ADVERTISEMENT

ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಜನಜೀವನಕ್ಕೆ ತಟ್ಟದ ಬಂದ್‌ ಬಿಸಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 8:54 IST
Last Updated 6 ಡಿಸೆಂಬರ್ 2020, 8:54 IST
ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಜನ ಬೆಂಬಲ ವ್ಯಕ್ತವಾಗಲಿಲ್ಲ.

ಎಲ್ಲ ತಾಲ್ಲೂಕುಗಳಲ್ಲಿಯೂ ಜನಜೀವನ ಎಂದಿನಂತಿತ್ತು. ನಸುಕಿನಿಂದಲೇ ವಾಹನ ಸಂಚಾರ ಸುಗಮವಾಗಿತ್ತು. ಹಾಲು, ಹಣ್ಣು, ತರಕಾರಿ, ಆರೋಗ್ಯ ಸೇವೆ, ಔಷಧಿ ಅಂಗಡಿಗಳು, ಪೆಟ್ರೋಲ್‌ ಬಂಕ್‌ಗಳು, ಹೊಟೇಲ್‌ಗಳು ಎಂದಿನಂತೆ ವಹಿವಾಟು ನಡೆಸಿದವು. ಎಲ್ಲ ಸೇವೆಗಳು ಸುಲಲಿತವಾಗಿ ಜನರಿಗೆ ತಲುಪಿದವು. ಹೀಗಾಗಿ, ಬಂದ್‌ನ ಚಿತ್ರಣವೇ ಎಲ್ಲಿಯೂ ಗೋಚರಿಸಲಿಲ್ಲ.

ಸಾರಿಗೆ ಸಂಚಾರದಲ್ಲೂ ಯಾವುದೇ ಅಡಚಣೆ ಇರಲಿಲ್ಲ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳು, ಆಟೊಗಳ ಸಂಚಾರ ಸಹಜವಾಗಿತ್ತು. ಬಂದ್‌ ಪ್ರಯುಕ್ತ ನಗರದ ಪ್ರಮುಖ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ADVERTISEMENT

ಕನ್ನಡ ಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಕೆ.ಲೋಕೇಶ್, ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ, ಕನ್ನಡ ವಿರೋಧಿ ಚಟುವಟಿಕೆ ನಡೆಸುವವರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಮತ ಪಡೆಯಲು ನಾಡು, ನುಡಿ ಹಿತ ಬಲಿ ಕೊಡಬಾರದು’ ಎಂದು ಹೇಳಿದರು.

‘ಕನ್ನಡಿಗರ ತೆರಿಗೆ ಹಣ ಕನ್ನಡಿಗರಿಗೋಸ್ಕರವೇ ಇರಬೇಕು. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಕಾರ್ಯವನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು. ಮರಾಠಾ ಅಭಿವೃದ್ಧಿ ನಿಗಮ ರಚನೆ ರದ್ದುಗೊಳಿಸುವ ಜತೆಗೆ ನಿಗಮಕ್ಕೆ ಮೀಸಲಿಟ್ಟ ಅನುದಾನವನ್ನು ಅತಿವೃಷ್ಟಿ, ನೆರೆಹಾವಳಿಯಲ್ಲಿ ನೊಂದ ರೈತರಿಗೆ ಪರಿಹಾರ ಕಲ್ಪಿಸಲು ಬಳಕೆ ಮಾಡಬೇಕು’ ಎಂದು ಆಗ್ರಹಿಸಿದರು.

ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ರವಿಕುಮಾರ್ ಮಾತನಾಡಿ, ‘ನಮ್ಮ ಅನೇಕ ನೆರೆ ರಾಜ್ಯಗಳಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ ಅಲ್ಲಿನ ಸರ್ಕಾರಗಳು ಕನ್ನಡಿಗರ ರಕ್ಷಣೆ ಮತ್ತು ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದರೆ, ನಮ್ಮ ಮುಖ್ಯಮಂತ್ರಿ ಮರಾಠರನ್ನು ಓಲೈಸಲು ಪ್ರಾಧಿಕಾರ ರಚನೆಗೆ ಮುಂದಾಗಿರುವುದು ಅಕ್ಷಮ್ಯ’ ಎಂದು ತಿಳಿಸಿದರು.

‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮರಾಠಿಗರಿಗೆ ಇನ್ನಷ್ಟು ಬಲ ತುಂಬಲು ರಾಜ್ಯ ಸರ್ಕಾರವೇ ಮುಂದಾಗಿರುವುದು ದುರದೃಷ್ಟಕರ. ಕನ್ನಡಿಗರ ಮೇಲೆ ಪದೇ ಪದೇ ಆಕ್ರಮಣ ಮಾಡುತ್ತಿರುವ ಎಂಇಎಸ್‌ನವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ, ಮರಾಠಿಗರ ಮತಗಳ ಆಸೆಗೆ ಪ್ರಾಧಿಕಾರ ರಚನೆಗೆ ಮುಂದಾಗಿರುವುದು ಖಂಡನೀಯ’ ಎಂದು ಹೇಳಿದರು.

‘ಇದು ಕನ್ನಡಿಗರಿಗೆ ದ್ರೋಹ ಬಗೆಯುವ ಮೂರ್ಖತನದ ನಿರ್ಧಾರ. ಬೆಳಗಾವಿಯಲ್ಲಿ ಸದಾ ಕ್ಯಾತೆ ತೆಗೆಯುವ ಜನರಿಗೆ ಅಭಿವೃದ್ಧಿಯ ಹೆಸರಿನಲ್ಲಿ ₹50 ಕೋಟಿ ನೀಡಿರುವುದು ನೋಡಿದರೆ, ಮತಗಳಿಗಾಗಿ ಸರ್ಕಾರ ಏನನ್ನು ಬೇಕಾದರೂ ಅಡವಿಡಲು ಸಿದ್ಧವಿದೆ ಎಂಬುದು ತಿಳಿಯುತ್ತದೆ. ಸರ್ಕಾರ ಈಗಲಾದರೂ ವಿವೇಚನೆಯಿಂದ ನಡೆದುಕೊಳ್ಳಲಿ. ಇಲ್ಲದಿದ್ದರೆ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.