ADVERTISEMENT

ಉತ್ತರ ಪಿನಾಕಿನಿಗೆ ಜೀವಕಳೆ: ದಶಕದ ಬಳಿಕ ಮೈದುಂಬಿದ ನದಿ

ರೈತರ ಹರ್ಷ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 4:02 IST
Last Updated 19 ಜುಲೈ 2021, 4:02 IST
ಕಿಂಡಿ ಅಣೆಕಟ್ಟು ಬಳಿ ಪಿನಾಕಿನಿ ನದಿಯಲ್ಲಿ ಹರಿಯುತ್ತಿರುವ ನೀರನ್ನು ವೀಕ್ಷಿಸಿದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಹಾಗೂ ಆಯುಕ್ತ ಸತ್ಯನಾರಾಯಣ
ಕಿಂಡಿ ಅಣೆಕಟ್ಟು ಬಳಿ ಪಿನಾಕಿನಿ ನದಿಯಲ್ಲಿ ಹರಿಯುತ್ತಿರುವ ನೀರನ್ನು ವೀಕ್ಷಿಸಿದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಹಾಗೂ ಆಯುಕ್ತ ಸತ್ಯನಾರಾಯಣ   

ಗೌರಿಬಿದನೂರು: ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಶನಿವಾರ ರಾತ್ರಿ ಸುರಿದ ಉತ್ತಮ‌ ಮಳೆಯಿಂದ ಭೂಮಿ ತಂಪಾಗಿ ಬೆಟ್ಟಗುಡ್ಡಗಳು, ಹಳ್ಳಕೊಳ್ಳಗಳು, ಕೆರೆ, ಕುಂಟೆಗಳಿಗೆ ಹೆಚ್ಚಿನ‌ ನೀರು ಹರಿಯುವ ಮೂಲಕ ತಾಲ್ಲೂಕಿನ ಜೀವನಾಡಿಯಾದ ಉತ್ತರ ಪಿನಾಕಿನಿ ನದಿ ಮೈದುಂಬಿ ಹರಿಯುತ್ತಿದೆ.

ಶನಿವಾರ ತಡರಾತ್ರಿ ಆರಂಭವಾದ ಮಳೆ ಭಾನುವಾರ ಬೆಳಗಿನ ಜಾವದವರೆಗೂ ಸುರಿಯಿತು. ಇದರಿಂದಾಗಿ ತಾಲ್ಲೂಕಿನ ಬಹುತೇಕ ಕೆರೆ, ಕುಂಟೆ, ನದಿ, ನಾಲೆಗಳು ಸೇರಿದಂತೆ ಇನ್ನಿತರ ಜಲ ಮೂಲಗಳು ಮಳೆ ನೀರಿನಿಂದ ಕಂಗೊಳಿಸು
ತ್ತಿದ್ದವು.

ಕಂದಾಯ ಇಲಾಖೆ ಅಧಿಕಾರಿಗಳು ಭಾನುವಾರ ತಾಲ್ಲೂಕಿನ ವಿವಿಧೆಡೆ ಮಳೆ ಪ್ರಮಾಣವನ್ನು ಪರಿಶೀಲಿಸಿದರು. ಗೌರಿಬಿದನೂರು 45.4 ಮಿ.ಮೀ, ಹೊಸೂರು 28.8 ಮಿ.ಮೀ, ಡಿ. ಪಾಳ್ಯ 65 ಮಿ.ಮೀ, ವಾಟದಹೊಸಹಳ್ಳಿ 168 ಮಿ.ಮೀ, ಮಂಚೇನಹಳ್ಳಿ 28 ಮಿ.ಮೀ, ತೊಂಡೇಬಾವಿ 175 ಮಿ.ಮೀ ಹಾಗೂ ತಿಪ್ಪಗಾನಹಳ್ಳಿಯಲ್ಲಿ 46.8 ಮಿ.ಮೀ ಮಳೆಯ ಪ್ರಮಾಣ ದಾಖಲಾಗಿದೆ.

