ADVERTISEMENT

ಜನರಿಗೆ ಯೋಜನೆಗಳ ಅರಿವು ಮೂಡಿಸಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ.ವಿ. ಟೆಂಗಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 14:25 IST
Last Updated 2 ಸೆಪ್ಟೆಂಬರ್ 2020, 14:25 IST
ಸಭೆಯಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ.ವಿ. ಟೆಂಗಳಿ ಅವರು ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.
ಸಭೆಯಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ.ವಿ. ಟೆಂಗಳಿ ಅವರು ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.   

ಚಿಕ್ಕಬಳ್ಳಾಪುರ: ‘ಸಮಾಜದಲ್ಲಿನ ಕಟ್ಟಕಡೆಯ ಫಲಾನುಭವಿಗೂ ನಿಗಮದ ಯೋಜನೆಗಳು ತಲುಪಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ನಿಗಮದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ.ವಿ. ಟೆಂಗಳಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಬುಧವಾರ ನಡೆದ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿನ ಪ್ರತಿಯೊಬ್ಬರಿಗೂ ಇಲಾಖೆಯ ಯೋಜನೆಗಳ ಬಗ್ಗೆ ಅರಿವಿದ್ದಾಗ ಮಾತ್ರ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಲು ಸಾಧ್ಯ. ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಅಗತ್ಯ ಫಲಾನುಭವಿಗಳಿಗೆ ಸಹಾಯ ಮಾಡಿ ಇನ್ನು ಹೆಚ್ಚಿನ ಕಾರ್ಯಕ್ಷಮತೆಯಲ್ಲಿ ತೊಡಗಬೇಕು’ ಎಂದು ಸೂಚಿಸಿದರು.

ADVERTISEMENT

‘ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ ನಿರ್ಗತಿಕ ಮಹಿಳೆಯರು, ಅಬಲೆಯರು, ಲಿಂಗತ್ವ ಅಲ್ಪಾಸಂಖ್ಯಾತರು, ಆಶಕ್ತ ಮಹಿಳೆಯರು, ವಿಧವೆಯರು ಸೇರಿದಂತೆ ಅನೇಕ ಮಹಿಳೆಯರು ಸಾಲ ಪಡೆದುಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಮಹಿಳೆಯರು ಪಡೆದುಕೊಂಡ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿಸಿದರೆ ಇನ್ನೊಬ್ಬ ಮಹಿಳೆಗೆ ನಿಗಮ ಸಹಾಯ ಮಾಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಮತ್ತು ಗೌರವದಿಂದ ಬದುಕಲು ಸರ್ಕಾರದ ಯೋಜನೆಗಳು ಅಗತ್ಯವಾಗಿಬೇಕು ಆದರಿಂದ ಯೋಜನೆಗಳ ಮೂಲಕ ಆದಾಯ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದ ಕಟ್ಟಕಡೆಯ ಮಹಿಳೆಗೂ ಸರ್ಕಾರದ ಸವಲತ್ತುಗಳು ಸಿಗಲು ನಿಗಮದಿಂದ ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದರು.

ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಶೋಭಾ ಮಾತನಾಡಿ, ‘ಮಹಿಳೆಯರು ಸ್ವ-ಉದ್ಯೋಗದಲ್ಲಿ ತೊಡಗಿಕೊಳ್ಳಲು ಗರಿಷ್ಠ 3 ಲಕ್ಷದವರಿಗೆ ಸಾಲ ಮತ್ತು ಸಹಾಯಧನ ನೀಡುವ ಉದ್ಯೋಗಿನಿ ಯೋಜನೆ ಅಡಿ 2019-20ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ 73 ಫಲಾನುಭವಿಗಳಿಗೆ ₹76.60 ಲಕ್ಷ ಸಹಾಯಧನ ವಿತರಿಸಲಾಗಿದೆ’ ಎಂದು ಹೇಳಿದರು.

‘ಸ್ತ್ರೀಶಕ್ತಿ ಸಂಘಗಳಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ₹2 ಲಕ್ಷ ಬಡ್ಡಿ ರಹಿತ ಸಾಲವನ್ನು ಕಿರುಸಾಲ ಯೋಜನೆಯಡಿಯಲ್ಲಿ ನಿಗಮದಿಂದ ನೀಡಲಾಗುತ್ತಿದ್ದು, 20 ಕಂತುಗಳಲ್ಲಿ ₹10,000 ದಂತೆ ಸಾಲ ಮರುಪಾವತಿ ಮಾಡಬೇಕು. 2019-20ನೇ ಸಾಲಿನಲ್ಲಿ 4 ಸ್ತ್ರೀಶಕ್ತಿ ಸಂಘಗಳಿಗೆ ₹8 ಲಕ್ಷಗಳ ಸಾಲ ನೀಡಲಾಗಿದೆ’ ಎಂದರು.

‘ಬೀದಿಬದಿ ವ್ಯಾಪಾರಿಗಳು ಹೆಚ್ಚಿನ ಬಡ್ಡಿ ನೀಡಿ ಸಾಲ ಪಡೆದು ಶೋಷಣೆಗೊಳಗಾಗುವುದನ್ನು ತಪ್ಪಿಸಲು ನಿಗಮದಿಂದ ನೇರವಾಗಿ ಫಲಾನುಭವಿಗಳಿಗೆ ಸಮೃದ್ಧಿ ಯೋಜನೆಯಡಿಯಲ್ಲಿ ₹10000 ಪ್ರೋತ್ಸಾಹಧನವನ್ನು ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 74 ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಕಲ್ಪಿಸುವ ಚೇತನಾ ಯೋಜನೆ ಅಡಿಯಲ್ಲಿ ಲೈಂಗಿಕ ವೃತ್ತಿ ನಿರತ ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು ಸಬ್ಸಿಡಿ ದರದಲ್ಲಿ ₹50 ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ6 ಫಲಾನುಭವಿಗಳಿಗೆ ಸಾಲ ಹಾಗೂ ಸಹಾಯಧನ ನೀಡಲಾಗಿದೆ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ನಾರಾಯಣಸ್ವಾಮಿ, ಶಿಶು ಅಭಿವೃದ್ಧಿ ಘಟಕದ ಅಧಿಕಾರಿ ಮಹಮ್ಮದ್ ಉಸ್ಮಾನ್ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.