ಗೌರಿಬಿದನೂರು: ದೇವನಹಳ್ಳಿ ತಾಲ್ಲೂಕಿನ 13 ಹಳ್ಳಿಗಳ ಕೆಐಎಡಿಬಿ ಭೂ ಸ್ವಾಧೀನ ಮಾಡಿಕೊಳ್ಳುವುತ್ತಿರುವುದು ಸರ್ಕಾರದ ರೈತ ವಿರೋಧಿ ನೀತಿಯಾಗಿದೆ ಎಂದು ಭೂಮಿ ಮತ್ತು ವಸತಿ ಹೋರಾಟ ಸಮಿತಿ ರಾಜ್ಯ ಖಜಾಂಚಿ ಆರ್.ಶ್ರೀರಂಗಾಚಾರಿ ದೂರಿದರು.
ಅಧಿಕಾರಕ್ಕೆ ಬರುವ ಮುನ್ನ ಭೂ ಸ್ವಾಧೀನ ಕೈ ಬಿಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಮೇಲೆ ಆ ಮಾತು ಮರೆತು, ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದಾರೆ. ಸರ್ಕಾರ 2013ರ ಭೂ ಸುಧಾರಣೆ ಕಾಯ್ದೆಗಳನ್ನು ಗಾಳಿಗೆ ತೂರಿ ದೇವನಹಳ್ಳಿ ಸುತ್ತಮುತ್ತಲಿನ 1,771 ಎಕರೆ ಜಮೀನನ್ನು ಸ್ವಾಧೀನ ಮಾಡಿಕೊಂಡು, ಕಾರ್ಪೊರೇಟ್ ಕಂಪನಿಗಳಿಗೆ ಮತ್ತು ಬಂಡವಾಳ ಶಾಹಿಗಳಿಗೆ ನೀಡಲು ಮುಂದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಎದ್ದೇಳು ಕರ್ನಾಟಕ ಸಂಚಾಲಕ ಸೋಮಯ್ಯ, ಸರ್ಕಾರ ರೈತರಿಗೆ ಭೂಮಿ ನೀಡಿದಂತೆಯೇ ನೀಡಿ ಮತ್ತೆ ಅದನ್ನು ಕಸಿದುಕೊಳ್ಳುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಜುಲೈ 3 ರಂದು ನಡೆಯುತ್ತರುವ ಹೋರಾಟಕ್ಕೆ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.
ದಸಂಸ ತಾಲ್ಲೂಕು ಸಂಚಾಲಕ ನರಸಿಂಹಮೂರ್ತಿ, ಎನ್.ನಾರಾಯಣಸ್ವಾಮಿ, ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಜಿ. ಶಾಮೀರ್ , ಲಕ್ಷ್ಮೀನಾರಾಯಣ, ರಾಮಕೃಷ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.