ಪಕ್ಷದಲ್ಲಿ ಅಥವಾ ಗೋಶಾಲೆ ನಿಯಮಾವಳಿಯ ವಿರುದ್ಧ ನಡೆದುಕೊಂಡ ಪಕ್ಷದಲ್ಲಿ ಜಿಲ್ಲಾ ಪ್ರಾಣಿದಯಾ ಸಂಘದ ತೀರ್ಮಾನದಂತೆ ಗೋಶಾಲೆಯನ್ನು ಮರಳಿ ಇಲಾಖೆಯ ವಶಕ್ಕೆ ಪಡೆಯಲಾಗುವುದು ಎಂದು ಇಲಾಖೆಯು ನಿಯಮ, ನಿಬಂಧನೆಗಳ ಬಗ್ಗೆ ತಿಳಿಸಿದೆ.
ಈ ನಿಯಮಗಳನ್ನು ಪಾಲಿಸಿ ನಿರ್ವಹಣೆ ಮಾಡಲು ಖಾಸಗಿ ಸಂಸ್ಥೆಗಳು ಮುಂದೆ ಬಂದಿಲ್ಲ. ಈ ಕಾರಣದಿಂದ ಕಟ್ಟಡ ನಿರ್ಮಾಣವಾಗಿದ್ದರೂ ಇಲ್ಲಿಯವರೆಗೆ ಒಂದೇ ಒಂದು ರಾಸು ಸಹ ಇಲ್ಲಿ ಇಲ್ಲ.
ಮೊದಲ ಗೋಶಾಲೆ: ಬಿಜೆಪಿ ಸರ್ಕಾರವು ಗೋಹತ್ಯೆ ನಿಷೇಧದ ಮಸೂದೆ ಅಂಗೀಕರಿಸುವ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತಲಾ ಒಂದು ಗೋಶಾಲೆ ಸ್ಥಾಪಿಸಲಾಗುವುದು ಎಂದಿತ್ತು. ಆ ಪ್ರಕಾರ ನಾಗರೆಡ್ಡಿಹಳ್ಳಿ ಬಳಿ 2021ರ ಆಗಸ್ಟ್ 28ರಂದು ಗೋಶಾಲೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ರಾಜ್ಯದಲ್ಲೇ ಶಂಕುಸ್ಥಾಪನೆಗೊಂಡ ಮೊದಲ ಸರ್ಕಾರಿ ಗೋಶಾಲೆ ಇದು.
ಬೇರೆ ಬೇರೆ ಜಿಲ್ಲೆಗಳಲ್ಲಿ ಗೋಶಾಲೆ ಆರಂಭವಾದರೂ ಜಿಲ್ಲೆಯಲ್ಲಿ ಗೋಶಾಲೆ ಆರಂಭಕ್ಕೆ ಕಾಲ ಕೂಡಲಿಲ್ಲ. ಗೋಶಾಲೆ ನಿರ್ಮಾಣವಾಗಿರುವ ಸ್ಥಳವು ಜೌಗು ಪ್ರದೇಶವಾಗಿದೆ. ಮಳೆ ಮತ್ತು ಜೌಗು ಕಾರಣ ಕಾಮಗಾರಿಗಳಿಗೆ ತೊಂದರೆ ಆಗಿತ್ತು. ಸ್ವಲ್ಪ ಮಳೆ ಬಂದರೂ ಕಾಮಗಾರಿ ಸ್ಥಗಿತವಾಗುತ್ತಿದೆ.
ಜೋರಾಗಿ ಮಳೆ ಸುರಿದರೆ ವಾರಾನುಗಟ್ಟಲೆ ಕಾಮಗಾರಿಯನ್ನೇ ಕೈಗೊಳ್ಳಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಇತ್ತು. ಚೌಗು ಪ್ರದೇಶವಾದ ಕಾರಣ ಹೆಚ್ಚುವರಿಯಾಗಿ ಹಣ ನೀಡುವಂತೆ ಪಶುಸಂಗೋಪನಾ ಇಲಾಖೆ ಸರ್ಕಾರವನ್ನು ಕೋರಿತ್ತು. ಆ ಹಣ ಬಿಡುಗಡೆಯ ತರುವಾಯ ಕಾಮಗಾರಿ ಪೂರ್ಣವಾಯಿತು.
