ADVERTISEMENT

ಗೌರಿಬಿದನೂರು: ಸಾಹಿತಿ ಡಾ.ಎಲ್. ಬಸವರಾಜು ಜನ್ಮ ಶತಮಾನೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 4:12 IST
Last Updated 23 ಅಕ್ಟೋಬರ್ 2021, 4:12 IST

ಗೌರಿಬಿದನೂರು: ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಅ. 23ರಂದು ಸಾಹಿತಿ, ನಾಡೋಜ ಡಾ.ಎಲ್. ಬಸವರಾಜು ಅವರ ಜನ್ಮ ಶತಮಾನೋತ್ಸವ ಆಚರಣೆಯನ್ನು ಸ್ಥಳೀಯ ಸರ್ಕಾರಿ‌ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅವರ‌ ಅಭಿಮಾನಿಗಳು ಹಾಗೂ ಆಚರಣಾ ಸಮಿತಿಯ ಪದಾಧಿಕಾರಿಗಳು ಆಯೋಜಿಸಿದ್ದಾರೆ.

ಬೆಳಿಗ್ಗೆ ನಗರದ ಡಾ.ಎಚ್‌.ಎನ್. ವೃತ್ತದ ಬಳಿ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಅವರ ನೇತೃತ್ವದಲ್ಲಿ ಇಡಗೂರು-ಗೌರಿಬಿದನೂರು ರಸ್ತೆಗೆ ಡಾ.ಎಲ್. ಬಸವರಾಜು ಅವರ ಹೆಸರಿನ ನಾಮಫಲಕದ ಅನಾವರಣ ಮಾಡಲಾಗುವುದು. ಬಳಿಕ ಬಸವರಾಜು ಅವರ ಭಾವಚಿತ್ರಗಳನ್ನು ಒಳಗೊಂಡ ಪಲ್ಲಕ್ಕಿಯೊಂದಿಗೆ ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಗ್ರಾಮದ ಮುಖ್ಯವೃತ್ತದಲ್ಲಿ ಬಸವರಾಜು ಅವರ ಪುತ್ಥಳಿ ಅನಾವರಣದ ಜತೆಗೆ ಹೈಮಾಸ್ಕ್‌ ದೀಪದ ಉದ್ಘಾಟನೆ ನಡೆಯಲಿದೆ.

ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಶಿವಶಂಕರರೆಡ್ಡಿ, ಗ್ರಾ.ಪಂ. ಅಧ್ಯಕ್ಷ ಜಯರಾಮಯ್ಯ, ಸಂಸ್ಕೃತಿ ಚಿಂತಕ ಪ್ರೊ.ಕೋಡಿರಂಗಪ್ಪ, ಪ್ರೊ.ಬಿ. ಗಂಗಾಧರಮೂರ್ತಿ, ಪಿ.ಎಸ್. ರಮೇಶ್, ದತ್ತಗುರು ಎಸ್. ಹೆಗ್ಗಡೆ ಭಾಗವಹಿಸಲಿದ್ದಾರೆ. ಮುಖ್ಯ‌ ಅತಿಥಿಗಳಾಗಿ ದಿವಂಗತ ಡಾ.ಎಲ್. ಬಸವರಾಜು ಅವರ ಪತ್ನಿ ವಿಶಾಲಾಕ್ಷ್ಮಮ್ಮ, ತಹಶೀಲ್ದಾರ್ ಎಚ್. ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ‌ಇಲಾಖೆಯ ಸಹಾಯಕ ‌ನಿರ್ದೇಶಕ ಡಿ.ಎಂ. ರವಿಕುಮಾರ್, ತಾ.ಪಂ. ಇಒ ಎನ್. ಮುನಿರಾಜು, ಬಿಇಒ ಕೆ.ವಿ. ಶ್ರೀನಿವಾಸಮೂರ್ತಿ ಭಾಗವಹಿಸಲಿದ್ದಾರೆ.

ADVERTISEMENT

‌ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶರಣ ಜೀವನ-ವಚನ ಹೂರಣ ಎಂಬ ನೃತ್ಯ ನಾಟಕ ಪ್ರದರ್ಶನವಿದೆ. ಶ್ರೀ.ಗ.ನಾ. ಅಶ್ವತ್ಥ್ ಮತ್ತು ‌ತಂಡದಿಂದ ವಚನ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜನ್ಮ ಶತಮಾನೋತ್ಸವ ಆಚರಣಾ ಸಮಿತಿಯ ಪದಾಧಿಕಾರಿಗಳು ‌ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.