
ಶಿಡ್ಲಘಟ್ಟ: ತಾಲ್ಲೂಕಿನ ಬುಡಗವಾರಹಳ್ಳಿ ಸುತ್ತಮುತ್ತಲಿನ ಪ್ರದೇಶದ ಗೋಮಾಳ ಜಮೀನಿನ ಸ್ವಾಧೀನದಲ್ಲಿರುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಗುರುವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ರೈತರ ನಡುವೆ ವಾಗ್ವಾದ ನಡೆದು, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು.
ತಹಶೀಲ್ದಾರ್ ಗಗನ ಸಿಂಧು ಅವರು ಪೊಲೀಸರ ಸರ್ಪಗಾವಲಿನಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರದೇಶಕ್ಕೆ ತೆರಳಿದ ವೇಳೆ ಸ್ವಾಧೀನದಲ್ಲಿರುವ ರೈತರು ಮತ್ತು ಮಹಿಳೆಯರು ಅಧಿಕಾರಿಗಳ ಕ್ರಮ ವಿರೋಧಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 50 ವರ್ಷಗಳಿಂದ ನಾವು ಸ್ವಾಧೀನದಲ್ಲಿದ್ದೇವೆ. ಇದರಿಂದ ನಮ್ಮ ಜೀವನ ನಡೆಯುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ನಮಗೆ ಗಿಡಗಳು ಕೊಟ್ಟು ತಮ್ಮ ತಮ್ಮ ತೋಟಗಳಲ್ಲಿ ಹಾಕಿಕೊಳ್ಳಿ ಎಂದು ಹೇಳಿದ್ದರಿಂದ ನಾವು ಹಾಕಿಕೊಂಡಿದ್ದೇವೆ. ಹಾಕಿರುವ ದುಡ್ಡು ಸಹ ನಮಗೆ ಕೊಟ್ಟಿಲ್ಲ. ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆಸಿದ್ದಾರೆ. ಈಗ ನಮ್ಮ ಜಮೀನು ಸರ್ವೆ ಮಾಡಲು ಬಂದಿರುವುದು ಸರಿನಾ ಎಂದು ರೋದು ಎಷ್ಟರಮಟ್ಟಿಗೆ ಸರಿ ಎಂದು ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು.
ಸರ್ಕಾರಿ ಗೋಮಾಳದಲ್ಲಿ ನಾವು ಸ್ವಾಧೀನದಲ್ಲಿದ್ದೇವೆ. ಕಾನೂನಿನ ಪ್ರಕಾರ ಸಾಗುವಳಿ ಚೀಟಿ ನೀಡಲು 51, 53, 57 ಅರ್ಜಿಗಳನ್ನು ಹಾಕಿಕೊಂಡಿದ್ದೇವೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಯಾವುದಾದರೂ ದಾಖಲೆ ಇದ್ದರೆ ಅವರ ಹೆಸರಿನಲ್ಲಿ ಆರ್‌ಟಿಸಿ ಬರುತ್ತದೆ. ಆದರೆ, ಪಹಣಿಯಲ್ಲಿ ಯಾವುದು ಇಲ್ಲ, ಸರ್ವೆ ಏಕೆ ಎಂದು ಅಧಿಕಾರಿಗಳನ್ನು ರೈತರು ಪ್ರಶ್ನಿಸಿದರು.
ತಹಶೀಲ್ದಾರ್ ಅವರು ಯಾರು ಯಾವ ಬೆಳೆ ಬೆಳೆದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾವ ಗಿಡಗಳನ್ನು ನಾಟಿ ಮಾಡಿದ್ದಾರೆ ಎಂದು ಪರಿಶೀಲನೆ ನಡೆಸೋಣ ಎಂದಾಗ ಮುಂದೆ ಸಾಗಲು ಮಹಿಳೆಯರು ಮತ್ತು ರೈತರು ಅಡ್ಡ ಪಡಿಸಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ಅರಣ್ಯಾಧಿಕಾರಿಗಳನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಈ ಕೆಲಕಾಲ ಗೊಂದಲ ಮತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ತಹಶೀಲ್ದಾರ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ನಾನು ಯಾವುದೇ ಕಾರಣಕ್ಕೂ ರೈತ ವಿರೋಧಿ ನೀತಿಯನ್ನು ಅನುಸರಿಸುವುದಿಲ್ಲ. ರೈತರ ಪರವಾಗಿ ಇರುತ್ತೇವೆ ಎಂದು ಭರವಸೆ ನೀಡಿದ ಬಳಿಕ ಎಲ್ಲಾ ರೈತರು ಮತ್ತು ಮಹಿಳೆಯರು ತಮ್ಮ ಸ್ವಾಧೀನದಲ್ಲಿರುವ ಜಮೀನುಗಳನ್ನು ತೋರಿಸಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್ ಶ್ಯಾಮಲಾ, ವೇಣುಗೋಪಾಲ್ ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ. ಕೆ.ಅರುಣ್ ಕುಮಾರ್, ಲಕ್ಷ್ಮಿನಾರಾಯಣ ರೆಡ್ಡಿ, ಟಿ.ಕೆ.ಅರುಣ್ ಕುಮಾರ್, ಮಾರುತಿ, ರಮೇಶ್ ಬಾಬು, ರೆಡ್ಡಪ್ಪ, ಈಶ್ವರ ರೆಡ್ಡಿ, ರಾಮಾಂಜಿನಪ್ಪ, ಪೆದ್ದಪಯ್ಯ, ರವಿಪ್ರಕಾಶ್, ಈಶ್ವರೆಡ್ಡಿ, ಯರಪ್ಪ, ನಕ್ಕಲಹಳ್ಳಿ, ಬುಡಗವಾರಹಳ್ಳಿ, ದಾಸಾರ್ಲಹಳ್ಳಿ ಗ್ರಾಮದ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.