ಶಂಕು ಸ್ಥಾಪನೆಗೊಂಡ ಎರಡು ವರ್ಷಗಳ ತರುವಾಯ ಕಾಮಗಾರಿ ಪೂರ್ಣವಾಯಿತು. ಗೋಶಾಲೆಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ನಿರ್ವಹಣೆ ಮಾಡಲು ಪಶುಪಾಲನಾ ಇಲಾಖೆ ಮುಂದಾಯಿತು. ಆದರೆ ಪಿಪಿಪಿ ಮಾದರಿಯಲ್ಲಿ ನಿರ್ವಹಣೆ ಮಾಡಲು ಖಾಸಗಿ ಸಂಸ್ಥೆಗಳು ಇಲ್ಲಿಯವರೆಗೂ ಮುಂದೆ ಬಂದಿಲ್ಲ.
ಉದ್ಘಾಟನೆಯೂ ಇಲ್ಲ
ನಾನಾ ಅಡೆತಡೆಗಳ ನಡುವೆಯೇ ಗೋಶಾಲೆ ಕಾಮಗಾರಿ ಪೂರ್ಣವಾಗಿದೆ. ಉದ್ಘಾಟನೆಗೂ ಸಜ್ಜಾಗಿದೆ. ನಾಗರೆಡ್ಡಿಹಳ್ಳಿಯ ಸರ್ವೆ ನಂಬರ್ 41ರಲ್ಲಿ 10 ಎಕರೆಯಲ್ಲಿ ಗೋಶಾಲೆ ತಲೆ ಎತ್ತಿದೆ. ಗೋವುಗಳ ಶೆಡ್ ಸುತ್ತಲೂ ಕಾಂಪೌಂಡ್ ಕಾವಲುಗಾರರಿಗೆ ಮನೆ ಮೇವು ಸಂಗ್ರಹ ಚಿಕಿತ್ಸೆ ಮತ್ತು ಪಶು ಆಹಾರ ದಾಸ್ತಾನಿಗೆ ಕೊಠಡಿಗಳು ಹೀಗೆ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಆದರೆ ಇಂದಿಗೂ ಗೋಶಾಲೆ ಕಟ್ಟಡ ಉದ್ಘಾಟನೆಯಾಗಿಲ್ಲ.
‘ನಿರ್ವಹಣೆಗೆ ಮುಂದೆ ಬರುತ್ತಿಲ್ಲ’
‘ಪಿಪಿಪಿ ಮಾದರಿಯಲ್ಲಿ ನಿರ್ವಹಣೆಗೆ ಟೆಂಡರ್ ಕರೆದಿದ್ದೆವು. ನಿರ್ವಹಣೆಗೆ ಯಾರೂ ಮುಂದೆ ಬರುತ್ತಿಲ್ಲ. ಆದರೆ ಅಲ್ಲಿ ರಾಸುಗಳನ್ನು ಬಿಟ್ಟರೆ ನೋಡಿಕೊಳ್ಳಲು ಇಲಾಖೆಯಿಂದಲೇ ತಂಡ ಸಿದ್ಧವಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ರಂಗಪ್ಪ ತಿಳಿಸಿದರು. ಗಂಜಿಗುಂಟೆಯ ಪಶು ವೈದ್ಯರು ನಿರೀಕ್ಷಕರು ಮತ್ತು ‘ಡಿ’ ಗ್ರೂಪ್ ನೌಕರರು ನಿರ್ವಹಣೆ ಮಾಡುವರು. ಪೊಲೀಸರು ಪ್ರಕರಣಗಳಲ್ಲಿ ರಕ್ಷಿಸಿದ ರಾಸುಗಳನ್ನು ಬಿಡಲು ಸಹ ಅವಕಾಶವಿದೆ. ಬರಗಾಲ ಇದಿದ್ದರೆ ಬಹುಶಃ ಜಾನುವಾರುಗಳನ್ನು ಜನರೇ ಬಿಡುತ್ತಿದ್ದರು. ಇಲ್ಲಿಯವರೆಗೂ ಗೋಶಾಲೆಗೆ ಯಾವುದೇ ರಾಸುಗಳನ್ನು ಬಿಟ್ಟಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.