ADVERTISEMENT

ಗೌರಿಬಿದನೂರು | ನಿವೇಶನದ ಅಳತೆಗೆ ಲಂಚ: ಸರ್ವೆಯರ್, ಸಹಾಯಕ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 13:51 IST
Last Updated 23 ಅಕ್ಟೋಬರ್ 2025, 13:51 IST
   

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ ಸಹಾಯಕ ರಾಜು ಗುರುವಾರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ತಾಲ್ಲೂಕಿನ ಹೊಸೂರು ಹೋಬಳಿ ಹಳೆ ಉಪ್ಪಾರಹಳ್ಳಿ ಗ್ರಾಮದ ಮುದ್ದು ಗಂಗಮ್ಮ, ಕರೇಕಲ್ಲಹಳ್ಳಿ ಗ್ರಾಮದಲ್ಲಿ ನಿವೇಶನ ಹೊಂದಿದ್ದಾರೆ. ಈ ನಿವೇಶನ ಅಳತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಸರ್ವೆ ಮಾಡಿಕೊಡಲು ಹರೀಶ್ ರೆಡ್ಡಿ ₹ 23 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹3 ಸಾವಿರ ಪಡೆದಿದ್ದರು. 

ನಗರದ ಮಧುಗಿರಿ ರಸ್ತೆಯ ನಂದಿನಿ ಹಾಲಿನ‌ ಕೇಂದ್ರದ ಬಳಿ‌ ಗುರುವಾರ ₹20 ಸಾವಿರ ಲಂಚ ಪಡೆಯುವ ವೇಳೆ ಸರ್ವೆಯರ್ ಮತ್ತು ಅವರ ಸಹಾಯಕರನ್ನು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. 

ADVERTISEMENT

‘ನಿವೇಶನದ ಮೌಲ್ಯ ₹65 ಸಾವಿರವಿದೆ. ಇಂತಹ ನಿವೇಶನದ ಅಳತೆಗೆ ₹23 ಸಾವಿರ ಲಂಚ ಕೇಳಿದ್ದಾರೆ’ ಎಂದು ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗುರು, ಸತೀಶ್, ಲಿಂಗರಾಜು, ನಾಗರಾಜು, ಚೌಡ ರೆಡ್ಡಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.