ADVERTISEMENT

ಮಂಚೇನಹಳ್ಳಿ ಬಂದ್ ಯಶಸ್ವಿ

ಕನಗಾನಕೊಪ್ಪದಲ್ಲಿ ಗಣಿಗಾರಿಕೆ ಪರವಾನಿ ರದ್ದುಗೊಳಿಸಲು ರೈತ ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 13:57 IST
Last Updated 28 ಏಪ್ರಿಲ್ 2025, 13:57 IST
ಬಂದ್ ಅಂಗವಾಗಿ ಮಂಚೇನಹಳ್ಳಿಯಲ್ಲಿ ವಹಿವಾಟುಗಳು ನಡೆದೇ ಇರುವುದು
ಬಂದ್ ಅಂಗವಾಗಿ ಮಂಚೇನಹಳ್ಳಿಯಲ್ಲಿ ವಹಿವಾಟುಗಳು ನಡೆದೇ ಇರುವುದು   

ಮಂಚೇನಹಳ್ಳಿ: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ವೈ.ಎ ನಾರಾಯಣ ಸ್ವಾಮಿ ಅವರ ಪತ್ನಿ ಉಷಾ ನಂದಿನಿ ಅವರಿಗೆ ತಾಲ್ಲೂಕಿನ ಕನಗಾನಕೊಪ್ಪ ಗ್ರಾಮದ ಬಳಿ ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕು. ರೈತರ ಮೇಲೆ ಗುಂಡು ಹಾರಿಸಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಸೋಮವಾರ ಕರೆ ನೀಡಿದ್ದ ಮಂಚೇನಹಳ್ಳಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಲ್ಲೂಕು ಕೇಂದ್ರ ಮಂಚೇನಹಳ್ಳಿಯಲ್ಲಿ ಬೆಳಿಗ್ಗೆಯಿಂದ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಆಸ್ಪತ್ರೆಗಳು, ಮೆಡಿಕಲ್‌ ಸ್ಟೋರ್‌ಗಳು ಮಾತ್ರ ತೆರೆದಿದ್ದವು. ಸದಾ ವ್ಯಾಪಾರ ವಹಿವಾಟಿನಿಂದ ಗಿಜಿಗುಡುತ್ತಿದ್ದ ಪಟ್ಟಣದಲ್ಲಿ ಯಾವುದೇ ವಹಿವಾಟು ಇರಲಿಲ್ಲ. ಸಂಚಾರ ವ್ಯವಸ್ಥೆ ಮಾತ್ರ ಯಥಾಪ್ರಕಾರವಿತ್ತು.

ಬಸ್ ನಿಲ್ದಾಣ ಸಮೀಪ ನಡೆದ ಬಹಿರಂಗ ಸಮಾವೇಶದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಭಾಗಿಯಾಗಿದ್ದರು. ಕಾಂಗ್ರೆಸ್, ಬಿಜೆಪಿ ಮುಖಂಡರೂ ಪಾಲ್ಗೊಂಡು ಗಣಿಗಾರಿಕೆಯ ವಿರುದ್ಧ ರಣಕಹಳೆ ಮೊಳಗಿಸಿದರು.

ADVERTISEMENT

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿ, ಕಲ್ಲುಗಣಿಗಾರಿಕೆಗೆ ಅಕ್ರಮವಾಗಿ ರಸ್ತೆ ನಿರ್ಮಿಸಲು ಮುಂದಾಗಿದ್ದವರು ಗೂಂಡಾಗಿರಿ ಮೂಲಕ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಮಂಚೇನಹಳ್ಳಿಯು ಬಯಲುಸೀಮೆಯ ಮಲೆನಾಡು ಎನಿಸಿದೆ. ಇಂತಹ ಕಡೆ ಬೆಟ್ಟಗುಡ್ಡಗಳ ಪರಿಸರ ನಾಶ ಮಾಡಬಾರದು ಎಂದರು.

ಗಣಿಗಾರಿಕೆಯ ವಿರುದ್ಧ ಎರಡು ವರ್ಷಗಳಿಂದ ರೈತ ಮುಖಂಡ ಲಕ್ಷ್ಮಿನಾರಾಯಣ್ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಕಾನೂನು ಉಲ್ಲಂಘಿಸಿ ಗಣಿಗಾರಿಕೆಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ಕಿಡಿಕಾರಿದರು.

ರೈತರ ವಿರೋಧ ಇದ್ದರೂ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ರೈತ ಹೋರಾಟಗಾರರ ಅಣೆಗೆ ಗನ್ ಇಟ್ಟು ಹೆದರಿಸುವುದನ್ನು ಯಾರೂ ಒಪ್ಪುವುದಿಲ್ಲ. ಈ ಬಗ್ಗೆ ಗೃಹಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ತನಿಖೆಗೆ ಆದೇಶಿಸಬೇಕು. ಗಣಿಗಾರಿಕೆಯನ್ನು ರದ್ದುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಮಾತನಾಡಿ, ಕ್ರಷರ್‌ ಮಾಡುವುದು ತಪ್ಪಲ್ಲ. ಆದರೆ ಅದು ಎಲ್ಲಿ ಮಾಡಬೇಕು ಎನ್ನುವುದು ಮುಖ್ಯ. ಬೆಂಗಳೂರಿನಿಂದ ಗೂಂಡಾಗಳನ್ನು ಕರೆ ತಂದು ಇಲ್ಲಿನ ರೈತರ ಮೇಲೆ ಗುಂಡು ಹಾರಿಸುತ್ತಾರೆ. ಇದು ಬಿಹಾರ ಅಲ್ಲ ಎಂದು ಕಿಡಿಕಾರಿದರು.

