ADVERTISEMENT

‘ಮೊಬೈಲ್ ದಾಸ್ಯದಿಂದ ಮಕ್ಕಳು ಹೊರಬರಲಿ’

ವರದನಾಯಕನಹಳ್ಳಿ: ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಯ ತಾಲ್ಲೂಕು ಮಟ್ಟದ ಸಭೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 6:21 IST
Last Updated 1 ಜನವರಿ 2023, 6:21 IST
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ವೀರ ಸೊಣ್ಣಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳ ತಾಲ್ಲೂಕು ಮಟ್ಟದ ಒಕ್ಕೂಟದ ಸಭೆಯಲ್ಲಿ ಫೌಂಡೇಷನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ತಂಡದ ನಾಯಕ ಭಕ್ತರ್‌ವಲಿ ಮಾತನಾಡಿದರು
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ವೀರ ಸೊಣ್ಣಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳ ತಾಲ್ಲೂಕು ಮಟ್ಟದ ಒಕ್ಕೂಟದ ಸಭೆಯಲ್ಲಿ ಫೌಂಡೇಷನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ತಂಡದ ನಾಯಕ ಭಕ್ತರ್‌ವಲಿ ಮಾತನಾಡಿದರು   

ಶಿಡ್ಲಘಟ್ಟ: ಮಕ್ಕಳು ಹಿರಿಯರೊಂದಿಗೆ ಬೆರೆಯುವುದರಿಂದ ಸಂಸ್ಕಾರದ ಜತೆ ಜ್ಞಾನ ಮತ್ತು ಜೀವನದ ಮೌಲ್ಯಗಳನ್ನು ಕಲಿಯಬಹುದು ಎಂದು ಫೌಂಡೇಷನ್ ಫಾರ್ ಎಕಾಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ತಂಡದ ನಾಯಕ ಭಕ್ತರ್‌ವಲಿ ತಿಳಿಸಿದರು.

ತಾಲ್ಲೂಕಿನ ವರದನಾಯಕ ನಹಳ್ಳಿಯ ವೀರ ಸೊಣ್ಣಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳ ತಾಲ್ಲೂಕು ಮಟ್ಟದ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ನಾವೆಲ್ಲ ಚಿಕ್ಕವರಿದ್ದಾಗ ಹೊಲದಲ್ಲಿ ಆಟವಾಡಿಕೊಂಡು, ಹಣ್ಣುಹಂಪಲು ತಿಂದು ಕೆರೆ-ಕುಂಟೆಗಳಲ್ಲಿ ಈಜಾಡಿ, ಖುಷಿಯಿಂದ ಜೀವನ ಸಾಗಿಸುತ್ತಿದ್ದೆವು. ಆದರೆ ಇಂದಿನ ಪಟ್ಟಣ ಹಾಗೂ ನಗರ ಪ್ರದೇಶದ ಎಷ್ಟೋ ಮಕ್ಕಳಿಗೆ ಹಾಲು ಎಲ್ಲಿ ಸಿಗುತ್ತದೆ ಎಂಬುದೇ ಗೊತ್ತಿಲ್ಲ. ಹಸುವಿನ ಬಗ್ಗೆ ಅವರಿಗೆ ತಿಳಿಯದಿರುವುದೇ ವಿಪರ್ಯಾಸ. ನಮ್ಮ ಪೂರ್ವಜರು ಸಾಮೂಹಿಕ ಗೋಮಾಳ, ಗುಂಡುತೋಪು, ಕೆರೆ, ಕುಂಟೆಗಳು, ಸ್ಮಶಾನ ಹಾಗೂ ಜಲಮೂಲಗಳನ್ನು ರಕ್ಷಿಸಿ ಅಭಿವೃದ್ಧಿ ಮಾಡುತ್ತಿದ್ದರು’ ಎಂದರು.

ADVERTISEMENT

ಕುಂದಲಗುರ್ಕಿಯ ಗ್ರಾ. ಪಂ ಸದಸ್ಯ ರಮೇಶರೆಡ್ಡಿ ಮಾತನಾಡಿ, ‘ನಮ್ಮೂರಿನ ಸಾಮೂಹಿಕ ಆಸ್ತಿ ವಿವರಗಳ ಮೇಲೆ ಎಫ್‌ಇಎಸ್ ಸಂಸ್ಥೆ ಬೆಳಕು ಚೆಲ್ಲಿದ್ದು, ಈ ಆಸ್ತಿಗಳ ಅಭಿವೃದ್ಧಿಗೆ ಸರ್ಕಾರದ ಯೋಜನೆ ಬಳಸಬೇಕು. ಇದಕ್ಕಾಗಿ ನಾವೆಲ್ಲರೂ ಒಂದಾಗಬೇಕು’
ಎಂದರು.

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವದಲ್ಲಿ ಬಡತನ ಮುಕ್ತ, ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ ಗ್ರಾಮ ಪಂಚಾಯಿತಿ ರೂಪಿಸಲು ಯೋಜನೆ ತಯಾರಿಸಲಾಗುತ್ತಿದೆ ಎಂದು ಎಫ್‌ಇಎಸ್ ಕ್ಷೇತ್ರ ಸಂಯೋಜಕ ಗೋಪಿನಾಥ್ ಹೇಳಿದರು.

ಹಂಡಿಗನಾಳ ಗ್ರಾ. ಪಂ ಅಧ್ಯಕ್ಷ ಮುನಿರೆಡ್ಡಿ, ಎಫ್‌ಇಎಸ್ ಸಂಸ್ಥೆಯ ಕ್ಷೇತ್ರ ಸಂಯೋಜಕ ಮುನಿರಾಜು, ಯೋಜನಾ ವ್ಯವಸ್ಥಾಪಕ ಎನ್. ರಮೇಶ್, ಕುಂದಲಗುರ್ಕಿ ಗ್ರಾ. ಪಂ ಅಧ್ಯಕ್ಷೆ ಗಾಯಿತ್ರಮ್ಮ, ಸದಸ್ಯರಾದ ಹೇಮಾವತಿ, ಎಸ್.ಎಮ್. ಗಂಗಯ್ಯ, ಆನೂರು ಗ್ರಾ. ಪಂ ಸದಸ್ಯ ಅರುಣ್‌ಕುಮಾರ್, ವೈ. ಹುಣಸೇನಹಳ್ಳಿ ಗ್ರಾ. ಪಂ ಸದಸ್ಯ ದೇವರಾಜ, ಬೆವರು ಕಲಾ ತಂಡದ ಕಲಾವಿದರಾದ ಮುನಿರಾಜು ಮತ್ತು ಚಲಪತಿ, ಬೈರಾಗಾನಹಳ್ಳಿ ವೃಕ್ಷ ಬೆಳೆಗಾರರ ಸಹಕಾರ ಸಂಘದ ಕಾರ್ಯದರ್ಶಿ ವೆಂಕಟೇಶಪ್ಪ, ಎಫ್‌ಇಎಸ್ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.