ADVERTISEMENT

ರಾಷ್ಟ್ರೀಯ ಏಕತೆಗೆ ಶ್ರಮಿಸೋಣ: ವಿಶ್ವೇಶ್ವರ ಹೆಗಡೆ ಕಾಗೇರಿ

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಸ್ಪೀಕರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:37 IST
Last Updated 29 ಮೇ 2022, 4:37 IST
ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಶನಿವಾರ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಎಂ.ಟಿ.ಬಿ. ನಾಗರಾಜ್‌, ಆರ್‌. ಲತಾ, ಜಿ.ಕೆ. ಮಿಥುನ್‌ಕುಮಾರ್‌ ಹಾಜರಿದ್ದರು
ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಶನಿವಾರ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಎಂ.ಟಿ.ಬಿ. ನಾಗರಾಜ್‌, ಆರ್‌. ಲತಾ, ಜಿ.ಕೆ. ಮಿಥುನ್‌ಕುಮಾರ್‌ ಹಾಜರಿದ್ದರು   

ಗೌರಿಬಿದನೂರು: ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ವೀರ ಸಾವರ್ಕರ್‌ ಅಪ್ಪಟ ದೇಶಪ್ರೇಮಿ. ಯುವಕರಿಗೆ ಮಾದರಿಯಾಗಿದ್ದ ಅವರ ಜನ್ಮದಿನದಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ವೀರಭೂಮಿ ವಿದುರಾಶ್ವತ್ಥದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ’ ಎಂದು ತಿಳಿಸಿದರು.

ದೇಶಕ್ಕಾಗಿ ವೀರಮರಣವನ್ನಪ್ಪಿದ ನಾಯಕರ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ. ವೀರ ಸಾವರ್ಕರ್ ಹೋರಾಟದ ಬದುಕಿನ ಬಗ್ಗೆ ಹೆಚ್ಚು ವಿಷಯಗಳನ್ನು ಅರಿಯುವ ಅಗತ್ಯವಿದೆ ಎಂದರು.

ADVERTISEMENT

ಸ್ವಾತಂತ್ರ್ಯ ಭಾರತದ ಜನತೆಗೆ ಪವಿತ್ರವಾದ ಸಂವಿಧಾನ ನೀಡಿ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿದ ಕೀರ್ತಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಎಲ್ಲರೂ ರಾಷ್ಟ್ರಾಭಿಮಾನ ಬೆಳೆಸಿಕೊಂಡು ಏಕತೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಮಾತನಾಡಿ,1938ರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಸತ್ಯಾಗ್ರಹ ನಡೆಸಿದ ನಾಯಕರ ತ್ಯಾಗ, ಬಲಿದಾನದ ಸ್ಮರಣೆಗೆ ವೀರಸ್ತೂಪ ಮತ್ತು ವೀರಸೌಧದಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಪಟಗಳು ಸಾಕ್ಷಿಯಾಗಿವೆ ಎಂದು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನಪ್ಪಿದ ಲಕ್ಷಾಂತರ ದೇಶ ಪ್ರೇಮಿಗಳ ಸ್ಮರಣಾರ್ಥ ಸರ್ಕಾರ ಮಾಡುವ ಕಾರ್ಯಕ್ರಮಗಳು ಮಾದರಿಯಾಗಬೇಕಿದೆ. ದೇಶಕ್ಕೆ ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು 200 ವರ್ಷಗಳ ಕಾಲ ಆಳುವ ಮೂಲಕ ಇಲ್ಲಿನ ಸಂಪತ್ತನ್ನು ದೋಚಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಅಭಿವೃದ್ಧಿ ಮತ್ತು ಏಕತೆಗಾಗಿ ಅಂಬೇಡ್ಕರ್ ಅವರು ಮೌಲ್ಯಾಧಾರಿತ ಸಂವಿಧಾನ ರಚಿಸಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. ಜನರಿಗೆ ಸೂಕ್ತ ನ್ಯಾಯ ಒದಗಿಸಿದ್ದಾರೆ. ಅಂತಹ ಮಹನೀಯರ ಸ್ಮರಣೆ ಅತ್ಯಗತ್ಯ ಎಂದು ಹೇಳಿದರು.

ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ಮುದುಗೆರೆಯ ಎಂ.ಜೆ. ಬ್ರಹ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಶ್ರೀವಿದುರ ನಾರಾಯಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವೀರಮರಣ ವನ್ನಪ್ಪಿದವರ ಸ್ತೂಪಗಳಿಗೆ ಪುಷ್ಪಾ ರ್ಚನೆ ಮಾಡಿದರು. ನಂತರ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯ ಕ್ರಮದ ಸ್ಮರಣಾರ್ಥ ಶಿಲಾಫಲಕ ಉದ್ಘಾಟಿಸಿದರು.

ವೇದಿಕೆಯಲ್ಲಿ ಬಿಇಒ ಕೆ.ವಿ. ಶ್ರೀನಿವಾಸಮೂರ್ತಿ ಸಂಕಲ್ಪ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ‌. ಮಿಥುನ್ ಕುಮಾರ್, ಜಿ.ಪಂ. ಸಿಇಒ ಪಿ. ಶಿವಶಂಕರ್, ಉಪ ಕಾರ್ಯದರ್ಶಿ ಶಿವಕುಮಾರ್, ಡಿವೈಎಸ್‌ಪಿ ವಾಸು ದೇವ್, ತಹಶೀಲ್ದಾರ್ ಎಚ್. ಶ್ರೀನಿ ವಾಸ್, ಸಿಪಿಐ ಎಸ್.ಡಿ. ಶಶಿಧರ್, ತಾ‌.ಪಂ. ಇಒ ಆರ್. ಹರೀಶ್, ಗ್ರಾ.ಪಂ. ಅಧ್ಯಕ್ಷರಾದ ಕೆ.ಆರ್. ಮನುಜ, ಬಿಇಒ ಕೆ.ವಿ. ಶ್ರೀನಿವಾಸಮೂರ್ತಿ, ನಗರಸಭೆ ಪೌರಾಯುಕ್ತೆ ಡಿ.ಎಂ. ಗೀತಾ, ಅಧ್ಯಕ್ಷೆ ಎಸ್. ರೂಪಾ, ಸ್ವಾತಂತ್ರ್ಯ ಹೋರಾಟಗಾರ ಬ್ರಹ್ಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.