ರೈತ ರವಿ ಮೇಲೆ ಗುಂಡು ಹಾರಿಸಿದ ವ್ಯಕ್ತಿಗೆ ಕಠಿಣ ಶಿಕ್ಷೆ ಆಗಬೇಕು. ಆತ್ಮಸಾಕ್ಷಿ ಇರುವವರನ್ನು ಹಣಕೊಟ್ಟು ಖರೀದಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ತಾರ್ಕಿಕ ಅಂತ್ಯ ಕಾಣಿಸುತ್ತೇವೆ ಎಂದರು.

ರೈತ ಸಂಘದ ಮುಖಂಡರಾದ ಎಂ.ಆರ್.ಲಕ್ಷ್ಮಿನಾರಾಯಣ್, ಲಕ್ಷ್ಮಿನಾರಾಯಣ ರೆಡ್ಡಿ, ಜಿ.ಜಿ  ನಾರಾಯಣಸ್ವಾಮಿ, ಸುಷ್ಮಾ ಶ್ರೀನಿವಾಸ್, ಮುಖಂಡರಾದ ಸುಬ್ಬಾರೆಡ್ಡಿ, ಪಿ.ಎನ್.ಪ್ರಕಾಶ್, ನಾರಾಯಣಸ್ವಾಮಿ, ಜಿ.ವಿ ರಾಜಶೇಖರ್, ಬಾಲಕೃಷ್ಣ ಹಾಗೂ ಸಂಘಟನೆಗಳ ಮುಖಂಡರು ಬಂದ್‌ನಲ್ಲಿ ಪಾಲ್ಗೊಂಡಿದ್ದರು. 

ಮಂಚೇನಹಳ್ಳಿ ತಾಲ್ಲೂಕಿನ ಕನಗಾನಕೊಪ್ಪದಲ್ಲಿ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ದಾರಿ ಮಾಡುವ ವಿಚಾರವಾಗಿ ರೈತರು ಮತ್ತು ಗಣಿಗಾರಿಕೆ ನಡೆಸುವವರ ಕಡೆಯವರ ನಡುವೆ ಜಟಾಪಟಿ ನಡೆದಿತ್ತು. ಆಗ ಗಣಿಗಾರಿಕೆ ಕಡೆಯ ಸಕಲೇಶ್ ಎಂಬಾತ ರೈತ ರವಿಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ್ದ. ರೈತ ರವಿಕುಮಾರ್ ಅವರ ಎಡಗಾಲಿನ ತೊಡೆಗೆ ಗುಂಡು ತಗುಲಿತ್ತು. ಪ್ರಕರಣ ಸಂಬಂಧ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಖಂಡಿಸಿ ಮತ್ತು ಗಣಿಗಾರಿಕೆ ಪರವಾನಗಿ ರದ್ದುಗೊಳಿಸಲು ಆಗ್ರಹಿಸಿ ಸೋಮವಾರ ಮಂಚೇನಹಳ್ಳಿ ಬಂದ್‌ಗೆ ಕರೆ ನೀಡಲಾಗಿತ್ತು.

ಮಂಚೇನಹಳ್ಳಿ ಬಂದ್‌ನಲ್ಲಿ ಪಾಲ್ಗೊಂಡಿದ್ದ ಜನರು

ನಿಯಮ ಮೀರಿದ್ದರೆ ಅನುಮತಿ ರದ್ದು

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರೈತ ಮುಖಂಡರ ಅಹವಾಲು ಆಲಿಸಿದರು. ‘ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ವಕೀಲರು ಹಾಗೂ ವಿವಿಧ ಸಂಘಟನೆಯವರು ಪ್ರತಿಭಟನೆ ನಡೆಸಿ ಗಣಿಗಾರಿಕೆ ಪರವಾನಗಿ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ಮಂಜೂರು ಮಾಡಿರುವ ರೀತಿ ಸರಿಯಾಗಿಲ್ಲ. ಮತ್ತೆ ಪರಿಶೀಲಿಸಬೇಕು ಎಂದಿದ್ದಾರೆ ಎಂದು ಹೇಳಿದರು. ಇಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಮತ್ತೆ ಅಧಿಕಾರಿಗಳನ್ನು ಕಳುಹಿಸಿ ಸ್ಥಳ ಪರಿಶೀಲಿಸಲಾಗುವುದು. ಈ ಹಿಂದೆ ಅನುಮತಿ ನೀಡುವಾಗ ನಿಯಮಗಳನ್ನು ಮೀರಿದ್ದರೆ ನಿರ್ದಾಕ್ಷ್ಯವಾಗಿ ಕ್ರಮವಹಿಸಲಾಗುವುದು. ಗಣಿಗಾರಿಕೆ ಅನುಮತಿ ರದ್ದುಗೊಳಿಸಲಾಗುವುದು ಎಂದು ಭರವಸೆ ನೀಡಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.