ADVERTISEMENT

ಕೃಷಿಯಲ್ಲಿ ನಷ್ಟ, ಹವಾನಿಯಂತ್ರಣದಲ್ಲಿ ಕೋಳಿ ಉತ್ಪಾದನೆ ಆರಂಭಿಸಿ ಲಾಭ ಗಳಿಸಿದ ರೈತ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 7:14 IST
Last Updated 21 ಜನವರಿ 2024, 7:14 IST
ಕರಿಗಾಂತ್ಮನಹಳ್ಳಿ ಬಳಿಯ ಹವಾನಿಯಂತ್ರಿತ ಕೋಳಿ ಫಾರಂ
ಕರಿಗಾಂತ್ಮನಹಳ್ಳಿ ಬಳಿಯ ಹವಾನಿಯಂತ್ರಿತ ಕೋಳಿ ಫಾರಂ   

ಗುಡಿಬಂಡೆ: ತಾಲ್ಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಗಾಂತ್ಮನಹಳ್ಳಿ ಗ್ರಾಮದ ಜಾಲಾರೆಡ್ಡಿ ಕುಟುಂಬ ಮೂರು ತಲೆಮಾರಿನಿಂದ ಕೃಷಿಯನ್ನೇ ಮುಖ್ಯ ಕಸುಬ ಮಾಡಿಕೊಂಡಿತ್ತು. ಆದರೆ ತಾಲ್ಲೂಕಿನಲ್ಲಿ ಮಳೆ ಕ್ಷೀಣಿಸಿ ಅಂತರ್ಜಲ ಕುಸಿಯಿತೊ ಕೃಷಿ ಕಷ್ಟ ಎನ್ನುವುದನ್ನು ಮನಗಂಡಿತು. 

ಸಾವಿರಾರು ಅಡಿ ಕೊಳವೆ ಬಾವಿಗಳಲ್ಲಿ ಕೊರೆಸಿದರು. ಒಂದು ವರ್ಷ ಕೃಷಿಗೆ ಬಳಕೆ ಮಾಡುವ ವೇಳೆಗೆ ಆ ಕೊಳವೆ ಬಾವಿ ಬರಿದಾಗುತ್ತಿತ್ತು. ಮತ್ತೊಂದು ಕೊಳವೆ ಬಾವಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತಿತ್ತ. ಇದನ್ನು ಅರಿತ ಜಾಲಾರೆಡ್ಡಿ ಅವರ ಅಶ್ವತ್ಥರೆಡ್ಡಿ ಕೋಳಿ ಸಾಕಾಣಿಗೆಗೆ ಮುಂದಾದರು. ಇದಕ್ಕಾಗಿ ಬ್ಯಾಂಕುಗಳಿಂದ ₹ 6 ಕೋಟಿ ಸಾಲ ಪಡೆದರು.

ಕೊರೊನಾದಿಂದ ಅಶ್ವತ್ಥರೆಡ್ಡಿ ಅವರು ಮೃತಪಟ್ಟ ನಂತರ ಅವರ ಹಿರಿಯ ಪುತ್ರ ರಾಜಾರೆಡ್ಡಿ ಫಾರಂ ಅನ್ನು ಮತ್ತಷ್ಟು ಬೆಳೆಸಿದರು. ಈ ಕೋಳಿ ಫಾರಂ ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ರೈತರು, ಉದ್ಯಮಿಗಳು ಭೇಟಿ ನೀಡುತ್ತಿದ್ದಾರೆ.

ADVERTISEMENT

 4 ಎಕರೆ ಪ್ರದೇಶದಲ್ಲಿ ಎರಡು ಹವಾನಿಯಂತ್ರಿತವಾಗಿ ಘಟಕಗಳನ್ನು ರೂಪಿಸಿದ್ದಾರೆ. ಇಲ್ಲಿ ಕೋಳಿಗಳನ್ನು ಮೊಟ್ಟೆಗಾಗಿ ಸಾಕಲಾಗುತ್ತಿದೆ. ಎರಡು ಫಾರಂಗಳಲ್ಲಿ 30 ಸಾವಿರ ಕೋಳಿಗಳು ಇವೆ. 45 ದಿನಗಳ ನಂತರ ಮೊಟ್ಟೆ ಬರುತ್ತದೆ.

ಮೊಟ್ಟೆ ಬರುವ ಸಮಯಕ್ಕೆ ಕೋಳಿಗಳ ಸಾವು, ಮೊಟ್ಟೆಗಳ ನಾ ಹೀಗೆ ನಾನಾ ಕಾರಣದಿಂದ ಶೇ 60 ರಷ್ಟು ಬೆಳೆ ಮಾತ್ರ ಕೈಗೆ ಸಿಗುತ್ತಿದೆ. 45 ದಿನಗಳ ನಂತರ ದಿನಕ್ಕೆ 18 ಸಾವಿರ ಮೊಟ್ಟೆ ಉತ್ಪಾದನೆ ಆಗುತ್ತದೆ. 5 ರಿಂದ 6 ತಿಂಗಳ ಕಾಲ ಇದೇ ಪ್ರಮಾಣದಲ್ಲಿ ಮೊಟ್ಟೆ ಉತ್ಪಾದನೆ ಆಗುತ್ತದೆ. ಕಂಪನಿಯವರು ಕೋಳಿ ಮರಿ, ಔಷದಿ, ಅಹಾರ ನೀಡುತ್ತಾರೆ. ಒಂದು ಮೊಟ್ಟೆಗೆ ₹ 4 ನೀಡಿ ಖರೀದಿಸುತ್ತಾರೆ. ಕೋಳಿಗಳು ಮೊಟ್ಟೆ ಹಾಕುವುದನ್ನು ನಿಲ್ಲಿಸಿದಾಗ ಕೋಳಿಗಳನ್ನು ಕಂಪನಿಯವರು ಕೊಂಡೊಯ್ಯುವರು.

