ಚಿಂತಾಮಣಿ: ಲಕ್ಕಿ ಡ್ರಾದಲ್ಲಿ ಕಾರ್ ಬಂದಿದೆ, ನೋಂದಣಿ ಶುಲ್ಕವಾಗಿ ₹90 ಸಾವಿರ ಕಳುಹಿಸಿ ಎಂದು ಮಹಿಳೆಯನ್ನು ನಂಬಿಸಿ ಬ್ಯಾಂಕ್ ಖಾತೆ ಮೂಲಕವೇ ₹50,600 ಪಡೆದುಕೊಂಡು ವಂಚಿಸಲಾಗಿದೆ.
ಈ ಸಂಬಂಧ ತಾಲ್ಲೂಕಿನ ಹನುಮಯ್ಯಗಾರಿಹಳ್ಳಿಯ ಎಚ್.ಎಸ್.ಶ್ವೇತಾ ಅವರು ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ ನಾಪ್ ಡೀಲ್ ಪ್ಲಸ್ ಪ್ರೈವೇಟ್ ಲಿಮಿಟೆಡ್ ಎಂದು ಹೇಳಿಕೊಂಡು ಸೆ.9ರಂದು ನಾಲ್ಕು ಮೊಬೈಲ್ ಸಂಖ್ಯೆಗಳಿಂದ, ‘ಲಕ್ಕಿ ಡ್ರಾದಲ್ಲಿ ಕಾರು ಬಂದಿದೆ. ನೋಂದಣಿ ಶುಲ್ಕವಾಗಿ ₹90 ಸಾವಿರ ನೀಡಬೇಕು’ ಎಂದು ಕರೆ ಮಾಡಿ ತಿಳಿಸಿದ್ದರು.
ಅದರಂತೆ ಫೋನ್ ಪೇ ಖಾತೆಯ ಅವರು ತಿಳಿಸಿದ ಫೋನ್ ಪೇ ಖಾತೆಗೆ ₹7 ಸಾವಿರ, ಮತ್ತೆ 3 ಬಾರಿ ಐದೈದು ಸಾವಿರ, ₹13 ಸಾವಿರ, ₹5,600 ಹಾಗೂ ಕೊನೆಯದಾಗಿ ₹10 ಸಾವಿರದಂತೆ ಏಳು ಬಾರಿ, ₹50,600 ಜಮಾ ಮಾಡಿದ್ದಾರೆ. ನಂತರ ಪುನಃ ₹32,400 ಕಳುಹಿಸಿಕೊಡಿ ಎಂದು ಫೋನ್ ಮಾಡಿದ್ದರು. ನನ್ನ ಖಾತೆಯಲ್ಲಿ ಹಣ ಇಲ್ಲದಿರುವುದರಿಂದ ಕಳುಹಿಸಿಲ್ಲ’ ಎಂದು ಶ್ವೇತಾ ದೂರಿನಲ್ಲಿ ತಿಳಿಸಿದ್ದಾರೆ.
‘ನಂತರ ಅನುಮಾನಗೊಂಡು ಪತಿ ನರಸಿಂಹರೆಡ್ಡಿಗೆ ವಿಷಯ ತಿಳಿಸಿದೆ. ನರಸಿಂಹರೆಡ್ಡಿ ಹಣವನ್ನು ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರೆ. ಉಳಿದ ₹32,400 ಕಳುಹಿಸಿದ ನಂತರ ಪೂರ್ಣ ಹಣವನ್ನು ವಾಪಸ್ ಕೊಡುವುದಾಗಿ ಆರೋಪಿಗಳು ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದಾಗ ಸೋಮವಾರ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರೆ ಇದುವರೆಗೂ ಹಣ ನೀಡಿಲ್ಲ. ಹೀಗಾಗಿ ತಡವಾಗಿ ದೂರು ನೀಡಲಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.