ADVERTISEMENT

ಸುಧಾಕರ್ ವಿರುದ್ಧ ಐಟಿ ಕ್ರಮ ಕೈಗೊಳ್ಳಲಿ

ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ವೀಕ್ಷಕ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 18:30 IST
Last Updated 15 ಅಕ್ಟೋಬರ್ 2019, 18:30 IST
ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ವೀಕ್ಷಕ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿದರು.
ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ವೀಕ್ಷಕ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಕೋಟಿಗಟ್ಟಲೇ ತೆರಿಗೆ ಕಟ್ಟದೆ ಆದಾಯ ತೆರಿಗೆ ಇಲಾಖೆಗೆ (ಐಟಿ) ವಂಚಿಸಿರುವ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಈಗ ವಂಚನೆ ಮರೆ ಮಾಚಲು ಬಿಜೆಪಿ ಅಪ್ಪಿಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಸುಧಾಕರ್ ಅವರ ಆಸ್ತಿ ವಿವರಗಳನ್ನು ಸಂಗ್ರಹಿಸಿ ಭ್ರಷ್ಟಾಚಾರ, ವಂಚನೆ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ವೀಕ್ಷಕ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಆಗ್ರಹಿಸಿದರು.

ಮಂಚನಬಲೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರ ನಡೆದ ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

‘ಸುಧಾಕರ್ ಮತ ಕೇಳಲು ಬಂದಾಗ ಮತದಾರರು ಅವರನ್ನು ಒಬ್ಬ ನಿವೃತ್ತ ಶಿಕ್ಷಕನ ಮಗ ಕೆಲವೇ ವರ್ಷಗಳಲ್ಲಿ ನೂರಾರು ಕೋಟಿ ಒಡೆಯ ಹೇಗಾದ ಎಂದು ಪ್ರಶ್ನಿಸಬೇಕು. ಈ ಹಿಂದೆ ಪೆರೇಸಂದ್ರದಲ್ಲಿ ಕೇವಲ 10 ಎಕರೆ ಜಮೀನು ಹೊಂದಿದ್ದವರಿಗೆ ಈಗ ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಸೇರಿದಂತೆ ವಿವಿಧೆಡೆ ನೂರಾರು ಎಕರೆ ಭೂಮಿ ಹೇಗೆ ಬಂತು? ಇಂತಹ ಭ್ರಷ್ಟ ರಾಜಕಾರಣಿಗೆ ಜನರು ಬುದ್ಧಿ ಕಲಿಸಬೇಕು’ ಎಂದು ತಿಳಿಸಿದರು.

ADVERTISEMENT

ವೀಕ್ಷಕ ವಿ.ಮುನಿಯಪ್ಪ ಮಾತನಾಡಿ, ‘ಸುಧಾಕರ್ ಈ ಹಿಂದಿನ ಚುನಾವಣೆಯಲ್ಲಿ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಒದಗಿಸಿಕೊಡುತ್ತೇನೆ ಎಂದು ಹೇಳಿ ವಚನ ಭ್ರಷ್ಟರಾಗಿದ್ದಾರೆ. ಕೇವಲ ಒಂದು ಕೈಗಾರಿಕೆಯನ್ನು ಕೂಡ ನಿರ್ಮಾಣ ಮಾಡಲು ಮುಂದಾಗದ ಅವರು ಈಗ ಯುವಕರಿಗೆ ಉದ್ಯೋಗದ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನರು ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು’ ಎಂದು ಹೇಳಿದರು.

ಟಿಕೆಟ್ ಆಕಾಂಕ್ಷಿ ನಂದಿ ಆಂಜಿನಪ್ಪ ಮಾತನಾಡಿ, ‘ಕಾಂಗ್ರೆಸ್‌ನಿಂದ ಎರಡು ಬಾರಿ ಗೆದ್ದು ಎಲ್ಲಾ ರೀತಿಯ ಅಧಿಕಾರ ಅನುಭವಿಸಿ ಈಗ ಪಕ್ಷ ಮತ್ತು ಮತದಾರರಿಗೆ ಮೋಸ ಮಾಡಿ, ದ್ರೋಹ ಬಗೆದು ಈಗ ಮತ್ತೆ ಜನಕ್ಕೆ ಟೋಪಿ ಹಾಕಿ ಮತ ಪಡೆಯಲು ಮುಂದಾಗಿರುವುದು ಸುಧಾಕರ್ ಅವರಿಗೆ ಶೋಭೆ ತರುವ ಕೆಲಸವಲ್ಲ’ ಎಂದು ತಿಳಿಸಿದರು.

‘ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ದೊರೆತಿದೆ. ಆದರೆ ಸುಧಾಕರ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿ, ಅಧಿಕಾರದ ಆಸೆಗೆ ಒಳಗಾಗಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆಯೇ ಹೊರತು ಜನರ ಹಿತಾಸಕ್ತಿಗಲ್ಲ. ನಾನು ಈ ಹಿಂದೆ ಸುಮಾರು ಒಂಬತ್ತು ತಿಂಗಳು ಕ್ಷೇತ್ರದ ಜನತೆಗೆ ಉಚಿತ ಪಡಿತರ ನೀಡಿದ್ದೆ. ಈ ಬಾರಿ ಪಕ್ಷ ನನಗೆ ಟಿಕೆಟ್ ನೀಡಿದರೆ ನಿಮ್ಮ ಮನೆ ಮಗನಂತೆ ನಿಮ್ಮ ಸೇವೆ ಮಾಡುವೆ’ ಎಂದರು.

ಮುಖಂಡರಾದ ಕೆ.ವಿ.ನವೀನ್ ಕಿರಣ್, ಯಲುವಹಳ್ಳಿ ರಮೇಶ್, ಮುನೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಬ್ಬರಾಯಪ್ಪ, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಮುಖಂಡರಾದ ಪುರದಗಡ್ಡೆ ಕೃಷ್ಣಪ್ಪ, ಅಡ್ಡಗಲ್ ಶ್ರೀಧರ್ ಇಸ್ಮಾಯಿಲ್, ಮಿಲ್ಟನ್ ವೆಂಕಟೇಶ್, ವರದರಾಜು, ದೇವರಾಜ್, ಅರುಣ್, ಗುಂತಪ್ಪನಹಳ್ಳಿ ವೆಂಕಟೇಶ್, ಮಂಚನಬಲೆ ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.