ADVERTISEMENT

ರಾಜಿ ಸಂಧಾನ: ಸಾವಿರ ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 3:27 IST
Last Updated 15 ಆಗಸ್ಟ್ 2021, 3:27 IST
ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಜೆ.ಶಿವಕುಮಾರ್ ನೇತೃತ್ವದಲ್ಲಿ ಲೋಕ ಅದಾಲತ್‌ ನಡೆಯಿತು
ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಜೆ.ಶಿವಕುಮಾರ್ ನೇತೃತ್ವದಲ್ಲಿ ಲೋಕ ಅದಾಲತ್‌ ನಡೆಯಿತು   

ಚಿಂತಾಮಣಿ: ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಮ್ಮಿಕೊಂಡಿದ್ದ ಲೋಕ ಅದಾಲತ್‌ನಲ್ಲಿ ಒಟ್ಟು 1,357 ಪ್ರಕರಣ ಇತ್ಯರ್ಥಪಡಿಸಿ 1.28ಕೋಟಿ ಮೊತ್ತವನ್ನು ವಿಲೇವಾರಿ ಮಾಡಲಾಗಿದೆ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್.ಮಂಜುನಾಥ್ ತಿಳಿಸಿದರು.

ಚೆಕ್ ಬೌನ್ಸ್ 20 ಪ್ರಕರಣ, ಮೋಟಾರು ವಾಹನಗಳ 3, ವಿದ್ಯುತ್ ನಿಗಮದ 26, ಸಿವಿಲ್ 29, ಜನನ ಪ್ರಮಾಣ ಪತ್ರಗಳ 156, ದಂಡ 1,084 ಹಾಗೂ ಇತರೆ ಪ್ರಕರಣಗಳು ಸೇರಿ ಒಟ್ಟು 1,357 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಲಾಯಿತು
ಎಂದರು.

ನಗರದ ನ್ಯಾಯಾಲಯದ ಆವರಣದಲ್ಲಿ ನಾಲ್ವರು ನ್ಯಾಯಾಧೀಶರ ನೇತೃತ್ವದಲ್ಲಿ ವಾದಿ-ಪ್ರತಿವಾದಿಗಳು, ರಾಜಿ ಸಂಧಾನಕಾರರು ಹಾಗೂ ವಕೀಲರು ಅದಾಲತ್‌ನಲ್ಲಿ ಭಾಗವಹಿಸಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಿದರು ಎಂದು ತಿಳಿಸಿದರು.

ADVERTISEMENT

ಸಾರ್ವಜನಿಕರು ಕನಿಷ್ಠ ಮಟ್ಟದ ಕಾನೂನಿನ ಅರಿವು ಪಡೆದುಕೊಳ್ಳಬೇಕು. ಕಾನೂನಿನ ಅರಿವಿದ್ದರೆ ಹಲವಾರು ಪ್ರಕರಣಗಳು ಸುಲಭವಾಗಿ ಇತ್ಯರ್ಥವಾಗುತ್ತವೆ. ಅನಗತ್ಯವಾಗಿ ನ್ಯಾಯಾಲಯಗಳಿಗೆ ಅಲೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿದರೆ ನ್ಯಾಯಾಲಯಗಳ ಶುಲ್ಕ, ವಕೀಲರ ಶುಲ್ಕ, ಖರ್ಚು ಉಳಿತಾಯವಾಗುತ್ತದೆ ಎಂದರು.

ಸಣ್ಣ ಪುಟ್ಟ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾದರೆ ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ಇತರೆ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥ ಮಾಡಲು ಸಹಕಾರಿಯಾಗುತ್ತದೆ. ನ್ಯಾಯಾಲಯಗಳಲ್ಲಿ ಮೊಕದ್ದಮೆಗಳು ಇತ್ಯರ್ಥವಾಗುವುದು ವಿಳಂಬವಾಗುತ್ತದೆ ಎನ್ನುವುದು ಸಾಮಾನ್ಯ ಜನರು ಅಭಿಪ್ರಾಯಪಡುತ್ತಾರೆ. ದಿನ ದಿನವೂ ಮೊಕದ್ದಮೆಗಳ ಹೊರೆ ಅಧಿಕವಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಜಿ.ವಿಶಾಲಾಕ್ಷಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಜೆ.ಶಿವಕುಮಾರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರೂಪ ಸಿ.ವಗ್ಗ, ವಕೀಲರ ಸಂಘದ ಅಧ್ಯಕ್ಷ ಎಸ್.ರಾಜಾರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.