‘ಕೋಳಿ ಫಾರಂ ನಿರ್ಮಾಣಕ್ಕಾಗಿ ₹ 6 ಕೋಟಿ ಸಾಲ ಪಡೆದಿದ್ದೇವೆ. 84 ತಿಂಗಳು ಕಾಲ ಬಡ್ಡಿ ಸಹಿತ ₹ 8.40 ಕೋಟಿ ಸಾಲ ಮರುಪಾವತಿಸಬೇಕು. ಈ ಹಣದಲ್ಲಿ ಎರಡು ಕೋಳಿ ಸಾಕಾಣಿಕೆಯ ಎಸಿ ಶೆಡ್‌ಗಳು,  ಒಂದು ಮೊಟ್ಟೆ ಶೇಖರಣಿ ಎಸಿ ಶೆಡ್, ಕಂಪನಿಯಿಂದ ಬರುವ ಅಹಾರ, ಔಷಧಿ ದಾಸ್ತು ಮಾಡಲು ಒಂದು ಶೆಡ್, ಕೆಲಸ ಮಾಡುವ 15 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲಾಗಿದೆ ಎಂದು ರಾಜಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ದಿನಕ್ಕೆ 18 ಸಾವಿರ ಮೊಟ್ಟೆ ಉತ್ಪಾದನೆ ಆಗುತ್ತದೆ. ಆರು ತಿಂಗಳ ಕಾಲ ಈ ಉತ್ಪಾದನೆ ದೊರೆಯುತ್ತದೆ. ಒಂದು ಮೊಟ್ಟೆಗೆ ₹ 4ಕ್ಕೆ ಮಾರಾಟ ಮಾಡುತ್ತೇವೆ. ಒಂದು ದಿನಕ್ಕೆ ₹ 72 ಸಾವಿರ  ಆದಾಯ ಬರುತ್ತದೆ. ಖರ್ಚು ವೆಚ್ಚ ಕಳೆದು ತಿಂಗಳಿಗೆ ₹ 30 ಸಾವಿರದಿಂದ ₹ 50 ಸಾವಿರ ಲಾಭ ದೊರೆಯುತ್ತದೆ’ ಎಂದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಕುಂಠಿತವಾಗಿ ಬರಗಾಲ ಪ್ರದೇಶವಾಗಿದೆ. ಯಾವುದೇ ಶಾಶ್ವತ ನೀರಾವರಿ ಸೌಲಭ್ಯಗಳು ಇಲ್ಲ. 10 ವರ್ಷದಿಂದ ಎತ್ತಿನ ಹೊಳೆ ನೀರು ಬರುತ್ತದೆ ಎಂದು ರೈತರು ಕನಸ ಕಾಣುತ್ತಿದ್ದಾರೆ. ನೀರು ಇಲ್ಲದ ಕಾರಣ ನಾವು ಪರ್ಯಾಯ ಉದ್ಯಮಗಳತ್ತ ಮುಖ ಮಾಡಿದೆವು. ಇಲ್ಲದಿದ್ದರೆ ಕೃಷಿಯನ್ನೇ ಮಾಡುತ್ತಿದ್ದೆವು ಎಂದು ಹೇಳಿದರು.

ಕೆ.ಎ.ರಾಜಾರೆಡ್ಡಿ

ಸಾಲ ತೀರಿದರೆ ಆದಾಯ ದ್ವಿಗುಣ ಕೃಷಿಯಿಂದ ಉತ್ತಮ ಬೆಳೆ ಬಂದರೂ ಸ್ಥಿರ ಬೆಲೆ ಸಿಗದೆ ರೈತರು ಪ್ರತಿಯೊಂದು ಬೆಳೆಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆಗಾಗಿ ಮಾಡಿದ ಸಾಲವನ್ನು ತೀರಿಲು ಸಾಧ್ಯವಾಗುತ್ತಿಲ್ಲ ಎಂದು ರಾಜಾರೆಡ್ಡಿ ತಿಳಿಸುವರು. ಕೃಷಿಯಿಂದ ಪದೇ ಪದೇ ನಷ್ಟಕ್ಕೆ ಒಳಾಗಾಗಿ ಕುಕ್ಕುಟೋದ್ಯಮದತ್ತ ಮುಂದಾದೆವು.  ಬ್ಯಾಂಕಿನ ಸಾಲ ಪೂರ್ಣವಾಗಿ ನಂತರ ಕೋಳಿ ಸಾಕಾಣಿಕೆ ಘಟಕಗಳು ಸುಸ್ಥಿತಿಯಲ್ಲಿ ಕೆಲವು ವರ್ಷಗಳು ಬಂದರೆ ಆಗ ರೈತನ ಆದಾಯ ದ್ವಿಗುಣವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.