ಚಿಕ್ಕಬಳ್ಲಾಪುರ: ಲೇಔಟ್ ಅನುಮೋದನೆ ವೇಳೆ ಸುಳ್ಳು ಪ್ರಮಾಣ ಪತ್ರ ನೀಡಿದ ಬೆಸ್ಕಾಂ ಎಂಜಿನಿಯರ್ ಹಾಗೂ ಬಿಲ್ಡರ್ ವಿರುದ್ಧ ಗೌರಿಬಿದನೂರು ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದೂರುದಾರರೊಬ್ಬರಿಗೆ ನಿರ್ದೇಶನ ನೀಡಿದ್ದಾರೆ.
ಅಲ್ಲದೆ ಇದೇ ವಿಚಾರವಾಗಿ ಚಿಕ್ಕಬಳ್ಳಾಪುರ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿ ಕಡತಗಳನ್ನು ಶೋಧಿಸಿದರು. ಈ ವೇಳೆ ಈ ಪ್ರಕರಣದ ಲೋಪಗಳಷ್ಟೇ ಅಲ್ಲ ಬೆಸ್ಕಾಂನ ಮತ್ತಷ್ಟು ಅಧ್ವಾನಗಳು ಬಯಲಾಗಿವೆ. ಈ ಕುರಿತು ರಾಜ್ಯ ಲೋಕಾಯುಕ್ತರಿಗೆ ಜಿಲ್ಲಾ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸುವರು.
ಏನಿದು ಪ್ರಕರಣ: ಗೌರಿಬಿದನೂರು ನಗರದಲ್ಲಿ 2019ರಲ್ಲಿ ಲೇಔಟ್‌ವೊಂದನ್ನು ನಿರ್ಮಿಸಲಾಗಿದೆ. ಈ ಲೇಔಟ್‌ನಲ್ಲಿ ನಿಯಮಗಳ ರೀತಿ ಬೆಸ್ಕಾಂ ಸೌಲಭ್ಯಗಳನ್ನು ನೀಡಿಲ್ಲ. ಮನೆ ನಿರ್ಮಿಸಿರುವವರಿಗೆ ತೊಂದರೆ ಆಗಿದೆ. ಈ ಬಗ್ಗೆ ಗೌರಿಬಿದನೂರಿನ ಬೆಸ್ಕಾಂ ಅಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನಿವೇಶನ ಖರೀದಿಸಿರುವವರು ದೂರು ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹಲವು ಬಾರಿ ದೂರು ನೀಡಿದರೂ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲ. ಇದರಿಂದ ಬೇಸತ್ತು ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಜಿಲ್ಲಾ ಲೋಕಾಯುಕ್ತ ಎಸ್.ಪಿ ಆಂಟೊನಿ ಜಾನ್, ಡಿವೈಎಸ್‌ಪಿ ವೀರೇಂದ್ರ ಕುಮಾರ್ ನೇತೃತ್ವದ ತಂಡವು ಚಿಕ್ಕಬಳ್ಳಾಪುರ ಬೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಕಡತಗಳನ್ನು ಶೋಧಿಸಿತು. ಲೇಔಟ್ ನಿರ್ಮಾಣದ ವೇಳೆ ಗೌರಿಬಿದನೂರಿನ ಬೆಸ್ಕಾಂ ಎಂಜಿನಿಯರ್ ಸುಳ್ಳು ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ.
‘ಲೇಔಟ್ ನಿರ್ಮಾಣದ ವೇಳೆ ಬೆಸ್ಕಾಂನಿಂದಲೂ ಬಿಲ್ಡರ್ ಪ್ರಮಾಣ ಪತ್ರ ಪಡೆಯಬೇಕಾಗಿತ್ತು. ಆದರೆ ಎಂಜಿನಿಯರ್ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ. ಈ ಸುಳ್ಳು ಪ್ರಮಾಣ ಪತ್ರ ನೀಡಿದ ಎಂಜಿನಿಯರ್ ಈಗ ನಿವೃತ್ತರಾಗಿದ್ದಾರೆ. ಗ್ರಾಹಕರು ನಮಗೆ ವಿದ್ಯುತ್ ಸಂಪರ್ಕ ಕೊಡಿ ಎಂದು ಈಗಿನ ಎಂಜಿನಿಯರ್ ಬಳಿ ಮನವಿ ಮಾಡಿದ್ದಾರೆ. ಲೇಔಟ್‌ಗೆ ಟ್ರಾನ್ಸ್‌ಫಾರ್ಮರ್ ಸೌಲಭ್ಯವಿಲ್ಲ, ಎಲೆಕ್ಟ್ರಿಕ್ ಸೌಲಭ್ಯವಿಲ್ಲ ಎಂದು ಈಗಿನ ಎಂಜಿನಿಯರ್ ತಿಳಿಸಿದ್ದಾರೆ’ ಎಂದು ಲೋಕಾಯುಕ್ತ ಎಸ್‌ಪಿ ಆಂಟೊನಿ ಜಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಹಿಂದೆ ಆದೇಶ ನೀಡಿದ ಬೆಸ್ಕಾಂ ಎಂಜಿನಿಯರ್ ಹಣ ಪಡೆದಿದ್ದಾರೆ. ಈಗ ಮನೆ ನಿರ್ಮಿಸಿರುವವರಿಗೆ ಸಮಸ್ಯೆ ಆಗಿದೆ. ತಾತ್ಕಾಲಿಕ ಸಂಪರ್ಕ ಪಡೆದಿರುವವರಿಗೆ ತಿಂಗಳಿಗೆ ನಾಲ್ಕೈದು ಸಾವಿರ ವಿದ್ಯುತ್ ಬಿಲ್ ಬರುತ್ತಿದೆ. ₹ 5 ಸಾವಿರ ಪಡೆದು 1 ಕೆ.ವಿ ವಿದ್ಯುತ್ ಸಂಪರ್ಕ ನೀಡಲು ನಿಯಮಗಳಲ್ಲಿ ಅವಕಾಶಗಳು ಇವೆ. ಆದರೆ ಈಗಿನ ಗೌರಿಬಿದನೂರು ಬೆಸ್ಕಾಂ ಎಂಜಿನಿಯರ್ ₹ 4 ಕೆ.ವಿಯದ್ದೇ ಸಂಪರ್ಕ ಪಡೆಯಬೇಕು ಎಂದಿದ್ದಾರೆ. ಇದೂ ಸಹ ನಿಯಮ ಬಾಹಿರವಾದುದು ಎಂದು ತಿಳಿಸಿದರು.
ಗ್ರಾಹಕರಿಗೆ ಮೋಸವಾಗಿದೆ. ಈ ಬಗ್ಗೆ ಗ್ರಾಹಕರು ಸುಮಾರು ಸಲ ದೂರು ನೀಡಿದರೂ ಕಾರ್ಯನಿರ್ವಾಹಕ ಎಂಜಿನಿಯರ್ ಕಿವಿಯ ಮೇಲೆ ಹಾಕಿಕೊಂಡಿಲ್ಲ. ಮೇಲ್ನೋಟಕ್ಕೆ ಲೋಪ ಆಗಿರುವುದು ಕಂಡು ಬಂದಿದೆ ಎಂದು ಹೇಳಿದರು.
ಯಾರೇ ಆದರೂ ದೂರು ನೀಡಿದರೆ ಅದನ್ನು ಪರಿಶೀಲಿಸಿ ಕ್ರಮವಹಿಸಬೇಕು. ಆದರೆ ಎರಡು ವರ್ಷದಿಂದ ದೂರು ನೀಡಿದರೂ ಕ್ರಮವಹಿಸಿಲ್ಲ. ಲೇಔಟ್ ನಿರ್ಮಿಸಿರುವ ಬಿಲ್ಡರ್, ಸುಳ್ಳು ಪ್ರಮಾಣ ಪತ್ರ ನೀಡಿರುವ ನಿವೃತ್ತ ಎಂಜಿನಿಯರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಎಂದು ದೂರುದಾರರಿಗೆ ತಿಳಿಸಿದ್ದೇವೆ ಎಂದರು.
‘ಮಧ್ಯವರ್ತಿಗಳಾದ ಹೊರಗುತ್ತಿಗೆ ಸಿಬ್ಬಂದಿ’
ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಮತ್ತಷ್ಟು ಅಧ್ವಾನಗಳು ಬೆಳಕಿಗೆ ಬಂದಿವೆ. ಈ ಕುರಿತು ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ‘ಬೆಸ್ಕಾಂ ಕಚೇರಿಯಲ್ಲಿ ರಿಜಿಸ್ಟಾರ್ ಇಲ್ಲ. ಹೊರಗುತ್ತಿಗೆ ಸಿಬ್ಬಂದಿ ಗುರುತು ಪ್ರಮಾಣ ಪತ್ರ ಸಮವಸ್ತ್ರ ಧರಿಸಿಲ್ಲ. ಸಾರ್ವಜನಿಕರ ರೀತಿ ಕಾಣುವರು. ಇವರೇ ಭ್ರಷ್ಟಾಚಾರದ ಮಧ್ಯವರ್ತಿಗಳ ರೀತಿ ಇದ್ದಾರೆ. ತಪಾಸಣೆ ವೇಳೆ ಕಂಡ ಲೋಪಗಳ ಬಗ್ಗೆ ತನಿಖೆ ನಡೆಸಿ ರಾಜ್ಯ ಲೋಕಾಯುಕ್ತರಿಗೆ ವರದಿ ನೀಡುತ್ತೇವೆ ಎಂದು ಜಿಲ್ಲಾ ಲೋಕಾಯುಕ್ತ ಎಸ್.ಪಿ ಆಂಟೊನಿ ಜಾನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.