ADVERTISEMENT

ಬೀದಿ ದೀಪಗಳಿಗೆ ಎಲ್ಇಡಿ ಸ್ಪರ್ಶ

ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 4:29 IST
Last Updated 22 ನವೆಂಬರ್ 2020, 4:29 IST
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ಲತಾ ಮಾತನಾಡಿದರು
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ಲತಾ ಮಾತನಾಡಿದರು   

ಚಿಕ್ಕಬಳ್ಳಾಪುರ: ‘ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬೀದಿದೀಪಗಳ ಕಂಬಗಳಲ್ಲಿ ಎಲ್‍ಇಡಿ ದೀಪ ಅಳವಡಿಸುವ ಯೋಜನೆಯ ಪ್ರಸ್ತಾವವನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆ ಪಡೆದ ಬಳಿಕ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಆರ್. ಲತಾ ಹೇಳಿದರು.

ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 158 ವಾರ್ಡ್‌ಗಳಿದ್ದು, 24,802 ಕಂಬಗಳಲ್ಲಿ 19,538 ಬೀದಿದೀಪಗಳಿವೆ. ಅವುಗಳಲ್ಲಿ ಶೇಕಡ 12 ರಷ್ಟು ಮಾತ್ರ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಾದ್ಯಂತ ಪೂರ್ಣವಾಗಿ ಎಲ್‌ಇಡಿ ದೀಪಗಳನ್ನು ಅಳವಡಿಸಿದರೆ, ವಿದ್ಯುತ್ ಬಿಲ್ ತಗ್ಗಿಸಿದಂತಾಗುವ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಹಾಗಾಗಿ, ಶೀಘ್ರದಲ್ಲೇ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಎಲ್‌ಇಡಿ ಅಳವಡಿಕೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ, ಅನುಮೋದನೆಯಾದ ಕೂಡಲೇ ತುರ್ತಾಗಿ ಟೆಂಡರ್ ಕರೆದು ಕಾರ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಸ್ವಚ್ಛ ಸರ್ವೇಕ್ಷಣಾ ಅಭಿಯಾನಯನ್ನು ಯಶಸ್ವಿಗೊಳಿಸಲು ಹೆಚ್ಚಿನ ರೀತಿಯಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಪ್ರತಿ ವಾರ್ಡ್‌ಗಳಲ್ಲಿ ಸ್ವಚ್ಛತಾ ಕ್ಯಾಪ್ಟನ್ ನೇಮಕ ಮಾಡಿ, ಸ್ವಚ್ಛತಾ ಕಾರ್ಯದ ಬಗ್ಗೆ ಪ್ರತಿನಿತ್ಯ ಮಾಹಿತಿ ನೀಡಬೇಕು’ ಎಂದು ಹೇಳಿದರು.

‘ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು. ಕಸ ವಿಂಗಡಣೆ ಅತಿಮುಖ್ಯವಾಗಿದ್ದು, ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಮಾದರಿಯಲ್ಲೇ ಇತರೆ ತಾಲ್ಲೂಕುಗಳ ಅಧಿಕಾರಿಗಳು ನಿರ್ವಹಣೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯವಿಲೇವಾರಿಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

‘ಮನೆಗಳಲ್ಲಿ ಕಸ ವಿಂಗಡಣೆ ಮಾಡುವಂತೆ ಹೆಚ್ಚಿನ ರೀತಿಯಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸಿ, ಹೀಗೆ ಸಂಗ್ರಹವಾದ ಕಸವನ್ನು ವೈಜ್ಞಾನಿಕವಾಗಿ ವಿಂಗಡಣೆಗೆ ಅಗತ್ಯ ಕ್ರಮ ಕೈಗೊಳ್ಳಿ. ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರೈಗೊಳ್ಳಲಾಗುವುದು’ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ಮಾತನಾಡಿ, ‘ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಯೊಂದರ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಶೇಕಡ 12ರಷ್ಟು ಬೀದಿದೀಪಗಳ ಕಂಬಗಳಲ್ಲಿ ಮಾತ್ರ ಎಲ್‌ಇಡಿ ದೀಪ ಅಳವಡಿಸಿರುವುದು ಕಂಡುಬಂದಿದೆ ’ ಎಂದು ಹೇಳಿದರು.

‘ವಿದ್ಯುತ್ ಪೋಲನ್ನು ತಡೆಯುವ ನಿಟ್ಟಿನಲ್ಲಿ ಸಾಫ್ಟ್ ವೇರ್ ಆಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣ ವ್ಯವಸ್ಥೆ(ಸಿಸಿಎಂಎಸ್) ಜಾರಿಗೆ ತೀರ್ಮಾನಿಸಲಾಗಿದೆ. ಎಲ್‌ಇಡಿ ದೀಪಗಳ ಬಳಕೆಯಿಂದ ತಾಪಮಾನ ಕಡಿಮೆಯಾಗುವ ಜತೆಗೆ ವಿದ್ಯುತ್‌ ಬಿಲ್‌ ಸಹ ಕಡಿಮೆಯಾಗಲಿದೆ’ ಎಂದರು.

ಸಭೆಯಲ್ಲಿ ಕಾರ್ಯಪಾಲಕ ಎಂಜಿನಿಯರ್, ಜಿಲ್ಲೆಯ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.