ADVERTISEMENT

ಉತ್ತಮ ಮಳೆಯ ಪರಿಣಾಮ ಮಂಚೇನಹಳ್ಳಿಯ ಕೆಲವು ಭಾಗಗಳಲ್ಲಿ ಉತ್ತರ ಪಿನಾಕಿನಿ ನದಿ ಹರಿಯುತ್ತಿರುವುದು ಕಂಡು ಬಂತು. ಬಳಿಕ ಸಮಯ ಕಳೆದಂತೆ ನದಿಯ ಉದ್ದಕ್ಕೂ ಮಳೆ ನೀರು ಮೈತುಂಬಿ ಹರಿದ ಪರಿಣಾಮವಾಗಿ ಜನ ಹರ್ಷೋಲ್ಲಾಸ ವ್ಯಕ್ತಪಡಿಸಿದರು.

ನೀರು ನಗರ ಹೊರವಲಯದಲ್ಲಿರುವ ಕಿಂಡಿ ಅಣೆಕಟ್ಟು ಬಳಿ ತಲುಪಿದೆ. ಅಲ್ಲಿಂದ ಸ್ವಲ್ಪ ಪ್ರಮಾಣದ ನೀರು ಎಚ್.ಎನ್. ವ್ಯಾಲಿ‌ ನೀರಿನೊಂದಿಗೆ ಮರಳೂರು ಕೆರೆಗೆ ಹರಿದರೆ ಉಳಿದ ನೀರು ನದಿಯ ಮೂಲಕ ನಗರದತ್ತ ಹರಿದಿದೆ. ದಶಕಗಳ‌ ಬಳಿಕ ಈ ನದಿಯಲ್ಲಿ ನೀರು ಹರಿಯುವುದನ್ನು ನೋಡಲು ನಾಗರಿಕರು ಕಿಂಡಿ ಅಣೆಕಟ್ಟಿನ ಬಳಿ‌ ಬಂದು‌ ವೀಕ್ಷಿಸಿದರು. ಇನ್ನು ಕೆಲವರು ನದಿ ನೀರಿಗೆ‌ ಬಾಗಿನ
ಅರ್ಪಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ದಶಕಗಳಿಂದ ಈ ಭಾಗದಲ್ಲಿ ಬರಗಾಲದ ಛಾಯೆ ಆವರಿಸಿದೆ. ಸಮರ್ಪಕವಾದ ಮಳೆಯಿಲ್ಲದೆ ನದಿಯಲ್ಲಿ ನೀರು ಹರಿಯುವುದೇ ಕಷ್ಟವಾಗಿತ್ತು. ಮಂಚೇನಹಳ್ಳಿ ಹಾಗೂ ತೊಂಡೇಬಾವಿ ಹೋಬಳಿ ವ್ಯಾಪ್ತಿಯಲ್ಲಿ ಬಿದ್ದ ಉತ್ತಮ‌ ಮಳೆಯಿಂದಾಗಿ ಸ್ಥಳೀಯ ‌ಉಪನದಿಗಳು ತುಂಬಿ ಹರಿದು ಪಿನಾಕಿನಿಯನ್ನು ಸೇರಿ ಜನರ ಜೀವನಾಡಿಯಾಗಿದ್ದ ನದಿ ಜೀವ ತುಂಬಿವೆ ಎಂದರು.

ಉತ್ತಮ ಮಳೆ ಸುರಿಯುತ್ತಿರುವುದರಿಂದ ನದಿಗೆ ಜೀವ ಕಳೆ ಬಂದಿದೆ. ಇದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಮುಂಗಾರು ಉತ್ತಮ ಆರಂಭ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮುಖಂಡ ಕೆ.ಎಚ್. ಪುಟ್ಟಸ್ವಾಮಿಗೌಡ ತಮ್ಮ ಬಣದ ಅಪಾರ ಬೆಂಬಲಿಗರೊಂದಿಗೆ ಕಿಂಡಿ ಅಣೆಕಟ್ಟು ಬಳಿ ತೆರಳಿ ನದಿ ನೀರಿಗೆ ಬಾಗಿನ‌ ಅರ್ಪಿಸಿದರು.

ಬಳಿಕ ಮಾತನಾಡಿದ ಅವರು, ಪಿನಾಕಿನಿ ಈ ಭಾಗದ ರೈತರ ಬಾಳಿಗೆ ವರದಾನವಾಗಿದೆ. ಇದರ ಆಸರೆಯಲ್ಲೇ ಸಾವಿರಾರು ರೈತಾಪಿ ‌ಕುಟುಂಬಗಳು ಬದುಕು ಸಾಗಿಸುತ್ತಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.