
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿರುವ ಕಾರ್ಮಿಕ ಇಲಾಖೆಗೆ ಲೋಕಾಯುಕ್ತ ಎಸ್‌ಪಿ ಸ್ನೇಹ ಪಿ.ವಿ ಅವರು ಮಂಗಳವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ, ಕಚೇರಿ ಸಂಬಂಧಿಸಿದ ಕಡತ, ಹಾಜರಾತಿ ಪುಸ್ತಕ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಹೊರಗುತ್ತಿಗೆ ನೌಕರರು, ಕಾರ್ಮಿಕರ ಮಾಹಿತಿ, ಆರ್‌ಟಿಐಗೆ ಸಂಬಂಧಿಸಿದ ಮಾಹಿತಿ, ಗ್ಯಾಸ್ ಏಜೆನ್ಸಿ ವಿರುದ್ಧ ದಾಖಲಿಸಿದ ಪ್ರಕರಣಗಳು, ಕಟ್ಟಡ ಕಾರ್ಮಿಕರ ವಿವಾಹ ನೋಂದಣಿಗೆ ಸಹಾಯಧನದ ಬಗ್ಗೆ ಪರಿಶೀಲಿಸಿದರು.
ಬಳಿಕ ಬಾಲ ಕಾರ್ಮಿಕರ ಸಹಾಯವಾಣಿ 1098, ಕಾರ್ಮಿಕರ ಸಹಾಯವಾಣಿ 155214 ಸಂಖ್ಯೆಗೆ ಲೋಕಾಯುಕ್ತ ಎಸ್‌ಪಿ ಅವರೇ ಕರೆ ಮಾಡಿದರು. ಈ ವೇಳೆ ಸಂಪರ್ಕವಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಸಂಚಾರಿ ಕಾರ್ಮಿಕ ಸೇವಾ ಕೇಂದ್ರದ ವಾಹನ ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿ ಶ್ರೀಕಾಂತ್ ನಾಯ್ಕ್, ಕಾರು ಚಾಲಕ ಕಿರಣಕುಮಾರ್ ಸಮರ್ಪಕ ಮಾಹಿತಿ ಒದಗಿಸಲಿಲ್ಲ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ಕಾರ್ಮಿಕರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಕಾರ್ಮಿಕ ಅಧಿಕಾರಿಗಳಿಗೆ ಲೋಕಾಯುಕ್ತ ಎಸ್‌ಪಿ ಸೂಚಿಸಿದರು.
ಲೋಕಾಯುಕ್ತ ಎಸ್.ಪಿ ಸ್ನೇಹ ಅವರ ಜೊತೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಂದೀಪ್ ಕುಮಾರ್ ಬಿ.ಎನ್, ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಎಚ್.ಆರ್., ಕಾರ್ಮಿಕ ನಿರೀಕ್ಷಿಕ ಪ್ರದೀಪ್ ಎಂ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.